ತಿರುವನಂತಪುರ: ಕೇರಳದಲ್ಲಿ ಬುಧವಾರದವರೆಗೆ (ಮೇ 18) ಭಾರೀ ಮಳೆಯಾಗುವ ಸಾಧ್ಯತೆಯಿದೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈಗಾಗಲೇ ದಕ್ಷಿಣ ಮತ್ತು ಮಧ್ಯ ಕೇರಳದಲ್ಲಿ ಶನಿವಾರದಿಂದಲೇ ಬಿರುಗಾಳಿ ಸಹಿತ ಮಳೆ ಆರಂಭವಾಗಿದೆ. ತಿರುವನಂತಪುರ, ಕೊಲ್ಲಂ, ಪತ್ತನಿಂತಿಟ್ಟ, ಕೊಟ್ಟಾಯಂ ಮತ್ತು ಇಡುಕ್ಕಿ ಜಿಲ್ಲೆಯಲ್ಲಿ ಭಾರೀ ಮಳೆಯಿಂದಾಗಿ ನದಿ, ಕಾಲುವೆಗಳು ತುಂಬಿ ಹರಿಯುತ್ತಿವೆ. ರಸ್ತೆಗಳಲ್ಲಿ ನೀರು ನಿಂತಿದ್ದು, ಸಂಚಾರ ಅಸ್ತವ್ಯವಸ್ತಗೊಂಡಿದೆ. ಪೂನ್ಜಾರ್ನಲ್ಲಿ ದಾಖಲೆ ಪ್ರಮಾಣದ ಮಳೆಯಾಗಿದ್ದು, ಪೆರಿನ್ಗುಲಮ್, ಆದಿವಾರಮ್ ಪ್ರದೇಶಗಳಲ್ಲಿ ಪ್ರವಾಹ ಭೀತಿ ಆವರಿಸಿದೆ.
ಹವಾಮಾನಕ್ಕೆ ಸಂಬಂಧಿಸಿದ ಮತ್ತಷ್ಟು ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ
ಎರುಮೇಲಿ-ಮುಂಡಕ್ಕಯಮ್ ಪ್ರದೇಶಗಳಲ್ಲಿ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ. ತಿರುವನಂತಪುರದಲ್ಲಿ ಮನೆ ಗೋಡೆ ಕುಸಿದು ಇಬ್ಬರು ಮಕ್ಕಳು ಸೇರಿ ಒಂದೇ ಕುಟುಂಬದ ನಾಲ್ವರು ಗಾಯಗೊಂಡಿದ್ದಾರೆ. ಕೊಟ್ಟಾಯಂ ಜಿಲ್ಲೆಯ ಪೂರ್ವ ಭಾಗದಲ್ಲಿ ಮಳೆ ವ್ಯಾಪಕವಾಗಿ ಸುರಿಯುತ್ತಿದೆ. ಮುಂದಕ್ಕಯಂ ನದಿಯಲ್ಲಿ ನೀರಿನ ಮಟ್ಟ ಒಂದೇ ಸಮನೆ ಹೆಚ್ಚಾಗುತ್ತಿದೆ. ಕಂಜಿರಪ್ಪಲ್ಲಿ-ಎರಟ್ಟುಪೆಟ್ಟ ರಸ್ತೆಗಳಲ್ಲಿ ಪ್ರವಾಹದ ನೀರು ಹರಿಯುತ್ತಿದೆ. ಹಲವು ಮನೆಗಳು ಮುಳುಗಿವೆ. ಪತ್ತಿನಂತಿಟ್ಟ ಜಿಲ್ಲೆಯಲ್ಲಿ ಪಂಪಾ, ಅಚನ್ಕೊವಿಲ್ ಮತ್ತು ಮಣಿಮಾಲಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಕಕ್ಕಿ-ಅನತೋಡು ಜಲಾಶಯದಿಂದ ನೀರು ಹೊರಬಿಡಲು ನಿರ್ಧರಿಸಲಾಗಿದೆ.
ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ವಾಯುಭಾರ ಕುಸಿತವೇ ಮಳೆಗೆ ಕಾರಣ ಎಂದು ಹವಾಮಾನ ಇಲಾಖೆ ಹೇಳಿದೆ. ತಿರುವನಂತಪುರ, ಕೊಲ್ಲಂ, ಪತ್ತಿನಂತಿಟ್ಟ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ಅಲಪುಳ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ತ್ರಿಶೂರ್, ಮಲಪ್ಪುರಂ, ಕೊಯಿಕ್ಕೋಡ್, ವಯನಾಡ್ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
Published On - 3:34 pm, Sun, 15 May 22