2014ಕ್ಕೂ ಮೊದಲು ಗುಂಪು ಹತ್ಯೆ ನಡೆಯುತ್ತಲೇ ಇರಲಿಲ್ಲ ಎಂದ ರಾಹುಲ್ ಗಾಂಧಿ; ರಾಜೀವ್​ ಗಾಂಧಿಯನ್ನು ಗುಂಪು ಹತ್ಯೆಯ ಪಿತಾಮಹ ಎಂದ ಬಿಜೆಪಿ ಮುಖಂಡ

ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್​ಗೆ ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ರಾಜೀವ್ ಗಾಂಧಿಯವರ ಒಂದು ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

2014ಕ್ಕೂ ಮೊದಲು ಗುಂಪು ಹತ್ಯೆ ನಡೆಯುತ್ತಲೇ ಇರಲಿಲ್ಲ ಎಂದ ರಾಹುಲ್ ಗಾಂಧಿ; ರಾಜೀವ್​ ಗಾಂಧಿಯನ್ನು ಗುಂಪು ಹತ್ಯೆಯ ಪಿತಾಮಹ ಎಂದ ಬಿಜೆಪಿ ಮುಖಂಡ
ರಾಹುಲ್ ಗಾಂಧಿ
Edited By:

Updated on: Dec 21, 2021 | 2:46 PM

ಒಂದಲ್ಲ ಒಂದು ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸುವ ಕಾಂಗ್ರೆಸ್ ನಾಯಕ ರಾಹುಲ್​ ಗಾಂಧಿ ಇದೀಗ ಮತ್ತೆ ಕೇಂದ್ರ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಂಜಾಬ್​ನಲ್ಲಿ ಇತ್ತೀಚೆಗೆ 24ಗಂಟೆಯೊಳಗೆ ಎರಡು ಗುಂಪು ಹತ್ಯೆಗಳು ನಡೆದ ಬೆನ್ನಲ್ಲೇ ರಾಹುಲ್ ಗಾಂಧಿ ಈ ಟ್ವೀಟ್ ಮಾಡಿದ್ದಾರೆ. ಬಿಜೆಪಿ 2014ರಲ್ಲಿ ಅಧಿಕಾರಕ್ಕೆ ಬಂದಿದೆ. ಆದರೆ ಅದು ಅಧಿಕಾರಕ್ಕೆ ಬರುವುದಕ್ಕೂ ಮೊದಲು ದೇಶದಲ್ಲಿ ಗುಂಪು ಹತ್ಯೆ (lynching) ಎಂಬುದನ್ನು ಪ್ರಾಯೋಗಿಕವಾಗಿ ನೋಡಲು ಸಾಧ್ಯವೇ ಇರಲಿಲ್ಲ ಎಂದಿದ್ದಾರೆ. ಅಂದರೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರ ಹಿಡಿದ ನಂತರವೇ ಗುಂಪು ಹತ್ಯೆ ಪ್ರಕರಣಗಳು ಹೆಚ್ಚುತ್ತಿವೆ. ಅದಕ್ಕೂ ಮೊದಲು ಕಾಂಗ್ರೆಸ್​ ಸರ್ಕಾರದ ಆಡಳಿತದಲ್ಲಿ ಗುಂಪು ಹತ್ಯೆಗಳು ನಡೆಯುತ್ತಿರಲಿಲ್ಲ ಎಂದಿದ್ದಾರೆ.  

ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವೀಟ್​ಗೆ ಬಿಜೆಪಿ ಮುಖಂಡ ಅಮಿತ್ ಮಾಳವಿಯಾ ರಾಜೀವ್ ಗಾಂಧಿಯವರ ಒಂದು ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಇವರು (ರಾಜೀವ್ ಗಾಂಧಿಯನ್ನು ಉಲ್ಲೇಖಿಸಿ) ಗುಂಪು ಹತ್ಯೆಯ ಪಿತಾಮಹ. ಸಿಖ್ಖರ ನರಮೇಧವನ್ನು ಸಮರ್ಥಿಸಿಕೊಳ್ಳುವುದನ್ನು ನೋಡಿ. ಬೀದಿ ಬೀದಿಯಲ್ಲಿ ರಕ್ತಕ್ಕೆ ಪ್ರತಿಯಾಗಿ ರಕ್ತವನ್ನೇ ಹರಿಸಿ ಸೇಡು ತೀರಿಸಿಕೊಳ್ಳಿ ಎಂದು ಕಾಂಗ್ರೆಸ್ ಬೀದಿಬೀದಿಯಲ್ಲಿ ಕೂಗಿತು. ಇದೇ ಕಾಂಗ್ರೆಸ್ ಸರ್ಕಾರವಿದ್ದಾಗಲೇ, ಮಹಿಳೆಯರ ಮೇಲೆ ಅತ್ಯಾಚಾರ, ಸಿಖ್​ ಪುರುಷರ ಕುತ್ತಿಗೆಗೆ ಸುಡುವ ಟೈರ್​ಗಳನ್ನು ಸುತ್ತಿ, ಮೃತದೇಹಗಳನ್ನು ಚಡಂಡಿಯಲ್ಲಿ ಎಸೆಯಲಾಯಿತು ಎಂದು ಹೇಳಿದ್ದಾರೆ.

ಇತ್ತೀಚೆಗೆ ಸಿಖ್ಖರ ಪವಿತ್ರ ಗ್ರಂಥ ಮತ್ತು ಧ್ವಜವನ್ನು ಅಪವಿತ್ರಗೊಳಿಸಿದ್ದಾರೆಂದು ಆರೋಪಿಸಿ ಪಂಜಾಬ್​ನಲ್ಲಿ ಪ್ರತ್ಯೇಕವಾಗಿ ಇಬ್ಬರು ಯುವಕರ ಹತ್ಯೆ ನಡೆದಿದೆ. ಪಂಜಾಬ್​ನಲ್ಲಿ ಕಾಂಗ್ರೆಸ್​ ಸರ್ಕಾರವೇ ಇದ್ದರೂ, ರಾಹುಲ್ ಗಾಂಧಿ ಈ ವಿಚಾರದಲ್ಲಿ ಕೇಂದ್ರ ಸರ್ಕಾರವನ್ನು ಟಾರ್ಗೆಟ್​ ಮಾಡಿದ್ದಾರೆ.  ಪಂಜಾಬ್​ನ ಅಮೃತ್​ಸರದಲ್ಲಿರುವ ಸ್ವರ್ಣಮಂದಿರದ ಗರ್ಭಗುಡಿಗೆ ನುಗ್ಗಿದ್ದ ಯುವಕನನ್ನು ಭಕ್ತರು ಹೊಡೆದು ಕೊಂದಿದ್ದರು. ಅದಾದ ಕೆಲವೇ ತಾಸುಗಳಲ್ಲಿ ಕಪರ್ತುಲಾದ ಗುರುದ್ವಾರದಲ್ಲಿ ಸಿಖ್ಖರ ಧ್ವಜ ಅಪವಿತ್ರಗೊಳಿಸಿದ ಆರೋಪದಡಿ ಸ್ಥಳೀಯರೇ ಹೊಡೆದು, ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ತೀವ್ರವಾಗಿ ಗಾಯಗೊಂಡಿದ್ದ ಆತ ಕೊನೆಯುಸಿರೆಳೆದಿದ್ದ. ಪಂಜಾಬ್​​ ಸರ್ಕಾರ ಎಸ್​ಐಟಿ ರಚಿಸಿದ್ದು ಪ್ರಕರಣಗಳ ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಡ್ರಗ್ಸ್​ ದಂಧೆ ಪ್ರಕರಣ; ಅಕಾಲಿದಳದ ನಾಯಕ, ಪಂಜಾಬ್ ಮಾಜಿ ಸಚಿವ ಮಜಿಥಿಯಾ ವಿರುದ್ಧ ಕೇಸ್ ದಾಖಲು