ಚೆನ್ನೈ: ಹತ್ಯೆಗೀಡಾಗಿ ದಶಕವೇ ಕಳೆದರೂ ಎಲ್ಟಿಟಿಇ (ಲಿಬರೇಷನ್ ಟೈಗರ್ಸ್ ಆಫ್ ತಮಿಳ್ಈಳಂ) ಸಂಸ್ಥಾಪಕ ವೇಲುಪಿಳ್ಳೈ ಪ್ರಭಾಕರನ್ ತಮಿಳುನಾಡಿನಲ್ಲಿ ಅನೇಕರ ಪಾಲಿಗೆ ಜೀವಂತವಾಗಿಯೇ ಇದ್ದಾರೆ. ತಮಿಳುನಾಡಿನ ಚುನಾವಣೆ ಹತ್ತಿರ ಬರುತ್ತಿರುವ ಹೊತ್ತಲ್ಲಿ ಅಲ್ಲಿನ ಹಲವು ರಾಜಕೀಯ ಪಕ್ಷಗಳು, ಯುವಕರ ಮತ ಸೆಳೆಯಲು, ಅವರಲ್ಲಿ ಚುನಾವಣೆ ಬಗ್ಗೆ ಉತ್ಸಾಹ ತುಂಬಲು ಪ್ರಭಾಕರನ್ ಫೋಟೋಗಳನ್ನು, ಕಟೌಟ್ಗಳನ್ನು ಬಳಸಿಕೊಳ್ಳುತ್ತಿದ್ದಾರೆ. ವೈಕೋ ಅವರ ಎಂಡಿಎಂಕೆ, ಥೋಲ್ ತಿರುಮಾವಾಲವನ್ ಪಕ್ಷವಾದ ವಿಸಿಕೆ, ಸೀಮನ್ರ ಎನ್ಟಿಕೆ, ರಾಮದಾಸ್ರ ಪಿಎಂಕೆ ಮತ್ತು ಟಿ.ವೇಲಮುರುಗನ್ ಅವರ ಟಿವಿಕೆ ಪಕ್ಷಗಳ ಮತ ಪ್ರಚಾರದ ವೇಳೆ ಎಲ್ಟಿಟಿಇ ಸಂಸ್ಥಾಪಕ ಪ್ರಭಾಕರನ್ ಕೌಟೌಟ್ಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮದ್ರಾಸ್ ಯೂನಿರ್ವಸಿಟಿಯ ಪೊಲಿಟಿಕಲ್ ಸೈನ್ಸ್ ವಿಭಾಗದ ರಾಮು ಮಣಿವಣ್ಣನ್, ತಮಿಳಿಗರ ಹಂಬಲಗಳಿಗೆ ಪ್ರತಿನಿಧಿಯಂತಿದ್ದವರು ಪ್ರಭಾಕರನ್. ಇಲ್ಲಿನ ರಾಜಕೀಯದಲ್ಲಿ ಅವರು ಇಂದಿಗೂ ಪ್ರಸ್ತುತ. ಹಾಗೇ ಅದೆಷ್ಟೋ ಯುವಕರ ಬಹುದೊಡ್ಡ ಆಕರ್ಷಣೆ. ಹಾಗಾಗಿ ಕೆಲವು ರಾಜಕೀಯ ಪಕ್ಷಗಳು ಪ್ರಭಾಕರನ್ ಪೋಸ್ಟರ್ಗಳನ್ನು ಬಳಸುವ ಮೂಲಕ, ಒಗ್ಗಟ್ಟು ಪ್ರದರ್ಶಿಸುತ್ತಿವೆ ಎಂದು ಹೇಳಿದ್ದಾರೆ.
ಎನ್ಟಿಕೆ ಪ್ರಧಾನ ಕಚೇರಿ ಕಾರ್ಯದರ್ಶಿ ಕೆ.ಸೆಂಥಿಲ್ ಕುಮಾರ್ ಮಾತನಾಡಿ, ನಮ್ಮ ಪಕ್ಷದ ನೆಲೆ ಪ್ರಭಾಕರನ್ ಸುತ್ತ ಸುತ್ತುತ್ತದೆ. ನಮ್ಮ ಪಕ್ಷದತ್ತ ಇಂದಿಗೂ ಅದೆಷ್ಟೋ ಯುವಕರು ಆಕರ್ಷಿತರಾಗಲು ಪ್ರಭಾಕರನ್ ಕಾರಣ. ಅವರೇ ನಮ್ಮ ನಾಯಕ. ಅವರ ಬಗ್ಗೆ ನಮಗಿರುವ ಪ್ರೀತಿ, ಗೌರವವನ್ನು ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿಯೇ ತೋರಿಸುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ವೈಕೋ ಅವರ ಆಪ್ತರಾದ ಪಿ.ಅರುಣಗಿರಿ ಮಾತನಾಡಿ, 1983ರಿಂದಲೂ ನಮ್ಮ ನಾಯಕರಾದ ವೈಕೋ ಅವರು ಲಂಕಾದ ತಮಿಳರ ಬಗ್ಗೆ ಮಾತನಾಡುತ್ತಲೇ ಇದ್ದಾರೆ. ಸಮಸ್ಯೆಗಳನ್ನು ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತುತಪಡಿಸಿದ್ದಾರೆ. ಅಲ್ಲದೆ, ಪ್ರಭಾಕರನ್ ಬಗ್ಗೆ ಪುಸ್ತಕವನ್ನೂ ಬರೆದಿದ್ದು, ಇದಕ್ಕಾಗಿ ಅವರೊಟ್ಟಿಗೆ 23 ದಿನಗಳ ಕಾಲ ವಾಸವಾಗಿದ್ದರು. ಪ್ರಭಾಕರನ್ ಅವರೊಟ್ಟಿಗಿನ ಎಂಡಿಎಂಕೆ ಸಂಬಂಧ ಚುನಾವಣೆಗೆ ಮಾತ್ರ ಸೀಮಿತವಲ್ಲ ಎಂದು ತಿಳಿಸಿದ್ದಾರೆ.
2009ರಲ್ಲಿ ಪ್ರಭಾಕರನ್ ಹತ್ಯೆ
ಶ್ರೀಲಂಕಾದ ಉತ್ತರ ಭಾಗದಲ್ಲಿ ತಮಿಳಿಗರಿಗಾಗಿಯೇ ಪ್ರತ್ಯೇಕ ರಾಷ್ಟ್ರ ಸ್ಥಾಪನೆಯಾಗಬೇಕು ಎಂಬ ಹೋರಾಟ ಕೈಗೆತ್ತಿಕೊಂಡಿದ್ದ ವೇಲುಪಿಳ್ಳೈ ಪ್ರಭಾಕರನ್, 1970ರಲ್ಲಿ ಲಿಬರೇಷನ್ ಟೈಗರ್ಸ್ ಆಫ್ ತಮಿಳ್ಈಳಂ (ಎಲ್ಟಿಟಿಇ) ಸಂಘಟನೆಯನ್ನು ಹುಟ್ಟುಹಾಕಿದ್ದರು. 2009ರಲ್ಲಿ ಶ್ರೀಲಂಕಾ ಸೈನ್ಯ ಇವರನ್ನು ಹತ್ಯೆಗೈದಿದೆ. 1991ರಲ್ಲಿ ರಾಜೀವ್ ಗಾಂಧಿ ಹತ್ಯೆಯಲ್ಲಿ ಎಲ್ಟಿಟಿಇ ಪ್ರಮುಖ ಪಾತ್ರ ವಹಿಸಿತ್ತು. ಅದಾದ ಬಳಿಕ ಸಂಘಟನೆಯನ್ನು ನಿಷೇಧಿಸಲಾಗಿದೆ.
ಇದನ್ನೂ ಓದಿ: ಗೀತಾ ಧಾರಾವಾಹಿ ನಟಿ ಭವ್ಯಾ ಗೌಡಗೆ ಬೆಳ್ಳಿತೆರೆ ಆಫರ್; ಸಿನಿಮಾ ಯಾವುದು?