ಮುಖ್ಯಮಂತ್ರಿ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ಫಡ್ನವೀಸ್ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಮುಖಾಮುಖಿಯಾದರು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 30, 2021 | 10:56 PM

ಠಾಕ್ರೆ ಅವರೊಂದಿಗೆ ಸಂಪುಟದ ಕೆಲ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ ಕುಂಟೆ ಇದ್ದರು. ಫಡ್ನವೀಸ್ ಅವರೊಂದಿಗೆ ಬಿಜೆಪಿಯ ಧುರೀಣರು, ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ನಲ್ಲಿ ವಿರೋದ ಪಕ್ಷದ ನಾಯಕರಾಗಿರುವ ಪ್ರವೀಣ್ ದಾರೆಕರ್ ಇದ್ದರು.

ಮುಖ್ಯಮಂತ್ರಿ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ಫಡ್ನವೀಸ್ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಮುಖಾಮುಖಿಯಾದರು!
ಉಧವ್ ಠಾಕ್ರೆ ಮತ್ತು ದೇವೇಂದ್ರ ಫಡ್ನಾವಿಸ್
Follow us on

ಮಹಾರಾಷ್ಟ್ರದ ಮುಖ್ಯಮಂತ್ರಿ ಉಧವ್ ಠಾಕ್ರೆ ಮತ್ತು ವಿರೋಧ ಪಕ್ಷದ ನಾಯಕ ದೇವೇಂದ್ರ ಫಡ್ನಾವಿಸ್ ಅವರು ಶುಕ್ರವಾರ ಬೆಳಗ್ಗೆ ಕೊಲ್ಹಾಪುರದಲ್ಲಿ ಏಕಕಾಲಕ್ಕೆ ಪ್ರತ್ಯಕ್ಷರಾಗಿ ಜನರಲ್ಲಿ ಆಚ್ಚರಿ ಮೂಡಿಸಿದರು. ಇಬ್ಬರು ನಾಯಕರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ನಗರಕ್ಕೆ ಆಗಮಿಸಿದ್ದರು. ಮುಖಾಮುಖಿಯಾದ ನಂತರ ಅವರಿಬ್ಬರು ಪ್ರವಾಹ ಪರಿಸ್ಥಿತಿ ಮತ್ತು ಪುನರ್ವಸತಿ ವಿಷಯಗಳ ಬಗ್ಗೆ ಚರ್ಚಿಸಿದರು.

‘ಅವರು ಅಲ್ಲಿಗೆ ಹೋಗಿದ್ದು ಗೊತ್ತಿತ್ತು, ನಾನು ಸಹ ಅದೇ ಸ್ಥಳಕ್ಕೆ ಭೇಟಿ ನಿಡುತ್ತಿದ್ದರಿಂದ ಅವರಿಗೆ ಅಲ್ಲೇ ಸ್ವಲ್ಪ ಹೊತ್ತು ಕಾಯಲು ತಿಳಿಸಿದೆ. ತೊಂದರೆಯಲ್ಲಿರುವ ಜನರಿಗೆ ನೆರವಾಗುವ ಕೆಲಸ ನಾವು ಮಾಡುತ್ತಿದ್ದೇವೆ. ಇಲ್ಲಿ ರಾಜಕೀಯದ ಪ್ರಶ್ನೆ ಉದ್ಭವಿಸುವುದಿಲ್ಲ. ಸರ್ಕಾರದಲ್ಲಿ ಮೂರು ಪಾರ್ಟಿಗಳಿವೆ ಮತ್ತು ಫಡ್ನವೀಸ್ ಅವರು ನಾಲ್ಕನೇ ಪಕ್ಷವನ್ನು ಪ್ರತಿನಿಧಿಸುತ್ತಾರೆ. ಪ್ರವಾಹ ಪರಿಸ್ಥಿತಿಯ ಬಗ್ಗೆ ನಾವು ಮುಂಬೈಯಲ್ಲಿ ಸಭೆಯೊಂದನ್ನು ನಡೆಸಲಿದ್ದು ಆದಕ್ಕೆ ಅವರನ್ನು ಆಹ್ವಾನಿಸುತ್ತಿರುವುದಾಗಿ ನಾನು ಹೇಳಿದೆ,’ ಎಂದು ಠಾಕ್ರೆ ಹೇಳಿದರು.

ನಂತರ ಸುದ್ದಿಗಾರರೊಂದಿಗೆ ಮಾತಾಡಿದ ಫಡ್ನವೀಸ್ ಅವರು, ಪ್ರವಾಹ ಪರಿಹಾರಕ್ಕೆ ಸಂಬಂಧಿಸಿಂತೆ ಒಂದು ದೀರ್ಘಾವದಿಯ ಯೋಜನೆ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿದೆ ಎಂದು ಹೇಳಿದರು.

‘ಮುಖ್ಯಮಂತ್ರಿಗಳ ಜೊತೆ ನಾನು ಪ್ರವಾಹ ಪರಿಸ್ಥಿತಿ ಬಗ್ಗೆ ಮಾತಾಡಿದೆ. ಒಂದು ದೀರ್ಘಕಾಲಿಕ ಯೋಜನೆ ಕುರಿತು ನಾವು ಯೋಚಿಸಬೇಕಿದೆ ಅಂತ ಅವರು ಹೇಳಿದರು. ಈ ಭಾಗದ ಜನರಿಗೆ ತಕ್ಷಣವೇ ಪರಿಹಾರ ಒದಗಿಸುವ ಬಗ್ಗೆಯೂ ನಾವು ಮಾತುಕತೆ ನಡೆಸಿದೆವು,’ ಎಂದು ಅವರು ಫಢ್ನವೀಸ್ ಹೇಳಿದರು.

ಠಾಕ್ರೆ ಅವರೊಂದಿಗೆ ಸಂಪುಟದ ಕೆಲ ಸಚಿವರು ಮತ್ತು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೀತಾರಾಮ ಕುಂಟೆ ಇದ್ದರು. ಫಡ್ನವೀಸ್ ಅವರೊಂದಿಗೆ ಬಿಜೆಪಿಯ ಧುರೀಣರು, ಮತ್ತು ಮಹಾರಾಷ್ಟ್ರ ವಿಧಾನ ಪರಿಷತ್ನಲ್ಲಿ ವಿರೋದ ಪಕ್ಷದ ನಾಯಕರಾಗಿರುವ ಪ್ರವೀಣ್ ದಾರೆಕರ್ ಇದ್ದರು.

ಠಾಕ್ರೆ ಮತ್ತು ಫಡ್ನವೀಸ್ ಅವರು ಕೊಂಕಣ ಪ್ರಾಂತ್ಯದಲ್ಲಿ ಭಾರಿ ಮಳೆಯಿಂದ ತೊಂದರೆಗೆ ಸಿಲುಕಿರುವ ಪ್ರದೇಶಳಿಗೂ ಭೇಟಿ ನೀಡಿದರು. ಶುಕ್ರವಾರದಂದು ಇಬ್ಬರೂ ಕೊಲ್ಹಾಪುರ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿದಾಗ ಮುಖಾಮುಖಿಯಾದರು. ಅವರು ಕೆಲ ನಿಮಿಷಗಳ ಕಾಲ ಮಾತುಕತೆ ನಡೆಸಿದಾಗ ಸ್ಥಳೀಯರು ಮತ್ತು ಪಕ್ಷದ ಕಾರ್ಯಕರ್ತರು ಅವರನ್ನು ಸುತ್ತುವರಿದಿದ್ದರು.

ಹಿಂದೆ ಶತ್ರು ಪಕ್ಷಗಳಾಗಿದ್ದ ಎನ್ ಸಿ ಪಿ ಮತ್ತು ಕಾಂಗ್ರೆಸ್ನೊಂದಿಗೆ ಕೈ ಜೋಡಿಸಿ ಶಿವ ಸೇನಾ ಸರ್ಕಾರ ರಚಿಸಿ ಬಿಜೆಪಿಯನ್ನು ಅಧಿಕಾರದಿಂದ ಹೊರಗಿಟ್ಟ ನಂತರ ಠಾಕ್ರೆ ಮತ್ತು ಫಡ್ನವೀಸ್ ನಡುವೆ ಉತ್ತಮ ಬಾಂಧವ್ಯವಿಲ್ಲ. ಕಳೆದ ವಿಧಾನ ಸಭೆ ಚುನಾವಣೆ ನಂತರ ಬಿಜೆಪಿ, ಮುಖ್ಯಮಂತ್ರಿಯ ಹುದ್ದೆಯನ್ನು ಶಿವ ಸೇನಾದೊಂದಿಗೆ ಹಂಚಿಕೊಳ್ಳುವ ಬಗ್ಗೆ ತಾನು ನೀಡಿದ ಆಶ್ವಾಸನೆಯಿಂದ ಹಿಂದೆ ಸರಿದ ಕಾರಣ ಠಾಕ್ರೆ ಅವರ ಪಕ್ಷವು, ಕಾಂಗ್ರೆಸ್ ಮತ್ತು ಎನ್ ಸಿ ಪಿ ಜೊತೆ ಸೇರಿ ಸರ್ಕಾರ ರಚಿಸಿತು.

ಅದಾದ ಮೇಲೆ ಫಡ್ನವೀಸ ಅವರು ನಿರಂತರವಾಗಿ ಸೇನೆಯನ್ನು ಟೀಕಿಸುತ್ತಿದ್ದಾರೆ. ಶಿವ ಸೇನೆ ಸಹ, ಬಿಜೆಪಿ ಮತ್ತು ಫಡ್ನವೀಸ್ ತಮ್ಮ ಬದ್ಧತೆಯ ಬಗ್ಗೆ ಸುಳ್ಳು ಹೇಳಿರದಿದ್ದರೆ ಇಂಥ ಸ್ಥಿತಿ ಉದ್ಭವಿಸುತ್ತಿರಲಿಲ್ಲ ಎಂದು ಹೇಳುತ್ತಾ ಬಂದಿದೆ.

ಇದನ್ನೂ ಓದಿ: Maharashtra Rains: ಮಹಾರಾಷ್ಟ್ರದಲ್ಲಿ ಮಳೆ, ಪ್ರವಾಹದ ಅಬ್ಬರ; ಸಾವಿನ ಸಂಖ್ಯೆ 209ಕ್ಕೆ ಏರಿಕೆ, 8 ಜನರು ನಾಪತ್ತೆ