ಮಧ್ಯಪ್ರದೇಶ: ಸಿಎಂ ಮೋಹನ್ ಯಾದವ್ ಸಂಪುಟ ವಿಸ್ತರಣೆ; ಇಂದು 28 ಸಚಿವರ ಸೇರ್ಪಡೆ ಸಾಧ್ಯತೆ

|

Updated on: Dec 25, 2023 | 1:37 PM

ಮಧ್ಯಪ್ರದೇಶದ ಸಚಿವ ಸಂಪುಟ ವಿಸ್ತರಣೆಯ ಭಾಗವಾಗಿ 28 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಶಾಸಕರ ನಿಖರ ಸಂಖ್ಯೆ ಮತ್ತು ಹೆಸರನ್ನು ಬಹಿರಂಗಪಡಿಸಲು ಸಿಎಂ ಮೋಹನ್ ಯಾದವ್ ನಿರಾಕರಿಸಿದ್ದಾರೆ. 230 ಶಾಸಕರನ್ನು ಹೊಂದಿರುವ ಮಧ್ಯಪ್ರದೇಶದ ಸಚಿವ ಸಂಪುಟದ ಗರಿಷ್ಠ ಸಂಖ್ಯಾಬಲ ಸಿಎಂ ಸೇರಿದಂತೆ 35 ಆಗಿದೆ.

ಮಧ್ಯಪ್ರದೇಶ: ಸಿಎಂ ಮೋಹನ್ ಯಾದವ್ ಸಂಪುಟ ವಿಸ್ತರಣೆ; ಇಂದು 28 ಸಚಿವರ ಸೇರ್ಪಡೆ ಸಾಧ್ಯತೆ
ಮೋಹನ್ ಯಾದವ್
Follow us on

ದೆಹಲಿ ಡಿಸೆಂಬರ್ 25:  ಮಧ್ಯಪ್ರದೇಶ (Madhya Pradesh) ಮುಖ್ಯಮಂತ್ರಿ ಮೋಹನ್ ಯಾದವ್ (Mohan Yadav)ಅವರ ಸಚಿವ ಸಂಪುಟದ ಮೊದಲ ವಿಸ್ತರಣೆಯ (Cabinet Expansion) ಭಾಗವಾಗಿ ಇಂದು(ಸೋಮವಾರ) 28 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ರಾಜ್ಯ ಪಕ್ಷದ ಮುಖ್ಯಸ್ಥ ವಿಡಿ ಶರ್ಮಾ ಅವರ ಮಾರ್ಗದರ್ಶನದಲ್ಲಿ ಹೊಸ ಸಚಿವ ಸಂಪುಟವು ರಾಜ್ಯದ ಅಭಿವೃದ್ಧಿಗಾಗಿ ಕೆಲಸ ಮಾಡುತ್ತದೆ ಎಂದು ಭಾನುವಾರ ಸಂಜೆ ನಡ್ಡಾ ಅವರನ್ನು ಭೇಟಿ ಮಾಡಿದ ಸಿಎಂ ಹೇಳಿದರು.

ಸಂಪುಟ ವಿಸ್ತರಣೆಯ ಭಾಗವಾಗಿ 28 ಸಚಿವರು ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳಲಿರುವ ಶಾಸಕರ ನಿಖರ ಸಂಖ್ಯೆ ಮತ್ತು ಹೆಸರನ್ನು ಬಹಿರಂಗಪಡಿಸಲು ಸಿಎಂ ಯಾದವ್ ನಿರಾಕರಿಸಿದ್ದಾರೆ.
230 ಶಾಸಕರನ್ನು ಹೊಂದಿರುವ ಮಧ್ಯಪ್ರದೇಶದ ಸಚಿವ ಸಂಪುಟದ ಗರಿಷ್ಠ ಸಂಖ್ಯಾಬಲ ಸಿಎಂ ಸೇರಿದಂತೆ 35 ಆಗಿದೆ.

ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಜತೆ ಮಾತನಾಡಿದ ಬಿಜೆಪಿ ನಾಯಕರೊಬ್ಬರು, ಯಾದವ್ ಅವರ ಕ್ಯಾಬಿನೆಟ್ ಹೊಸ ಮುಖಗಳನ್ನು ಹೊಂದಿರುತ್ತದೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಶಸ್ವಿಯಾಗಿ ಸ್ಪರ್ಧಿಸಿದ ಸಂಸತ್ ಸದಸ್ಯರು ಸೇರಿದಂತೆ ಹಿರಿಯ ನಾಯಕರನ್ನು ಹೊಂದಿರುತ್ತದೆ. ಹಿಂದಿನ ಸರ್ಕಾರದ ಕೆಲವು ಸಚಿವರು ಕೂಡ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದಿದ್ದಾರೆ ಅವರು.

ಯಾದವ್ ಅವರು ಸಂಪುಟ ವಿಸ್ತರಣೆಗೆ ಮುನ್ನ ರಾಜ್ಯಪಾಲ ಮಂಗುಭಾಯ್ ಪಟೇಲ್ ಅವರಿಗೆ ಸೇರ್ಪಡೆಗೊಳ್ಳಲಿರುವ ಸಚಿವರ ಪಟ್ಟಿಯನ್ನು ಹಸ್ತಾಂತರಿಸಿದರು. ಪಟೇಲ್ ಅವರು ಮಧ್ಯಾಹ್ನ 3.30ಕ್ಕೆ ಸಚಿವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ.
ಈ ತಿಂಗಳು ಮಧ್ಯಪ್ರದೇಶದಲ್ಲಿ ಬಿಜೆಪಿ 230 ಸ್ಥಾನಗಳಲ್ಲಿ 163 ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಮರಳಿತು.ಅದೇ ವೇಳೆ ಕಾಂಗ್ರೆಸ್ 66 ಸ್ಥಾನಗಳನ್ನು ಗಳಿಸಿತ್ತು.

ಇದನ್ನೂ ಓದಿ: ಮಧ್ಯಪ್ರದೇಶದ ಸಿಎಂ ಸ್ಥಾನಕ್ಕೆ ಆಯ್ಕೆಯಾಗಿರುವ ಮೋಹನ್ ಯಾದವ್ ಖಡ್ಗ ಝಳಪಿಸಿ ಕೌಶಲ ಪ್ರದರ್ಶಿಸಿದ ವಿಡಿಯೊ ವೈರಲ್

ಯಾದವ್ ಮತ್ತು ಉಪ ಮುಖ್ಯಮಂತ್ರಿಗಳಾದ ಜಗದೀಶ್ ಡಿಯೋಡಾ ಮತ್ತು ರಾಜೇಂದ್ರ ಶುಕ್ಲಾ ಅವರು ಡಿಸೆಂಬರ್ 13 ರಂದು ಪ್ರಮಾಣ ವಚನ ಸ್ವೀಕರಿಸಿದರು. ಕಳೆದ 18 ವರ್ಷಗಳಲ್ಲಿ 16 ವರ್ಷಗಳ ಕಾಲ ರಾಜ್ಯವನ್ನು ಆಳಿದ ಶಿವರಾಜ್ ಸಿಂಗ್ ಚೌಹಾಣ್ ಅವರ ಸ್ಥಾನಕ್ಕೆ ಮೂರು ಬಾರಿ ಶಾಸಕರಾಗಿದ್ದ ಯಾದವ್ ಅವರನ್ನು ಸಿಎಂ ಆಗಿ ಬಿಜೆಪಿ ನೇಮಕ ಮಾಡಿತ್ತು.

ಕೆಲವು ದಿನಗಳ ಹಿಂದೆಯಷ್ಟೇ ಸಿಎಂ ಮೋಹನ್ ಯಾದವ್, ಜಾಗತಿಕ ಕಾಲಮಾಪನ ಕೇಂದ್ರವನ್ನು ಇಂಗ್ಲೆಂಡ್​​ನ ಗ್ರೀನ್ ವಿಚ್ ನಿಂದ ಮಧ್ಯಪ್ರದೇಶದ ಉಜ್ಜಯಿನಿಗೆ ಬದಲಿಸಲು ಪ್ರಯತ್ನ ಆರಂಭಿಸುವುದಾಗಿ ಹೇಳಿದ್ದರು. ಮಧ್ಯ ಪ್ರದೇಶ ವಿಧಾನಸಭೆಯಲ್ಲಿ ಮಾತನಾಡಿದ ಅವರು ಭಾರತೀಯ ಸಮಯದ ಬಗ್ಗೆ 300 ವರ್ಷಗಳ ಹಿಂದೆಯೇ ಪ್ರವಂಚಕ್ಕೆ ಗೊತ್ತಿತ್ತು. ಆನಂತರ ಪ್ಯಾರಿಸ್ ನಲ್ಲಿ ಸಮಯ ಮಾಪನ ನಿರ್ಧರಿಸಲು ಯತ್ನಿಸಲಾಯಿತು. ಆಮೇಲೆ ಬ್ರಿಟನ್, ಗ್ರೀನ್​​ವಿಚ್​​ನ್ನು ಮಾಪನದ ಕೇಂದ್ರವನ್ನಾಗಿ ಮಾಡಿತು.

ಯಾರೊಬ್ಬರೂ ಮಧ್ಯರಾತ್ರಿ 12ರಿಂದ ದಿನಾರಂಭ ಮಾಡುವುದಿಲ್ಲ. ಜನರು ಸೂರ್ಯೋದಯದ ಹೊತ್ತಿಗೆ ಅಥವಾ ನಂತರ ಏಳುತ್ತಾರೆ. ನಮ್ಮ ಸರ್ಕಾರ ಉಜ್ಜಯಿನಿಯನ್ನು ಜಾಗತಿಕ ರೇಖಾಂಶ ಕೇಂದ್ರವನ್ನಾಗಿ ಪರಿಗಣಿಸಲು ಕೆಲಸ ಮಾಡುತ್ತದೆ. ಈ ಮೂಲಕ ಜಗತ್ತಿನ ಸಮಯವನ್ನು ಸರಿಪಡಿಸುತ್ತದೆ ಎಂದು ಮಧ್ಯ ಪ್ರದೇಶದ ಸಿಎಂ ಹೇಳಿದ್ದಾರೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:40 pm, Mon, 25 December 23