ಜಬಲ್‌ಪುರ ಜೂನ್ 22: ಕೌಟುಂಬಿಕ ನ್ಯಾಯಾಲಯ ನೀಡಿರುವ ವಿವಾಹ ವಿಚ್ಛೇದನವನ್ನು (Divorce) ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮಧ್ಯಪ್ರದೇಶ ಹೈಕೋರ್ಟ್ (Madhya Pradesh High Court) ಇತ್ತೀಚೆಗೆ ತಿರಸ್ಕರಿಸಿದ್ದು, ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಲು ಪತ್ನಿ ನಿರಾಕರಿಸುವುದು ಪತಿಯೊಂದಿಗೆ ಮಾಡುವ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಹೇಳಿದೆ. ಹಂಗಾಮಿ ಮುಖ್ಯ ನ್ಯಾಯಮೂರ್ತಿ ಶೀಲ್ ನಾಗು ಮತ್ತು ನ್ಯಾಯಮೂರ್ತಿ ಅಮರ್ ನಾಥ್ (ಕೇಶರವಾಣಿ) ಅವರನ್ನೊಳಗೊಂಡ ಪೀಠವು ಮಹಿಳೆಯ ಮನವಿಯನ್ನು ವಜಾಗೊಳಿಸಿದಾಗ, ಮೇಲ್ಮನವಿದಾರ ಪತ್ನಿ ತನ್ನ ಅತ್ತೆಯ ಮನೆಯಲ್ಲಿ ಮೂರು ದಿನ ಮಾತ್ರ ವಾಸಿಸುತ್ತಿದ್ದರು. ಈ ಅವಧಿಯಲ್ಲಿ ಪತಿ ಪತ್ನಿ ನಡುವೆ ಯಾವುದೇ ದೈಹಿಕ ಸಂಪರ್ಕ ಇರಲಿಲ್ಲ. ಪತ್ನಿ ಮತ್ತು ಪ್ರತಿವಾದಿ ಪತಿ ಕಳೆದ 11 ವರ್ಷಗಳಿಗೂ ಹೆಚ್ಚು ಕಾಲ ಪ್ರತ್ಯೇಕವಾಗಿ ನೆಲೆಸಿದ್ದಾರೆ ಎಂದು ಹೇಳಿದೆ.
ಪ್ರತಿವಾದಿ/ಪತಿಯೊಂದಿಗೆ ದೈಹಿಕ ಸಂಬಂಧವನ್ನು ಹೊಂದಿದ್ದಕ್ಕಾಗಿ ಮೇಲ್ಮನವಿದಾರ/ಪತ್ನಿಯ ನಿರಾಕರಣೆಯು ಪ್ರತಿವಾದಿಯೊಂದಿಗಿನ ಕ್ರೌರ್ಯಕ್ಕೆ ಸಮಾನವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ತನ್ನ ಪತ್ನಿಯ ಕ್ರೌರ್ಯ ಮತ್ತು ಆಕೆ ತೊರೆದು ಹೋಗಿರುವ ಕಾರಣದಿಂದ ವಿಚ್ಛೇದನ ಕೋರಿ ಪತಿಯು ಕೌಟುಂಬಿಕ ನ್ಯಾಯಾಲಯದ ಮುಂದೆ ಸಲ್ಲಿಸಿದ ಅರ್ಜಿಯಲ್ಲಿ, ಹಿಂದೂ ಸಂಪ್ರದಾಯ ಮತ್ತು ವಿಧಿಗಳ ಪ್ರಕಾರ ತನ್ನ ವಿವಾಹವನ್ನು ಮೇ 26, 2013 ರಂದು ನಡೆದಿತ್ತು. ಆಕೆ ಮೊದಲ ರಾತ್ರಿಯೇ ನನ್ನನ್ನು ನಿರಾಕರಿಸಿದಳು. ನಿನ್ನೊಂದಿಗೆ ದೈಹಿಕ ಸಂಬಂಧವನ್ನು ಇರಿಸುವುದಿಲ್ಲ. ಹೆತ್ತವರ ಒತ್ತಡದಲ್ಲಿ ಮದುವೆಯಾದೆ ಎಂದು ಹೇಳಿದ್ದಳು. ಮೇ 29, 2013 ರಂದು ಪರೀಕ್ಷೆಗೆ ಹಾಜರಾಗಲು ಅವಳು ನಮ್ಮ ಮನೆಯಿಂದ ಹೊರಟು ಹೋಗಿದ್ದಾಳೆ. ಆಕೆಯ ಮನೆಯಿಂದ ವಾಪಸ್ ಕರೆತರಲು ಹೋದಾಗ ಅವರ ಪೋಷಕರು ಆಕೆಯನ್ನು ಕಳಿಸಿಕೊಡಲು ನಿರಾಕರಿಸಿದರು ಎಂದು ಪತಿ ಹೇಳಿದ್ದಾರೆ.ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದಂತೆ ಆಕೆ ತನ್ನ ವಿರುದ್ಧ ದೂರು ನೀಡಿದ್ದಾಳೆ ಎಂದು ಪತಿ ಹೇಳಿದ್ದಾರೆ.
ಇತ್ತ ತಾನು ಸ್ವಯಂಪ್ರೇರಣೆಯಿಂದ ಆತನಿಗೆ ವಿಚ್ಛೇದನ ನೀಡುತ್ತಿದ್ದೇನೆ. ನಮ್ಮ ನಡುವೆ ಯಾವುದೇ ಪತಿ-ಪತ್ನಿಯರ ಸಂಬಂಧವಿಲ್ಲ. ಅವನ ಆಸ್ತಿಯಲ್ಲಿ ತನಗೆ ಯಾವುದೇ ಹಕ್ಕಿಲ್ಲ ಅವನು ಬಯಸಿದವರನ್ನು ಮದುವೆಯಾಗಲು ಅವನು ಸ್ವತಂತ್ರನು .ನಾನೂ ಏನೂ ತೆಗೆದುಕೊಳ್ಳುವುದಿಲ್ಲ ಪತ್ನಿ ಅಫಿಡವಿಟ್ ನಲ್ಲಿ ಹೇಳಿದ್ದಾಳೆ. ಮುಂದೆ ಆಕೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪತಿ ಹೇಳಿದ್ದಾನೆ.
ತಮ್ಮ ವಿವಾಹದಿಂದ ಮೇ 28, 2013 ರವರೆಗೆ ಪತಿ-ಪತ್ನಿಯರ ನಡುವೆ ವೈವಾಹಿಕ ಸಂಬಂಧವನ್ನು ನಾವು ಉಳಿಸಿಕೊಂಡಿದ್ದೇವೆ. ನಂತರ ಪತಿ ಮತ್ತು ಅವನ ಕುಟುಂಬ ಸದಸ್ಯರು ವರದಕ್ಷಿಣೆಗೆ ಒತ್ತಾಯಿಸಿ ಕಿರುಕುಳ ನೀಡಲು ಪ್ರಾರಂಭಿಸಿದರು. ತನ್ನ ಪರೀಕ್ಷೆಯು ಜೂನ್ ನಲ್ಲಿದ್ದ ಕಾರಣ ತನ್ನ ಪತಿ ಮತ್ತು ಅವನ ತಂದೆಯೊಂದಿಗೆ ತನ್ನ ಗಂಡನ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಕೋಪಗೊಂಡ ಅತ್ತೆ ವರದಕ್ಷಿಣೆಗಾಗಿ ಒತ್ತಾಯಿಸಲು ಪ್ರಾರಂಭಿಸಿದರು. ನನ್ನ ಪತಿ ನನ್ನನ್ನು ಕರೆದುಕೊಂಡು ಹೋಗಲು ಬರಲಿಲ್ಲ ಎಂದು ಮಹಿಳೆ ಹೇಳಿದ್ದಾರೆ.
ಪತಿ ಮತ್ತು ಅವರ ಕುಟುಂಬ ಸದಸ್ಯರಿಗೆ ಕೌನ್ಸೆಲಿಂಗ್ ಕೂಡ ಮಾಡಲಾಗಿದ್ದು, ಪತಿ ತನಗೆ ಕಿರುಕುಳ ನೀಡುವುದಿಲ್ಲ ಮತ್ತು ಯಾವುದೇ ವರದಕ್ಷಿಣೆ ಕೇಳುವುದಿಲ್ಲ ಎಂದು ಭರವಸೆ ನೀಡಿದರು ಎಂದು ಪತ್ನಿ ತಿಳಿಸಿದ್ದಾರೆ. ತನ್ನ ಪತಿಯೊಂದಿಗೆ ತನ್ನ ಗಂಡನ ಮನೆಯಲ್ಲಿ ವಾಸಿಸಲು ಸಿದ್ಧ ಎಂದು ಅವರು ಹೇಳಿದರು. ಆದರೆ ವರದಕ್ಷಿಣೆಯ ಬೇಡಿಕೆಯಿಂದಾಗಿ ಅವರು ವೈವಾಹಿಕ ಸಂಬಂಧದಿಂದ ಬೇರ್ಪಟ್ಟಿದ್ದಾರೆ. ಪತಿ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ವಜಾಗೊಳಿಸುವಂತೆ ಪತ್ನಿ ಹೈಕೋರ್ಟ್‌ಗೆ ಒತ್ತಾಯಿಸಿದರು.
ಇದನ್ನೂ ಓದಿ: Viral Video: ಕೆಲವೇ ಸೆಕೆಂಡಲ್ಲಿ ನೆಲಸಮ; ಒಂದೇ ವಾರದಲ್ಲಿ ಬಿಹಾರದಲ್ಲಿ 2ನೇ ಸೇತುವೆ ಕುಸಿತ
ಇಬ್ಬರು ಬೇರ್ಪಟ್ಟ ನಂತರ ಮತ್ತು ಪ್ರತ್ಯೇಕತೆಯು ಸಾಕಷ್ಟು ಸಮಯದವರೆಗೆ ಮುಂದುವರಿದರೆ ಮತ್ತು ಅವರಲ್ಲಿ ಒಬ್ಬರು ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದರೆ, ವಿವಾಹ ಸಂಬಂಧ ಮುರಿದುಹೋಗಿದೆ ಎಂದು ಭಾವಿಸಬಹುದಾದ ಸುಪ್ರೀಂ ಕೋರ್ಟ್ ಆದೇಶವನ್ನು ಹೈಕೋರ್ಟ್ ಉಲ್ಲೇಖಿಸಿ ಮಹಿಳೆಯ ಅರ್ಜಿ ವಜಾಗೊಳಿಸಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ