
ನವದೆಹಲಿ, ಮೇ 12: ಪಶ್ಚಿಮ ಏಷ್ಯಾದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದಾಗಿ ಇಂಧನ ಉಳಿಸಲು ಪ್ರಧಾನಿ ನರೇಂದ್ರ ಮೋದಿ (PM Narendra Modi) ಮನವಿ ಮಾಡಿದ್ದರು. ಎಲೆಕ್ಟ್ರಿಕ್ ವಾಹನ, ಸರ್ಕಾರಿ ಸಾರಿಗೆಯನ್ನು ಬಳಸಲು ಕರೆನೀಡಿದ್ದರು. ಅವರ ಮನವಿಗೆ ದೇಶಾದ್ಯಂತ ಸಾಕಷ್ಟು ಉತ್ತಮ ಸ್ಪಂದನೆ ಬರುತ್ತಿದೆ. ಮಧ್ಯಪ್ರದೇಶದ ಹೈಕೋರ್ಟ್ ನ್ಯಾಯಾಧೀಶರು ಕೂಡ ಪ್ರಧಾನಿ ಮೋದಿಯ ಮನವಿಗೆ ಸ್ಪಂದಿಸಿ, ನ್ಯಾಯಾಲಯಕ್ಕೆ ಕಾರಿನ ಬದಲು ಸೈಕಲ್‌ನಲ್ಲಿ ಆಗಮಿಸಿದ್ದಾರೆ. ಈ ವಿಡಿಯೋ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಅಮೆರಿಕ-ಇರಾನ್ ಯುದ್ಧದಿಂದಾಗಿ ನಡೆಯುತ್ತಿರುವ ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ಇಂಧನ ಉಳಿಸಲು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಮಾಡಿದ ಮನವಿಗೆ ಪ್ರತಿಕ್ರಿಯೆಯಾಗಿ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಾಧೀಶೆ ನ್ಯಾಯಮೂರ್ತಿ ದ್ವಾರಕಾ ಧೀಶ್ ಬನ್ಸಾಲ್ ಇಂದು ನ್ಯಾಯಾಲಯಕ್ಕೆ ಸೈಕಲ್ ಸವಾರಿ ಮಾಡಿಕೊಂಡು ಆಗಮಿಸಿದ್ದಾರೆ. ಅವರ ಹಿಂದೆ ಭದ್ರತಾ ಸಿಬ್ಬಂದಿ ಕೂಡ ಸೈಕಲ್ನಲ್ಲಿಯೇ ಆಗಮಿಸಿದ್ದಾರೆ.
ಜಬಲ್ಪುರ ಹೈಕೋರ್ಟ್ ಪೀಠದಲ್ಲಿ ನಿಯೋಜಿತರಾಗಿರುವ ನ್ಯಾಯಮೂರ್ತಿ ಬನ್ಸಾಲ್, ಸಿವಿಲ್ ಲೈನ್ಸ್ ಪ್ರದೇಶದಲ್ಲಿರುವ ತಮ್ಮ ಅಧಿಕೃತ ನಿವಾಸದಿಂದ ನ್ಯಾಯಾಲಯದ ಆವರಣಕ್ಕೆ ಸುಮಾರು 3 ಕಿಲೋಮೀಟರ್ ಸೈಕಲ್‌ನಲ್ಲಿ ಪ್ರಯಾಣಿಸಿದರು, ಅವರ ಜೊತೆಗೆ ನ್ಯಾಯಾಲಯದ ಸಿಬ್ಬಂದಿಯೂ ಇದ್ದರು.
ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ
ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡ ವಿಡಿಯೋದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಇಂಧನ ಉಳಿತಾಯ ಸೇರಿದಂತೆ ಇತರ ವಿಷಯಗಳ ಬಗ್ಗೆ ಮನವಿ ಮಾಡುವುದನ್ನು ನಾನು ಗಮನಿಸಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಹೈಕೋರ್ಟ್‌ಗೆ ಸೈಕಲ್‌ನಲ್ಲಿ ಹೋಗಿ ಸಾಮಾನ್ಯ ಜನರಿಗೆ ಸಾಧ್ಯವಾದಾಗಲೆಲ್ಲಾ ಕಡಿಮೆ ದೂರಕ್ಕೆ ಪ್ರಯಾಣಿಸಲು ಸೈಕಲ್ ಬಳಸುವ ಸಂದೇಶ ನೀಡಬೇಕೆಂದು ನಾನು ಸೈಕಲ್ನಲ್ಲೇ ಕೋರ್ಟ್ಗೆ ತೆರಳಿದೆ ಎಂದು ನ್ಯಾಯಮೂರ್ತಿ ಬನ್ಸಾಲ್ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ