ಮುಲಾಯಂ ಸಿಂಗ್ ಜತೆ ಮೋಹನ್ ಭಾಗವತ್ ಫೋಟೊ; ಸಮಾಜವಾದಿ ಪಕ್ಷವನ್ನು ಕುಟುಕಿದ ಕಾಂಗ್ರೆಸ್, ಚಿತ್ರ ಬಹಳಷ್ಟು ಹೇಳುತ್ತಿದೆ ಎಂದ ಬಿಜೆಪಿ

ಮುಲಾಯಂ ಸಿಂಗ್ ಯಾದವ್ ಮತ್ತು ಮೋಹನ್ ಭಾಗವತ್ ಅವರು ಸೋಮವಾರ ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಮದುವೆಯ ಆರತಕ್ಷತೆಯಲ್ಲಿ ಭೇಟಿಯಾಗಿದ್ದರು.

ಮುಲಾಯಂ ಸಿಂಗ್ ಜತೆ ಮೋಹನ್ ಭಾಗವತ್ ಫೋಟೊ; ಸಮಾಜವಾದಿ ಪಕ್ಷವನ್ನು ಕುಟುಕಿದ ಕಾಂಗ್ರೆಸ್, ಚಿತ್ರ ಬಹಳಷ್ಟು ಹೇಳುತ್ತಿದೆ ಎಂದ ಬಿಜೆಪಿ
ಮುಲಾಯಂ ಸಿಂಗ್ ಜತೆ ಮೋಹನ್ ಭಾಗವತ್
TV9kannada Web Team

| Edited By: Rashmi Kallakatta

Dec 21, 2021 | 2:19 PM

ಲಖನೌ: : ಬಿಜೆಪಿಯ ಸೈದ್ಧಾಂತಿಕ ಮಾರ್ಗದರ್ಶಕ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರೊಂದಿಗೆ ಸಮಾಜವಾದಿ ಪಕ್ಷದ ( Samajwadi Party) ಹಿರಿಯ ಮುಲಾಯಂ ಸಿಂಗ್ ಯಾದವ್ (Mulayam Singh Yadav)ಅವರ ಫೋಟೋ ಉತ್ತರ ಪ್ರದೇಶ (Uttar Pradesh election) ಚುನಾವಣಾ ಪ್ರಚಾರದ ನಡುವೆ ಹೊಸ ಸಂಚಲನ ಮೂಡಿಸಿದೆ. ಮುಲಾಯಂ ಸಿಂಗ್ ಯಾದವ್ ಮತ್ತು ಮೋಹನ್ ಭಾಗವತ್ ಅವರು ಸೋಮವಾರ ದೆಹಲಿಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರ ಮೊಮ್ಮಗಳ ಮದುವೆಯ ಆರತಕ್ಷತೆಯಲ್ಲಿ ಭೇಟಿಯಾಗಿದ್ದರು. ಮುಲಾಯಂ ಸಿಂಗ್ ಅವರ ಪುತ್ರ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರ ಸಹಾಯಕರನ್ನು ಗುರಿಯಾಗಿಸಿಕೊಂಡು ತೆರಿಗೆ ದಾಳಿ ನಡೆಸಿದ ಎರಡು ದಿನಗಳ ನಂತರ ಇದು ಸಂಭವಿಸಿದೆ.  ತಮ್ಮ ಜನ್ಮದಿನದಂದು ಮೋಹನ್ ಭಾಗವತ್ ಅವರ ಆಶೀರ್ವಾದ ಪಡೆದೆ ಎಂದು  ಕೇಂದ್ರ ಸಚಿವ ಅರ್ಜುನ್ ಮೇಘವಾಲ್  (Arjun Meghwal)ಟ್ವೀಟ್ ಮಾಡಿದ ಫೋಟೋದಲ್ಲಿ ಮುಲಾಯಂ ಸಿಂಗ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥರು ಒಟ್ಟಿಗೆ ಕುಳಿತಿರುವುದು ಕಾಣಿಸುತ್ತಿದೆ. 

ಕೆಲವೇ ಗಂಟೆಗಳ ನಂತರ, ಸಮಾಜವಾದಿ ಪಕ್ಷವನ್ನು ಗುರಿಯಾಗಿಟ್ಟುಕೊಂಡು ಕಾಂಗ್ರೆಸ್ ಟ್ವೀಟ್ ಮಾಡಿದೆ.

“ಹೊಸ ಎಸ್‌ಪಿಯಲ್ಲಿ ಎಸ್ ಎಂದರೆ ಸಂಘವಾದ್ ಎಂದು ಹೇಳಲಾಗಿದೆಯೇ ಎಂದು ಉತ್ತರ ಪ್ರದೇಶ ಕಾಂಗ್ರೆಸ್ ಹಿಂದಿಯಲ್ಲಿ ತನ್ನ ಪೋಸ್ಟ್‌ನಲ್ಲಿ ವ್ಯಂಗ್ಯವಾಡಿದೆ.

ನಂತರ ಉತ್ತರ ಪ್ರದೇಶ ಬಿಜೆಪಿ  ಟ್ವಿಟರ್ ಹ್ಯಾಂಡಲ್ ” ಚಿತ್ರವು ಬಹಳಷ್ಟು ಹೇಳುತ್ತದೆ” ಎಂದು ಪೋಸ್ಟ್  ಮಾಡಿದೆ.

ಆರತಕ್ಷತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಸೇರಿದಂತೆ ಅನೇಕ ದೊಡ್ಡ ಅತಿಥಿಗಳು ಕಾಣಿಸಿಕೊಂಡಿದ್ದರೂ, ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ  ಚುನಾವಣೆಯ ಹೈ-ವೋಲ್ಟೇಜ್ ಪ್ರಚಾರದ ಮಧ್ಯೆ ಈ ಚಿತ್ರ  ಹೆಚ್ಚು ಗಮನ ಸೆಳೆದಿದೆ.

ರಾಜ್ಯದ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಳ್ಳಲು ಪ್ರಚಾರ ನಡೆಸುತ್ತಿದ್ದು, ಸಮಾಜವಾದಿ ನಾಯಕ ಅಖಿಲೇಶ್ ಯಾದವ್ ಅವರಿಂದ ಈ ಬಾರಿ ಕಠಿಣ ಸವಾಲು ಎದುರಾಗಿದೆ. ಎರಡು ಕಡೆಯವರ ನಡುವೆ ಆರೋಪಗಳು ಹರಿದಾಡುತ್ತಿವೆ.

ಕಾಂಗ್ರೆಸ್ ಟ್ವೀಟ್ ಗೆ ಪ್ರತಿಕ್ರಿಯಿಸಿದ ಸಮಾಜವಾದಿ ಪಕ್ಷ ಕಾಂಗ್ರೆಸ್ ತನ್ನ ಮಿತ್ರಪಕ್ಷವಾದ ಎನ್‌ಸಿಪಿ (ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ) ನಾಯಕರು ನೇತಾಜಿ (ಮುಲಾಯಂ ಸಿಂಗ್) ಅವರ ಆಶೀರ್ವಾದವನ್ನು ಪಡೆದ ಕಾರ್ಯಕ್ರಮದ ಫೋಟೊವನ್ನು ಹಾಕಿ ಇದಕ್ಕೆ ಕಾಂಗ್ರೆಸ್ ಏನು ಹೇಳುತ್ತದೆ ಎಂದು ಪ್ರಶ್ನಿಸಿದೆ.

ಮುಲಾಯಂ ಸಿಂಗ್-ಆರ್‌ಎಸ್‌ಎಸ್ ಭೇಟಿಗೆ ಕೇವಲ ಎರಡು ದಿನಗಳ ಮೊದಲು, ಅಖಿಲೇಶ್ ಯಾದವ್ ಅವರ ಸಹಾಯಕ ಮತ್ತು ಸಮಾಜವಾದಿ ಉನ್ನತ ನಾಯಕರ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದರು. ಇದಕ್ಕೆ ಮಾಜಿ ಮುಖ್ಯಮಂತ್ರಿ ತೀವ್ರವಾಗಿ ಪ್ರತಿಕ್ರಿಯಿಸಿದ್ದರು.

“ಚುನಾವಣೆ ಸಮೀಪಿಸುತ್ತಿದ್ದಂತೆ ಇದೆಲ್ಲವೂ ಆಗುತ್ತಿದೆ ಎಂದು ನಾನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಅಭಿ ತೋ ಟ್ಯಾಕ್ಸ್ ಡಿಪಾರ್ಟ್ ಮೆಂಟ್ ಆಯಾ ಹೈ, ಇಡಿ ಆಯೇಗಾ, ಸಿಬಿಐ ಆಯೇಗಾ (ಇದೀಗ ತೆರಿಗೆ ಇಲಾಖೆ ಬಂದಿದೆ. ಜಾರಿ ನಿರ್ದೇಶನಾಲಯ ಬರಲಿದೆ, ಸಿಬಿಐ ಬರುತ್ತದೆ) ಆದರೆ ಸೈಕಲ್ (ಸಮಾಜವಾದಿ ಪಕ್ಷದ ಚುನಾವಣಾ ಚಿಹ್ನೆ) ನಿಲ್ಲುವುದಿಲ್ಲ. ನಾವು ಅದೇ ವೇಗದಲ್ಲಿ ಮುಂದುವರಿಯುತ್ತೇವೆ.ಬಿಜೆಪಿ ಯುಪಿಯಿಂದ ನಿರ್ನಾಮವಾಗಲಿದೆ ಎಂದು ಅಖಿಲೇಶ್ ಯಾದವ್ ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಐಶ್ವರ್ಯಾ ರೈ ಇ.ಡಿ.ವಿಚಾರಣೆ ಬೆನ್ನಲ್ಲೇ ಬಿಜೆಪಿ ವಿರುದ್ಧ ಸಂಸತ್ತಿನಲ್ಲಿ ಕೂಗಾಡಿದ ಜಯಾ ಬಚ್ಚನ್​; ಕೆಂಪು ಟೋಪಿ ಶಕ್ತಿ ತೋರಿಸುತ್ತೇವೆಂದು ಖಡಕ್​ ಎಚ್ಚರಿಕೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada