Vijay Mallya: ವಿಜಯ್ ಮಲ್ಯ ಶಿಕ್ಷೆ ಪ್ರಮಾಣ ಇಂದು ಪ್ರಕಟ; ಏಕನಾಥ್ ಶಿಂದೆ, ವರವರ ರಾವ್ ಪ್ರಕರಣಗಳ ತೀರ್ಪು ಸಾಧ್ಯತೆ
Supreme Court: ನ್ಯಾಯಾಂಗ ನಿಂದನೆ ಪ್ರಕರಣದ ಆರೋಪಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟವಾಗುವ ಸಾಧ್ಯತೆಯಿದೆ.
ದೆಹಲಿ: ಸುಮಾರು 50 ದಿನಗಳ ಬೇಸಿಗೆ ವಿರಾಮದ ನಂತರ ಸುಪ್ರೀಂಕೋರ್ಟ್ (Supreme Court) ಇಂದಿನಿಂದ (ಜುಲೈ 11) ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಲಿದೆ. ರಜೆ ನಂತರ ವಿಚಾರಣೆ ನಡೆಯುವ ಮೊದಲ ದಿನವಾದ ಸೋಮವಾರ ಹಲವು ಪ್ರಮುಖ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ನ ತೀರ್ಪು ಪ್ರಕಟವಾಗುವ ಸಾಧ್ಯತೆಯಿದೆ. ಈ ಪೈಕಿ ವಿಜಯ್ ಮಲ್ಯ (Viyay Mallya), ವರವರರಾವ್, ಏಕನಾಥ ಶಿಂದೆ ಸೇರಿದಂತೆ ಹಲವು ಪ್ರಭಾವಿಗಳ ಬಗೆಗಿನ ಪ್ರಕರಣಗಳಿದ್ದು, ಸುಪ್ರೀಂಕೋರ್ಟ್ ನೀಡಬಹುದಾದ ತೀರ್ಪಿನ ಬಗ್ಗೆ ದೇಶದಾದ್ಯಂತ ಕುತೂಹಲ ವ್ಯಕ್ತವಾಗಿದೆ.
ನ್ಯಾಯಾಂಗ ನಿಂದನೆ ಪ್ರಕರಣದ ಆರೋಪಿಯಾಗಿರುವ ಉದ್ಯಮಿ ವಿಜಯ್ ಮಲ್ಯಗೆ ಇಂದು ಶಿಕ್ಷೆ ಪ್ರಮಾಣ ಪ್ರಕಟವಾಗುವ ಸಾಧ್ಯತೆಯಿದೆ. ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಉದಯ್ ಲಲಿತ್, ಪಿ.ಎಸ್.ನರಸಿಂಹ, ಎಸ್.ರವೀಂದ್ರ ಭಟ್ ಅವರಿರುವ ವಿಭಾಗೀಯ ಪೀಠವು ಮಲ್ಯ ಪ್ರಕರಣದ ವಿಚಾರಣೆ ನಡೆಸಿದೆ. ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಜಯ್ ಮಲ್ಯ ತಪ್ಪಿತಸ್ಥ ಎಂದು ನ್ಯಾಯಾಲಯ ಈ ಮೊದಲೇ ಘೋಷಿಸಿತ್ತು. ಆದರೆ ಶಿಕ್ಷೆಯ ಪ್ರಮಾಣ ಘೋಷಿಸಿರಲಿಲ್ಲ. ಇಂದು ಉದ್ಯಮಿ ವಿಜಯ್ ಮಲ್ಯ ಅನುಪಸ್ಥಿತಿಯಲ್ಲಿ ಶಿಕ್ಷೆಯ ಪ್ರಮಾಣ ಪ್ರಕಟವಾಗಲಿದೆ.
ನ್ಯಾಯಾಲಯದ ಆದೇಶ ಉಲ್ಲಂಘಿಸಿ 2017ರಲ್ಲಿ 4 ಕೋಟಿ ಡಾಲರ್ ಹಣ ವರ್ಗಾವಣೆ ಮಾಡಿದ್ದ ಆರೋಪ ವಿಜಯ್ ಮಲ್ಯ ಮೇಲಿದೆ. ಬ್ರಿಟಿಷ್ ಕಂಪನಿ ಡಿಯೋಗೋದಿಂದ ಪಡೆದಿದ್ದ ಹಣವನ್ನು ಮಲ್ಯ ತನ್ನ ಮಕ್ಕಳ ಹೆಸರಿಗೆ ವರ್ಗಾಯಿಸಿದ್ದರು. ಈ ಪ್ರಕ್ರಿಯೆ ವಿರುದ್ಧ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India – SBI) ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಸ್ಟೇಟ್ ಬ್ಯಾಂಕ್ ಇಂಡಿಯಾಕ್ಕೆ ₹ 9,000 ಕೋಟಿ ಸಾಲ ಮರುಪಾವತಿ ಮಾಡಲು ವಿಫಲವಾಗಿರುವ ಉದ್ಯಮಿ ವಿಜಯ್ ಮಲ್ಯ, ಬ್ಯಾಂಕ್ ಸೂಚನೆಯ ಹೊರತಾಗಿಯೂ ತಮ್ಮ ಹಣಕಾಸು ಹಾಗೂ ಸ್ಥಿರಾಸ್ತಿಯನ್ನು ಈವರೆಗೆ ಘೋಷಿಸಿಕೊಂಡಿಲ್ಲ. ಬ್ರಿಟನ್ನ ಮದ್ಯ ತಯಾರಿಕಾ ಕಂಪನಿ ಡಿಯಾಗೊದಿಂದ ಪಡೆದಿರುವ 4 ಕೋಟಿ ಡಾಲರ್ ಮೊತ್ತದಷ್ಟು ಹಣ ಏನಾಯಿತು ಎನ್ನುವ ಬಗ್ಗೆಯೂ ಮಲ್ಯ ಮಾಹಿತಿ ನೀಡಿಲ್ಲ. ಈ ಹಣವನ್ನು ಮಲ್ಯ ಅಕ್ರಮವಾಗಿ ತಮ್ಮ ಮಕ್ಕಳ ಹೆಸರಿಗೆ ವರ್ಗಾವಣೆ ಮಾಡಿದ್ದಾರೆ. ಇದು ತಪ್ಪು ಎಂದು ಸ್ಟೇಟ್ ಬ್ಯಾಂಕ್ ಇಂಡಿಯಾ ವಾದಿಸಿದೆ. ಈ ಪ್ರಕರಣದಲ್ಲಿ ಮಲ್ಯ ದೋಷಿ ಎಂದು ನ್ಯಾಯಾಲಯ ಈ ಹಿಂದೆಯೇ ಘೋಷಿಸಿತ್ತು. ಅವರಿಗೆ ಸ್ವತಃ ನ್ಯಾಯಾಲಯಕ್ಕೆ ಹಾಜರಾಗಲು ಎರಡು ಬಾರಿ ಅವಕಾಶ ನೀಡಿತ್ತು. ಅವರು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಅವರ ಅನುಪಸ್ಥಿತಿಯಲ್ಲಿಯೇ ನ್ಯಾಯಾಲಯವು ಇಂದು ಶಿಕ್ಷೆ ಪ್ರಕಟಿಸುವ ಸಾಧ್ಯತೆಯಿದೆ.
ಹಲವು ಪ್ರಮುಖ ಪ್ರಕರಣಗಳ ವಿಚಾರಣೆ
ಸುಪ್ರೀಂಕೋರ್ಟ್ನಲ್ಲಿ ಈ ವಾರ ಹಲವು ಪ್ರಮುಖ ಪ್ರಕರಣಗಳ ವಿಚಾರಣೆ ನಡೆಯಲಿದೆ. ಏಳ್ಗರ್ ಪರಿಷದ್ ಪ್ರಕರಣದ ಆರೋಪಿ ಪಿ.ವರವರ ರಾವ್ ಸಲ್ಲಿಸಿರುವ ಜಾಮೀನು ಅರ್ಜಿ, ಮಹಾರಾಷ್ಟ್ರದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದಿರುವ ಶಿವಸೇನೆ-ಬಿಜೆಪಿ ಮೈತ್ರಿ ಸರ್ಕಾರದ ಸಿಂಧುತ್ವ, ಉತ್ತರ ಪ್ರದೇಶದಲ್ಲಿ ಬುಲ್ಡೋಜರ್ಗಳನ್ನು ಬಳಸುವ ರಾಜ್ಯ ಸರ್ಕಾರದ ಕ್ರಮದ ಬಗ್ಗೆ ನ್ಯಾಯಾಲಯವು ವಾದಗಳನ್ನು ಆಲಿಸಲಿದೆ. ಪ್ರವಾದಿ ಮೊಹಮದ್ ಪೈಗಂಬರ್ ಅವರ ಬಗ್ಗೆ ಬಿಜೆಪಿಯ ಉಚ್ಚಾಟಿತ ವಕ್ತಾರೆ ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ಖಂಡಿಸಿ ಉತ್ತರ ಪ್ರದೇಶದ ವಿವಿಧೆಡೆ ವ್ಯಾಪಕ ಪ್ರತಿಭಟನೆಗಳು ನಡೆದಿದ್ದವು. ಪ್ರತಿಭಟನೆಯಲ್ಲಿ ಪಾಲ್ಗೊಂಡವರನ್ನು ಗುರುತಿಸಿ, ಅವರ ಆಸ್ತಿಗಳನ್ನು ಬುಲ್ಡೋಜರ್ ಬಳಸಿ ಧ್ವಂಸ ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು.
Published On - 9:30 am, Mon, 11 July 22