100 ರೂಪಾಯಿ ಲಂಚ ನೀಡಲು ನಿರಾಕರಿಸಿದ ಪೋರನಿಗೆ ಸಿಕ್ತು ಮನೆ, ನೆರವಿನ ಮಹಾಪೂರ!
ಭೋಪಾಲ್: ಪಾಲಿಕೆ ಸಿಬ್ಬಂದಿಗೆ ಲಂಚ ನೀಡಲು ನಿರಾಕರಿಸಿದ ಪೋರನೊಬ್ಬನ ದಿಟ್ಟತನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಆತನಿಗೆ ನೆರವಿನ ಮಹಾಪೂರವೇ ಹರಿದುಬಂದಿದೆ. ಅಂದ ಹಾಗೆ, ನಾವು ಮಾತಾಡುತ್ತಿರೋದು ಮಧ್ಯ ಪ್ರದೇಶದ ಇಂದೋರ್ ನಗರದ ಬಾಲಕ 13 ವರ್ಷದ ಪಾರಸ್ ರಾಯ್ಕರ್ ಬಗ್ಗೆ. ಕಡು ಬಡಕುಟುಂಬದವನಾದ ಪಾರಸ್ ಅರ್ಧದಲ್ಲೇ ಓದು ಬಿಟ್ಟು ಜೀವನೋಪಾಯಕ್ಕಾಗಿ ಮೊಟ್ಟೆ ಮಾರಲು ಪ್ರಾರಂಭಿಸಿದ್ದ. ತಳ್ಳೋಗಾಡಿಯಲ್ಲಿ ಸರಕನ್ನು ಇಟ್ಟುಕೊಂಡು ಬೀದಿಬದಿ ವ್ಯಾಪಾರಕ್ಕೆ ಇಳಿದಿದ್ದ. ಈ ನಡುವೆ ಲಾಕ್ಡೌನ್ನಿಂದ ಎದುರಾದ ಸಂಕಷ್ಟಗಳಿಂದ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಆದರೆ, […]
ಭೋಪಾಲ್: ಪಾಲಿಕೆ ಸಿಬ್ಬಂದಿಗೆ ಲಂಚ ನೀಡಲು ನಿರಾಕರಿಸಿದ ಪೋರನೊಬ್ಬನ ದಿಟ್ಟತನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುವ ಜೊತೆಗೆ ಆತನಿಗೆ ನೆರವಿನ ಮಹಾಪೂರವೇ ಹರಿದುಬಂದಿದೆ. ಅಂದ ಹಾಗೆ, ನಾವು ಮಾತಾಡುತ್ತಿರೋದು ಮಧ್ಯ ಪ್ರದೇಶದ ಇಂದೋರ್ ನಗರದ ಬಾಲಕ 13 ವರ್ಷದ ಪಾರಸ್ ರಾಯ್ಕರ್ ಬಗ್ಗೆ.
ಕಡು ಬಡಕುಟುಂಬದವನಾದ ಪಾರಸ್ ಅರ್ಧದಲ್ಲೇ ಓದು ಬಿಟ್ಟು ಜೀವನೋಪಾಯಕ್ಕಾಗಿ ಮೊಟ್ಟೆ ಮಾರಲು ಪ್ರಾರಂಭಿಸಿದ್ದ. ತಳ್ಳೋಗಾಡಿಯಲ್ಲಿ ಸರಕನ್ನು ಇಟ್ಟುಕೊಂಡು ಬೀದಿಬದಿ ವ್ಯಾಪಾರಕ್ಕೆ ಇಳಿದಿದ್ದ. ಈ ನಡುವೆ ಲಾಕ್ಡೌನ್ನಿಂದ ಎದುರಾದ ಸಂಕಷ್ಟಗಳಿಂದ ವ್ಯಾಪಾರಕ್ಕೆ ಹೊಡೆತ ಬಿದ್ದಿತ್ತು. ಆದರೆ, ಅನ್ಲಾಕ್ ಬಳಿಕ ಇಂದೋರ್ನಲ್ಲಿ ಬೀದಿ ಬದಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸಿಕೊಡಲಾಯಿತ್ತು. ಹೀಗಾಗಿ, ಪಾರಸ್ ಮತ್ತೊಮ್ಮೆ ಮೊಟ್ಟೆ ವ್ಯಾಪಾರಕ್ಕೆ ಮುಂದಾದ.
ಆದರೆ, ಕೊರೊನಾದ ರುದ್ರನರ್ತನದ ನಡುವೆ ಅಧಿಕಾರಿಗಳ ಲಂಚಾವತಾರ ನಿಲ್ಲಲಿಲ್ಲ. ವ್ಯಾಪಾರ ಮುಂದುವರೆಸಲು 100 ರೂಪಾಯಿ ನೀಡು. ಇಲ್ಲಾಂದ್ರೆ ನಿನ್ನನ್ನ ಇಲ್ಲಿಂದ ಎತ್ತಂಗಡಿ ಮಾಡಿಸುವೆ ಎಂದು ಪಾಲಿಕೆ ಸಿಬ್ಬಂದಿಯೊಬ್ಬ ಈತನ ಬಳಿ ಲಂಚ ಕೇಳೇಬಿಟ್ಟನಂತೆ. ಅಂದು ವ್ಯಾಪಾರ ಆಗದ ಕಾರಣ ಪಾರಸ್ ಹಣ ನೀಡಲು ನಿರಾಕರಿಸಿದ. ಸಿಟ್ಟೆಗೆದ್ದ ಸಿಬ್ಬಂದಿ ಮರುಯೋಚಿಸದೆ ಈತನ ತಳ್ಳೋಗಾಡಿಯನ್ನ ಹಾಗೆ ಮಗುಚಿ ಬಿಟ್ಟನಂತೆ. ಇದರ ಪರಿಣಾಮ ಗಾಡಿಯಲ್ಲಿದ್ದ ಮೊಟ್ಟೆಯೆಲ್ಲಾ ರಸ್ತೆಗೆ ಬಿದ್ದು ಒಡೆದು ಹೋಯ್ತು.
ಎಲ್ಲೆಡೆಯಿಂದ ಹರಿದುಬಂತು ನೆರವಿನ ಮಹಾಪೂರ ಇದರಿಂದ ತೀವ್ರವಾಗಿ ಮನನೊಂದ ಬಾಲಕ ಏನು ಮಾಡಲು ಸಾಧ್ಯ? ತನ್ನ ದುರದೃಷ್ಟವನ್ನ ಶಪಿಸುತ್ತಾ ಮನಸ್ಸಿನ ನೋವು ತೋಡಿಕೊಳ್ಳಲು ಒಂದು ವಿಡಿಯೋ ಮಾಡಿ ಸ್ನೇಹಿತರಿಗೆ ಕಳಿಸಿದ್ದನಂತೆ. ಇದೇ ವಿಡಿಯೋ ಇದೀಗ ಸಖತ್ ವೈರಲ್ ಆಗಿ ಪಾರಸ್ ನೆರವಿಗೆ ಬಂದಿದೆ. ಪುಟ್ಟ ಪೋರನ ದಿಟ್ಟತನವನ್ನ ಮೆಚ್ಚಿ ರಾಜಕೀಯ ನಾಯಕರಿಂದ ಹಿಡಿದು ಜನಸಾಮಾನ್ಯರು ನೆರವಿನ ಹಸ್ತ ಚಾಚಿದ್ದಾರೆ. ಸ್ಥಳೀಯ ಬಿಜೆಪಿ ಶಾಸಕ ರಮೇಶ್ ಮೆಂಡೋಲ ಹುಡುಗನ ವಿಡಿಯೋ ನೋಡಿ ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ ಒಂದು ಮನೆ ನೀಡಿದ್ದಾರೆ.
ಜೊತೆಗೆ, ಮಾಜಿ AICC ಅಧ್ಯಕ್ಷ ರಾಹುಲ್ ಗಾಂಧಿ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮತ್ತು ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಈತನ ನೆರವಿಗೆ ಮುಂದಾಗಿದ್ದಾರೆ. ಬಾಲಕನಿಗೆ ಮತ್ತೊಮ್ಮೆ ಶಾಲೆಗೆ ಸೇರಿಸಲು ಆತನ ಶಿಕ್ಷಣಕ್ಕೆ ತಗಲುವ ವೆಚ್ಚವನ್ನ ತಾವೇ ಭರಿಸುವುದಾಗಿ ಆಶ್ವಾಸನೆ ನೀಡಿದ್ದಾರೆ. ಒಟ್ನಲ್ಲಿ, ಲಂಚಬಾಕ ಅಧಿಕಾರಿಗೆ ಸೆಡ್ಡುಹೊಡೆದ ಪಾರಸ್ ರಾಯ್ಕರ್ಗೆ ಇದೀಗ ಪ್ರಶಂಸೆ ಅಲ್ಲದೆ ನೆರವಿನ ಮಹಾಪೂರವೇ ಹರಿದುಬಂದಿದೆ.
Published On - 5:10 pm, Sun, 26 July 20