ಪಕ್ಕಾ ಬೂಟಾಟಿಕೆ Vs ನಿಮ್ಮನ್ನು ಸೋಲಿಸ್ತೇವೆ: ತೆಲಂಗಾಣದಲ್ಲಿ ಕವಿತಾ-ಅಮಿತ್ ಶಾ ಆರೋಪ, ವ್ಯಂಗ್ಯ, ಪ್ರತಿಜ್ಞೆ
2023ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ತೆಲಂಗಾಣದಲ್ಲಿ ಬಿಜೆಪಿ ಚುನಾವಣೆ ಸಿದ್ಧತೆ ಚುರುಕುಗೊಳಿಸಿದೆ.
ಹೈದರಾಬಾದ್: ದಕ್ಷಿಣ ಭಾರತದಲ್ಲಿ ಕರ್ನಾಟಕದೊಂದಿಗೆ ಮತ್ತೊಂದು ರಾಜ್ಯದಲ್ಲಿ ಅಧಿಕಾರಕ್ಕೆ ಬರಬೇಕು ಎಂದು ಸಿದ್ಧತೆ ಮಾಡಿಕೊಳ್ಳುತ್ತಿರುವ ಬಿಜೆಪಿಗೆ ತೆಲಂಗಾಣ (Telangana Elections 2023) ಆಶಾದಾಯಕವಾಗಿ ಕಾಣಿಸುತ್ತಿದೆ. 2023ರಲ್ಲಿ ವಿಧಾನಸಭೆ ಚುನಾವಣೆ ಎದುರಿಸಲಿರುವ ತೆಲಂಗಾಣದಲ್ಲಿ ಬಿಜೆಪಿ ಚುನಾವಣೆ ಸಿದ್ಧತೆ ಚುರುಕುಗೊಳಿಸಿದೆ. ತೆಲಂಗಾಣದ ಮಟ್ಟಿಗೆ ಇಂದಿಗೂ ಪ್ರಭಾವ ಉಳಿಸಿಕೊಂಡಿರುವ ಆಡಳಿತಾರೂಢ ತೆಲಂಗಾಣ ರಾಷ್ಟ್ರ ಸಮಿತಿಯ (ಟಿಆರ್ಎಸ್) ನಾಯಕ ಮತ್ತು ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಕೆಸಿಆರ್) ಬಿಜೆಪಿ ಆಕಾಂಕ್ಷೆಗಳಿಗೆ ತಡೆಯೊಡ್ಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಈ ನಡುವೆ ನಿನ್ನೆಯಷ್ಟೇ (ಮೇ 14) ತೆಲಂಗಾಣಕ್ಕೆ ಭೇಟಿ ನೀಡಿದ್ದ ಅಮಿತ್ ಶಾ ಚುನಾವಣಾ ಕದನಕ್ಕೆ ರಣಕಹಳೆ ಮೊಳಗಿಸಿದ್ದಾರೆ.
ತೆಲಂಗಾಣದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
ಸರಣಿ ಟ್ವೀಟ್ ಮೂಲಕ ಪ್ರಶ್ನೆ ಕೇಳಿದ ಕವಿತಾ
ಅಮಿತ್ ಶಾ ಭೇಟಿಯ ವೇಳೆ ಸರಣಿ ಟ್ವೀಟ್ ಮಾಡಿರುವ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ರಾಜಶೇಖರ್ ಪುತ್ರಿ ಕವಿತಾ, ‘ತೆಲಂಗಾಣ ಬಗೆಗೆ ಬಿಜೆಪಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮುಗಿಲು ಮುಟ್ಟಿರುವ ಹಣದುಬ್ಬರ, ನಿರುದ್ಯೋಗದಿಂದ ಜನರು ಕಂಗಾಲಾಗಿದ್ದಾರೆ. ಇಂಧನ ಬೆಲೆ ತಗ್ಗಿಸಲು ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಿಜೆಪಿ ಆಡಳಿತದಲ್ಲಿ ದಾಖಲೆ ಪ್ರಮಾಣದಲ್ಲಿ ಕೋಮು ಗಲಭೆಗಳು ವರದಿಯಾಗಿವೆ’ ಎಂದು ದೂರಿದ್ದಾರೆ.
ತೆಲಂಗಾಣಕ್ಕೆ ಐಐಟಿ ಅಥವಾ ಐಐಎಂನಂಥ ಯಾವುದೇ ಸಂಸ್ಥೆಯನ್ನು ಕಳೆದ 8 ವರ್ಷಗಳಲ್ಲಿ ಏಕೆ ಮಂಜೂರು ಮಾಡಲಿಲ್ಲ? ನೀತಿ ಆಯೋಗವು ಶಿಫಾರಸು ಮಾಡಿದ್ದರೂ ₹ 24,000 ಕೋಟಿ ನೀಡಲಿಲ್ಲ ಏಕೆ? ಪಕ್ಕದ ಕರ್ನಾಟಕದಲ್ಲಿ ನೀರಾವರಿ ಕಾಮಗಾರಿಗಳಿಗೆ ರಾಷ್ಟ್ರೀಯ ಯೋಜನೆಯ ಮಾನ್ಯತೆ ನೀಡಲಾಗಿದೆ. ಆದರೆ ತೆಲಂಗಾಣದಲ್ಲಿ ಏಕೆ ಯಾವುದೇ ಯೋಜನೆಗೆ ಇಂಥ ಮಾನ್ಯತೆ ಕೊಟ್ಟಿಲ್ಲ ಎಂದು ಟೀಕಿಸಿದ್ದಾರೆ.
ಚುನಾವಣೆ ಭರವಸೆ ಮರೆತ ಕೆಸಿಆರ್: ಅಮಿತ್ ಶಾ ಟೀಕೆ
ತಮ್ಮ ಭೇಟಿಯ ವೇಳೆ ತೆಲಂಗಾಣ ಮುಖ್ಯಮಂತ್ರಿ ಕೆ.ಸಿ.ಚಂದ್ರಶೇಖರ್ ರಾವ್ ಅವರ ಆಡಳಿತವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಟುವಾಗಿ ಟೀಕಿಸಿದರು. ‘ಹೈದರಾಬಾದ್ನಲ್ಲಿ ನಿಜಾಮ್ (ಮುಖ್ಯಮಂತ್ರಿ) ಬದಲಿಸಲೆಂದು ಬಿಜೆಪಿಯು ಪ್ರಜಾ ಸಂಗ್ರಾಮ ಯಾತ್ರೆ ಆರಂಭಿಸಿದೆ. ಕೆಸಿಆರ್ ಸರ್ಕಾರವು ಚುನಾವಣೆ ಭರವಸೆಗಳನ್ನು ಈಡೇರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಈ ಯಾತ್ರೆಯು ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಬೇಕು ಎನ್ನುವ ಉದ್ದೇಶ ಹೊಂದಿಲ್ಲ. ಕುಟುಂಬ ಆಡಳಿತಕ್ಕೆ ಕೊನೆ ಹಾಡುವ ಉದ್ದೇಶ ಹೊಂದಿದೆ’ ಎಂದು ಸಾರಿ ಹೇಳಿದರು.
‘ದಲಿತರು ಮತ್ತು ಬುಡಕಟ್ಟು ಸಮುದಾಯಕ್ಕೆ ನೀಡಿದ್ದ ಯಾವುದೇ ಭರವಸೆಯನ್ನು ಟಿಆರ್ಎಸ್ ಪಕ್ಷವು ಈಡೇರಿಸಿಲ್ಲ. ಕೋಟ್ಯಂತರ ರೂಪಾಯಿ ಅವ್ಯವಹಾರ ನಡೆದಿದೆ. ಮಾತುತಪ್ಪುವವರಿಗೆ ಪಾಠ ಕಲಿಸುತ್ತೇವೆ. ಯಾರೋ ಜ್ಯೋತಿಷಿಯ ಮಾತು ಕೇಳಿ ಈ ಸಿಎಂ ಸಚಿವಾಲಯಕ್ಕೆ ಹೋಗುವುದನ್ನೇ ಬಿಟ್ಟಿದ್ದಾರೆ. ಅಲ್ಲಿಗೆ ಹೋದರೆ ಅಧಿಕಾರ ಕಳೆದುಕೊಳ್ಳಬೇಕಾಗುತ್ತವೆ ಎನ್ನುವುದು ಇವರ ಭಯ. ಇವರು ಅಲ್ಲಿಗೆ ಹೋದರೂ, ಹೋಗದಿದ್ದರೂ ಮುಂದಿನ ಚುನಾವಣೆಯಲ್ಲಿ ರಾಜ್ಯದ ಯುವಜನರು ಟಿಆರ್ಎಸ್ ಅನ್ನು ಅಧಿಕಾರದಿಂದ ಕೆಳಗಿಳಿಸುವುದು ನಿಶ್ಚಿತ’ ಎಂದು ವ್ಯಂಗ್ಯವಾಡಿದರು. ಮುಖ್ಯಮಂತ್ರಿ ಕೆಸಿಆರ್ ಅವರನ್ನು ಅಧಿಕಾರದಿಂದ ಕೆಳಗಿಳಿಸುವುದು ನಮ್ಮ ಉದ್ದೇಶ’ ಎಂದು ಹೇಳಿದರು.
‘ಟಿಆರ್ಎಸ್ ಪಕ್ಷದ ಚಿಹ್ನೆ ವಾಹನವಾಗಿದೆ. ಆದರೆ ಈ ವಾಹನದ ಸ್ಟೇರಿಂಗ್ ಓವೈಸಿ ಬಳಿಯಿದೆ. ಕೇಂದ್ರ ಸರ್ಕಾರವು ಜಾರಿಗೊಳಿಸುವ ಯೋಜನೆಗಳ ಹೆಸರು ಬದಲಿಸುವುದು ಹೊರತುಪಡಿಸಿದರೆ ಕೆಸಿಆರ್ ಸಾಧನೆ ಶೂನ್ಯ’ ಎಂದು ವ್ಯಂಗ್ಯವಾಡಿದರು.
Published On - 12:08 pm, Sun, 15 May 22