AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಎನ್​ಎಸ್ ರಾಜಾ ಸುಬ್ರಮಣಿ ನೇಮಕ: ನೌಕಾಪಡೆಗೆ ಕೃಷ್ಣ ಸ್ವಾಮಿನಾಥನ್ ಮುಖ್ಯಸ್ಥ

ಭಾರತೀಯ ಸೇನಾ ಪಡೆಗಳ ನೂತನ ಮುಖ್ಯಸ್ಥರಾಗಿ (CDS) ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಮತ್ತು ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ಸರ್ಕಾರ ನೇಮಕ ಮಾಡಿದೆ. ಮೇ 30 ರಂದು ಹಾಲಿ ಸಿಡಿಎಸ್ ಅನಿಲ್ ಚೌಹಾಣ್ ಅವರ ಅಧಿಕಾರಾವಧಿ ಮುಕ್ತಾಯವಾಗಲಿದ್ದು, ಆ ಬಳಿಕ ಹೊಸ ನೇಮಕಾತಿ ಜಾರಿಗೆ ಬರಲಿದೆ.

ನೂತನ ಸಿಡಿಎಸ್ ಆಗಿ ಲೆಫ್ಟಿನೆಂಟ್ ಜನರಲ್ ಎನ್​ಎಸ್ ರಾಜಾ ಸುಬ್ರಮಣಿ ನೇಮಕ: ನೌಕಾಪಡೆಗೆ ಕೃಷ್ಣ ಸ್ವಾಮಿನಾಥನ್ ಮುಖ್ಯಸ್ಥ
ಲೆಫ್ಟಿನೆಂಟ್ ಜನರಲ್ ಎನ್​ಎಸ್ ರಾಜಾ ಸುಬ್ರಮಣಿ (ಎಡ ಚಿತ್ರ) ಹಾಗೂ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್Image Credit source: ANI
ಗಣಪತಿ ಶರ್ಮಾ
|

Updated on: May 09, 2026 | 7:12 AM

Share

ನವದೆಹಲಿ, ಮೇ 9: ಭಾರತೀಯ ಸಶಸ್ತ್ರ ಪಡೆಗಳ ಅತ್ಯುನ್ನತ ಹುದ್ದೆಯಾದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ (CDS) ಆಗಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಎನ್​ಎಸ್ ರಾಜಾ ಸುಬ್ರಮಣಿ (Lt Gen NS Raja Subramani) ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಜತೆಗೆ ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕೃಷ್ಣ ಸ್ವಾಮಿನಾಥನ್ ಅವರನ್ನು ನೇಮಕ ಮಾಡಿದೆ. ದೇಶದ ಭದ್ರತಾ ದೃಷ್ಟಿಯಿಂದ ಈ ನೇಮಕಾತಿಗಳು ಅತ್ಯಂತ ಮಹತ್ವದ್ದಾಗಿವೆ.

ಮುಖ್ಯಾಂಶಗಳು

  • ಪ್ರಸ್ತುತ ಸಿಡಿಎಸ್ ಜನರಲ್ ಅನಿಲ್ ಚೌಹಾಣ್ ಅವರ ಅವಧಿ ಮೇ 30 ಕ್ಕೆ ಮುಕ್ತಾಯಗೊಳ್ಳಲಿದೆ.
  • ಲೆಫ್ಟಿನೆಂಟ್ ಜನರಲ್ ಸುಬ್ರಮಣಿ ಅವರು ಮಿಲಿಟರಿ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಲಿದ್ದಾರೆ.
  • ಸುಬ್ರಮಣಿ ಅವರು ಈ ಹಿಂದೆ ಸೇನಾಪಡೆಯ ಉಪಮುಖ್ಯಸ್ಥರಾಗಿ ಹಾಗೂ ಕೇಂದ್ರ ಕಮಾಂಡ್‌ನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.

ಅನುಭವದ ಗಣಿ, ರಾಜಾ ಸುಬ್ರಮಣಿ

ಲೆಫ್ಟಿನೆಂಟ್ ಜನರಲ್ ಎನ್.ಎಸ್. ರಾಜಾ ಸುಬ್ರಮಣಿ ಅವರು ಪ್ರಸ್ತುತ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಮಿಲಿಟರಿ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್ 1 ರಂದು ಅವರು ಈ ಜವಾಬ್ದಾರಿ ವಹಿಸಿಕೊಂಡಿದ್ದರು. ಅದಕ್ಕೂ ಮೊದಲು, ಜುಲೈ 2024 ರಿಂದ ಜುಲೈ 2025 ರವರೆಗೆ ಭೂಸೇನೆಯ ಉಪಮುಖ್ಯಸ್ಥರಾಗಿ (Vice Chief of Army Staff) ಕಾರ್ಯನಿರ್ವಹಿಸಿದ್ದರು. ಅಷ್ಟೇ ಅಲ್ಲದೆ, ಮಾರ್ಚ್ 2023 ರಿಂದ ಜೂನ್ 2024 ರವರೆಗೆ ಸೆಂಟ್ರಲ್ ಕಮಾಂಡ್‌ನ ಜನರಲ್ ಆಫೀಸರ್ ಕಮಾಂಡಿಂಗ್-ಇನ್-ಚೀಫ್ ಆಗಿಯೂ ಕಾರ್ಯನಿರ್ವಹಿಸಿದ ದಕ್ಷ ಅಧಿಕಾರಿಯಾಗಿದ್ದಾರೆ.

ರಾಜಾ ಸುಬ್ರಮಣಿ ಪಡೆದ ಗೌರವ, ಪದಕಗಳು

ಭಾರತೀಯ ಸೇನೆಯಲ್ಲಿನ ಅವರ ಸುದೀರ್ಘ ಮತ್ತು ನಿಷ್ಠಾವಂತ ಸೇವೆಯನ್ನು ಪರಿಗಣಿಸಿ ಅವರಿಗೆ ಹಲವು ಪ್ರತಿಷ್ಠಿತ ಸೇನಾ ಗೌರವಗಳನ್ನು ನೀಡಲಾಗಿದೆ. ಪರಮ ವಿಶಿಷ್ಟ ಸೇವಾ ಪದಕ, ಅತಿ ವಿಶಿಷ್ಟ ಸೇವಾ ಪದಕ, ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕ ಸೇರಿದಂತೆ ಹಲವು ಶೌರ್ಯ ಮತ್ತು ಸೇವಾ ಪದಕಗಳು ಅವರ ಮುಡಿಗೇರಿವೆ. ಮೇ 30 ರಂದು ಜನರಲ್ ಅನಿಲ್ ಚೌಹಾಣ್ ನಿವೃತ್ತರಾದ ಬಳಿಕ ಸುಬ್ರಮಣಿ ಅವರು ಅಧಿಕಾರ ಸ್ವೀಕರಿಸಲಿದ್ದಾರೆ.

ಇದನ್ನೂ ಓದಿ: Video: ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧದ ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ವೀಡಿಯೊ ಹಂಚಿಕೊಂಡ ಭಾರತೀಯ ಸೇನೆ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Ganapathi Sharma
Ganapathi Sharma

ಕೇರಳದ ಕಾಸರಗೋಡು ಜಿಲ್ಲೆಯ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 13 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು.

Read More