
ಮೊರೆನಾ, ನವೆಂಬರ್ 17: ಮಧ್ಯಪ್ರದೇಶದ (Madhya Pradesh) ಮೊರೆನಾದ ಮೇಯರ್ ಮುಂದೆ ಸ್ಥಳೀಯ ನಿವಾಸಿಯಿಂದ ಲಂಚ ಕೇಳುತ್ತಿದ್ದ ಕಂದಾಯ ಅಧಿಕಾರಿಯೊಬ್ಬರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ. ಮೊರೆನಾ ಮುನ್ಸಿಪಲ್ ಕಾರ್ಪೊರೇಷನ್ ಕಚೇರಿಯಲ್ಲಿ ಒಂದು ದೊಡ್ಡ ಹಗರಣ ಬೆಳಕಿಗೆ ಬಂದಿದೆ. ಕಟ್ಟಡಕ್ಕೆ ಲೈಸೆನ್ಸ್ ನೀಡಲು ಪುರಸಭೆ ಮತ್ತು ಕಂದಾಯ ಇಲಾಖೆಯ ನೌಕರರು ಲಂಚ ಸ್ವೀಕರಿಸಿದ್ದಾರೆ ಎಂಬ ಗಂಭೀರ ಆರೋಪ ಮೇಯರ್ ಎದುರಲ್ಲೇ ಸಾಬೀತಾಗಿದೆ. ಪಂಕಜ್ ರಾಥೋಡ್ ಎಂಬ ಯುವಕ ತನ್ನ ಜಾಣತನದಿಂದ ಮೇಯರ್ ಮುಂದೆಯೇ ಕಂದಾಯ ಇಲಾಖೆಯ ಸಿಬ್ಬಂದಿಗೆ ಫೋನ್ ಮಾಡಿ ಅವರ ಕೃತ್ಯಗಳನ್ನು ಸಾಕ್ಷಿ ಸಮೇತ ಬಹಿರಂಗಪಡಿಸಿದ್ದಾನೆ.
ನೌಕರರೊಂದಿಗಿನ ಈ ಫೋನ್ ಸಂಭಾಷಣೆಯ ಸಮಯದಲ್ಲಿ ಮೇಯರ್ ಮುಂದೆಯೇ ಇಡೀ ಲಂಚ ಹಗರಣ ಬಯಲಾಗಿದೆ. ಈ ವಿಡಿಯೋ ವೈರಲ್ ಆಗಿದ್ದು, ಆ ಯುವಕನ ಜಾಣತನಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ ಮತ್ತು ಸರ್ಕಾರಿ ವಲಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರಕ್ಕೆ ಆಕ್ಷೇಪ ವ್ಯಕ್ತವಾಗಿದೆ.
ಕಂದಾಯ ಇಲಾಖೆಯ ಅಧಿಕಾರಿ ಸೇರಿದಂತೆ ಪುರಸಭೆಯ ನಿರ್ಮಾಣ ಸಂಸ್ಥೆಗೆ ಪರವಾನಗಿ ನೀಡುವಲ್ಲಿ ಭಾಗಿಯಾಗಿರುವ ಎಲ್ಲಾ ಅಧಿಕಾರಿಗಳು ತಮ್ಮಿಂದ ಲಂಚ ಕೇಳಿದ್ದಾರೆ ಎಂದು ಪಂಕಜ್ ರಾಥೋಡ್ ಆರೋಪಿಸಿದ್ದರು. ಆದರೆ, ಇದಕ್ಕೆ ಸಾಕ್ಷಿ ಏನಿದೆ? ಎಂದು ಮೇಯರ್ ಕೇಳಿದ್ದರು. ಈ ವೇಳೆ ಮೇಯರ್ ಮುಂದೆಯೇ ಆ ಅಧಿಕಾರಿಯೊಂದಿಗೆ ಮಾತನಾಡಿದ ಪಂಕಜ್ ಯಾರಿಗೆ ಹಣ ನೀಡಬೇಕು, ಹೇಗೆ ನೀಡಬೇಕು, ಎಷ್ಟು ಕೊಡಬೇಕು? ಎಂದು ಆ ಅಧಿಕಾರಿಯಿಂದಲೇ ಮಾಹಿತಿ ಪಡೆದಿದ್ದಾನೆ. ಆ ಅಧಿಕಾರಿ ಹೇಳಿದ ಲೆಕ್ಕ ನೋಡಿ ಮೇಯರ್ ಕೂಡ ಶಾಕ್ ಆಗಿ ಕುಳಿತಿದ್ದಾರೆ.
ಇದನ್ನೂ ಓದಿ: ಕೊಡು ನನ್ ಮಾಮೂಲಿ 1000 ರೂ: ರಾಮನಗರ ಆರ್ಟಿಒ ಕಚೇರಿಯಲ್ಲಿ ಲಂಚಕ್ಕೆ ಬೇಡಿಕೆ, ವಿಡಿಯೋ ವೈರಲ್
ಪಂಕಜ್ ತನ್ನ ಜಮೀನನ್ನು ವರ್ಗಾಯಿಸಿ ಕಟ್ಟಡ ಪರವಾನಗಿಗಳನ್ನು ಪಡೆಯಬೇಕಾಗಿತ್ತು. ಇದಕ್ಕಾಗಿ, ಅವರು ಪುರಸಭೆಯ ಗುಮಾಸ್ತರನ್ನು ಸಂಪರ್ಕಿಸಿದರು. ಆಗ ಅವರ ಬಳಿ ಲಂಚ ಕೇಳಲಾಯಿತು. ಹಣವನ್ನು ಪಾವತಿಸಿದರೂ ಅವರ ಕೆಲಸ ಆಗಲಿಲ್ಲ. ಆಗ ಅವರು ಮೇಯರ್ ಬಳಿಗೆ ಹೋಗಿ ಸತ್ಯವನ್ನು ಬಹಿರಂಗಪಡಿಸಿದರು. ಆತನ ಆರೋಪವನ್ನು ಮೇಯರ್ ಒಪ್ಪಲಿಲ್ಲ.
ಆಗ ಆ ಯುವಕ ಅಧಿಕಾರಿಗಳಿಗೆ ಕರೆ ಮಾಡಿ ಮೇಯರ್ ಎದುರಲ್ಲೇ ದುಡ್ಡಿನ ಲೆಕ್ಕಾಚಾರದ ಬಗ್ಗೆ ಪ್ರಸ್ತಾಪಿಸಿದನು. ಆಗ ಆ ಅಧಿಕಾರಿ ಆ ಯುವಕ ಮೇಯರ್ ಜೊತೆಗಿದ್ದಾನೆ ಎಂಬುದರ ಅರಿವಿಲ್ಲದೆ ಯಾರಿಗೆ ಎಷ್ಟು ಲಂಚ ಕೊಡಬೇಕೆಂಬುದನ್ನು ವಿವರಿಸಿದನು. ಇದನ್ನು ಕೇಳಿ ಮೇಯರ್ ಕೂಡ ಆಘಾತಕ್ಕೊಳಗಾದರು.
ಇದನ್ನೂ ಓದಿ: ಕುಡಿದು ಬರ್ತಿದ್ದ ಡ್ರೈವರ್ಗಳಿಗೆ ಲಂಚ ಪಡೆದು ಡ್ಯೂಟಿ: ಅಧಿಕಾರಿಗಳಿಗೆ ಶಾಕ್ಕೊಟ್ಟ BMTC
ಈ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಮೇಯರ್, ಈ ವಿಷಯದಲ್ಲಿ ನಾನು ತಕ್ಷಣ ಆಯುಕ್ತರಿಗೆ ವರದಿಯನ್ನು ನೀಡಲು ಸೂಚಿಸಿದ್ದೇನೆ ಮತ್ತು ತಪ್ಪಿತಸ್ಥ ನೌಕರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಸೂಚನೆಗಳನ್ನು ನೀಡಿದ್ದೇನೆ ಎಂದು ಮೊರೆನಾ ಮೇಯರ್ ಶಾರದಾ ಸೋಲಂಕಿ ಹೇಳಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ