ರಸ್ತೆ ಬದಿಯಲ್ಲಿ ವಾಹನಗಳಿಂದ ಎದ್ದಿರುವ ಧೂಳಿನಲ್ಲಿ, ಬಿಳಿಯ ಬಟ್ಟೆಯಿಂದ ಸುತ್ತಿರುವ ತಮ್ಮನ ಶವವ ತೊಡೆಯ ಮೇಲಿರಿಸಿ, ತಲೆಯನ್ನು ನೇವರಿಸುತ್ತಾ, ನೊಣಗಳನ್ನು ಓಡಿಸುತ್ತಾ ಕುಳಿತಿದ್ದ ಬಾಲಕನನ್ನು ನೋಡಿದರೆ ಮರುಕ ಹುಟ್ಟದೆ ಇದ್ದೀತೆ.
ಮಧ್ಯಪ್ರದೇಶದ ಮೊರೆನಾ ಪಟ್ಟಣದಲ್ಲಿ ಪತ್ರಕರ್ತರೊಬ್ಬರು ತೆಗೆದ ಚಿತ್ರವು ಮನಕಲಕುವಂತಿದೆ. ಇದರಲ್ಲಿ 8 ವರ್ಷದ ಬಾಲಕ ಗುಲ್ಶನ್ ತನ್ನ 2 ವರ್ಷದ ಸಹೋದರ ರಾಜನ ಶವದೊಂದಿಗೆ ಕುಳಿತಿರುವುದನ್ನು ಕಾಣಬಹುದು. ಪೂಜಾರಾಮ್ ಅಂಬಾದ ಬದ್ಫ್ರಾ ಗ್ರಾಮದ ನಿವಾಸಿ. ಸ್ಥಳೀಯ ಆಸ್ಪತ್ರೆ ಅಭಿಪ್ರಾಯದ ಮೇರೆಗೆ ತಮ್ಮ 2 ವರ್ಷದ ಮಗನನ್ನು ಆಂಬ್ಯುಲೆನ್ಸ್‌ನಲ್ಲಿ ಭೋಪಾಲ್‌ನಿಂದ 450 ಕಿಮೀ ದೂರದಲ್ಲಿರುವ ಮೊರೆನಾ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದರು.
ರಕ್ತಹೀನತೆಯಿಂದ ಬಳಲುತ್ತಿರುವ ಪೂಜಾರಾಮ್ ಅವರ ಎರಡು ವರ್ಷದ ಮಗ ರಾಜನ ಹೊಟ್ಟೆಯಲ್ಲಿ ನೀರು ತುಂಬಿಕೊಂಡಿತ್ತು. ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ರಾಜ ಚಿಕಿತ್ಸೆ ವೇಳೆ ಮೃತಪಟ್ಟಿದ್ದ, ಅವರನ್ನು ಕರೆತಂದ ಆಂಬ್ಯುಲೆನ್ಸ್ ಈಗಾಗಲೇ ಹೊರಟುಬಿಟ್ಟಿತ್ತು.
ಮೃತದೇಹವನ್ನು ದೂರದಲ್ಲಿರುವ ತಮ್ಮ ಗ್ರಾಮಕ್ಕೆ ಕೊಂಡೊಯ್ಯಲು ವಾಹನ ಬೇಕೆಂದು ಬಡ ಪೂಜಾರಾಮ್ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗೆ ಮನವಿ ಮಾಡಿದ್ದರು. ಆದರೆ ಅವರ ಬೇಡಿಕೆಗೆ ಕಿಂಚಿತ್ತೂ ಬೆಲೆ ಸಿಗಲಿಲ್ಲ. ಖಾಸಗಿ ವಾಹನದಲ್ಲಿ ತೆರಳುವಷ್ಟು ಅವರು ಅನುಕೂಲವಂತರಾಗಿರಲಿಲ್ಲ.
ಆಸ್ಪತ್ರೆ ಆವರಣದಲ್ಲಿ ನಿಂತಿದ್ದ ಆಂಬ್ಯುಲೆನ್ಸ್ ಚಾಲಕ 1,500 ರೂಪಾಯಿ ಕೇಳಿದ್ದಾಗಿ ಪೂಜಾರಾಮ್ ಹೇಳಿಕೊಂಡಿದ್ದಾರೆ. ಪೂಜಾರಾಮ್ ಅವರಿಗೆ ಹಣ ನೀಡಲು ಸಾಧ್ಯವಿರಲಿಲ್ಲ.
ಅಸಹಾಯಕ ಪೂಜಾರಾಮ್ ತನ್ನ ಮಗ ರಾಜನ ದೇಹವನ್ನು ಹೊತ್ತುಕೊಂಡು ಗುಲ್ಶನ್ ಆಸ್ಪತ್ರೆಯಿಂದ ಹೊರಟುಬಿಡುತ್ತಾರೆ. ಆದರೆ ಅವರಿಗೆ ಯಾವುದೇ ವಾಹನ ಸಿಗಲಿಲ್ಲ. ಆಗ ಪೂಜಾರಾಮ್ ಗುಲ್ಶನ್ ಹಾಗೂ ಶವವನ್ನು ಮೊರೆನಾ ನೆಹರೂ ಪಾರ್ಕ್ ಎದುರು ಬಿಟ್ಟು ಬೇರೆ ವಾಹನ ಹುಡುಕಲು ಹೋಗಿದ್ದರು.
ಅರ್ಧಗಂಟೆ ಗುಲ್ಶನ್ ಶವವನ್ನು ಇಟ್ಟುಕೊಂಡು ಅಲ್ಲಿಯೇ ಕುಳಿತಿದ್ದ. ಮೃತ ತಮ್ಮನ ತಲೆಯನ್ನು ತೊಡೆಯಮೇಲಿರಿಸಿಕೊಂಡು ತಲೆಯನ್ನು ನೇವರಿಸುತ್ತಾ ಕುಳಿತಿರುವುದು ಕಂಡು ಬಂದಿತ್ತು. ಹಾಗೆಯೇ ಶವದ ಮೇಲೆ ಹಾರಾಡುತ್ತಿದ್ದ ನೊಣವನ್ನು ಓಡಿಸುತ್ತಿದ್ದ ದೃಶ್ಯವು ಎಂಥಾ ಕಲ್ಲು ಹೃದಯವನ್ನು ಕರಗಿಸುವಂತಿತ್ತು.
Published On - 10:26 pm, Sun, 10 July 22