ನವದೆಹಲಿ: ಇಲ್ಲಿನ ಶಹದಾರಾದ ಫಾರ್ಶ್ ಬಜಾರ್ ಪ್ರದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡು ಮಹಿಳೆ ಸೇರಿ ನಾಲ್ಕು ಮಂದಿ ಸಾವನ್ನಪ್ಪಿದ ಘಟನೆ ಬುಧವಾರ ನಡೆದಿದೆ. ಈ ದುರ್ಘಟನೆಯಲ್ಲಿ ಒಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸಿಲಿಂಡರ್ ಸ್ಫೋಟದಿಂದ ಹೊತ್ತಿಕೊಂಡ ಬೆಂಕಿ ನಂದಿಸಲು 9 ಅಗ್ನಿಶಾಮಕ ದಳಗಳು ಸ್ಥಳಕ್ಕೆ ತೆರಳಿದ್ದವು. ಸಿಲಿಂಡರ್ ಸ್ಫೋಟದಿಂದ ಒಂದು ಮನೆ ಭಾಗಶಃ ಕುಸಿದುಬಿದ್ದಿದೆ. ಐವರು ತೀವ್ರವಾಗಿ ಅಸ್ವಸ್ಥಗೊಂಡಿದ್ದರು. ಆಸ್ಪತ್ರೆಗೆ ಸೇರಿಸುವಷ್ಟರಲ್ಲಿ ನಾಲ್ಕು ಮಂದಿ ಮೃತಪಟ್ಟಿದ್ದಾರೆ. ಇನ್ನೊಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಮುನ್ನಿ ದೇವಿ (45), ನರೇಶ್ (22), ಓಂ ಪ್ರಕಾಶ್ (20) ಮತ್ತು ಸುಮನ್ (18) ಮೃತರು. ಇವರಲ್ಲಿ ಮೂವರು ಹೊಗೆಯಿಂದ ಉಸಿರಾಡಲು ಸಾಧ್ಯವಾಗದೆ ಸಾವನ್ನಪ್ಪಿದ್ದಾರೆ. ಇನ್ನೊಬ್ಬರಿಗೆ ಗಂಭೀರವಾಗಿ ಸುಟ್ಟ ಗಾಯಗಳಾಗಿದ್ದವು. ಇನ್ನು ಲಾಲ್ ಚಾಂದ್ (29) ಎಂಬುವರಿಗೂ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ. ಘಟನೆಯ ಸಂಬಂಧ ತನಿಖೆ ಶುರುವಾಗಿದೆ.
ಸದ್ಯ ಕುಸಿದು ಬಿದ್ದಿರುವ ಮನೆಯ ಎದುರು ಒಂದು ಭಾಗದಲ್ಲಿ ಗ್ಯಾಸ್ ಸ್ಟವ್ ದುರಸ್ತಿ ಅಂಗಡಿ ಇತ್ತು. ಅಲ್ಲೇ ಸಿಲಿಂಡರ್ ಸ್ಫೋಟಗೊಂಡಿದೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಮನೆಯ ಬಾಗಿಲು-ಕಿಟಕಿಗಳನ್ನು ಮುರಿದು ಐವರನ್ನೂ ಹೊರಗೆ ಕರೆತಂದರು. ಆದರೂ ಅಷ್ಟರಲ್ಲಾಗಲೇ ದಟ್ಟವಾದ ಹೊಗೆ ತುಂಬಿಕೊಂಡಿತ್ತು. ಬೆಂಕಿಯೂ ಆವರಿಸಿತ್ತು. ಇದರಿಂದಾಗಿ ಅವರಿಗೆ ಉಸಿರಾಡಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಪೊಲೀಸ್ ಅಧಿಕಾರಿ ಸತ್ಯಸುಂದರಂ ತಿಳಿಸಿದ್ದಾರೆ.
ಇದನ್ನೂ ಓದಿ: Gold Rate Today: ಜುಲೈ ತಿಂಗಳ ಆರಂಭದಲ್ಲಿ ಗ್ರಾಹಕರಿಗೆ ಖುಷಿ ಸುದ್ದಿ; ಚಿನ್ನ, ಬೆಳ್ಳಿ ದರದಲ್ಲಿ ಭಾರೀ ಇಳಿಕೆ
(LPG cylinder explosion kills four in Delhi)