ಭೋಪಾಲ್: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅಕ್ಟೋಬರ್ 11ರಂದು ಉಜ್ಜಯಿನಿಯಲ್ಲಿ ಹೊಸದಾಗಿ ನಿರ್ಮಿಸಲಾದ ಮಹಾಕಾಳೇಶ್ವರ ದೇವಸ್ಥಾನದ ಕಾರಿಡಾರ್ (Mahakaleshwar Temple Corridor) ಉದ್ಘಾಟಿಸಲಿದ್ದಾರೆ. ಇದು ಉಜ್ಜಯಿನಿ ಮಹಾಕಾಳ ಕಾರಿಡಾರ್ ಯೋಜನೆಯ ಮೊದಲ ಹಂತವಾಗಿದ್ದು, ಈ ದೇವಾಲಯದ ಸಂಕೀರ್ಣವನ್ನು 2.82ರಿಂದ ಪ್ರಸ್ತುತ ಗಾತ್ರಕ್ಕಿಂತ ಸುಮಾರು 8 ಪಟ್ಟು ವಿಸ್ತರಿಸಲಾಗುವುದು.
ಮೊದಲ ಹಂತದ ಕಾಮಗಾರಿಯು 900 ಮೀಟರ್ ಉದ್ದದ ಕಾರಿಡಾರ್ ಅನ್ನು ಸ್ಕೋರ್ ಇನ್ಸ್ಟಾಲೇಷನ್, ಥೀಮ್ ಪಾರ್ಕ್, ಹೆರಿಟೇಜ್ ಮಾಲ್, ಇ-ಸಾರಿಗೆ ಸೌಲಭ್ಯಗಳು ಮುಂತಾದವುಗಳನ್ನು ಒಳಗೊಂಡಿದೆ. ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆಶಿಶ್ ಕುಮಾರ್ ಪಾಠಕ್ ಪ್ರಕಾರ, 316 ಕೋಟಿ ರೂ.ಗಳ ಈ ಯೋಜನೆ ಮಿಡ್ ವೇ ಝೋನ್, ಪಾರ್ಕ್, ಕಾರುಗಳು ಮತ್ತು ಬಸ್‌ಗಳಿಗೆ ಬಹು ಅಂತಸ್ತಿನ ಪಾರ್ಕಿಂಗ್, ಸೋಲಾರ್ ಲೈಟಿಂಗ್, ಯಾತ್ರಾರ್ಥಿಗಳಿಗೆ ಸೌಲಭ್ಯ ಕೇಂದ್ರ, ಮೆಗಾ ಎಂಟ್ರಿ, ಗೇಟ್, ನರಸಿಂಗ್ ಘಾಟ್ ರಸ್ತೆ, ನೀರಿನ ಪೈಪ್‌ಲೈನ್ ಮತ್ತು ಒಳಚರಂಡಿ ಮಾರ್ಗವನ್ನು ಒಳಗೊಂಡಿದೆ.
ಈ ಮಹಾಕಾಳೇಶ್ವರ ದೇವಸ್ಥಾನ ಕಾರಿಡಾರ್ನಲ್ಲಿ ಶಿವ ತಾಂಡವ ಶ್ಲೋಕಗಳನ್ನು ಪ್ರದರ್ಶಿಸುವ 108 ಸ್ತಂಭಗಳು ಮತ್ತು ವಿವಿಧ ಕಥೆಗಳನ್ನು ಬಿಂಬಿಸುವ 52 ಭಿತ್ತಿಚಿತ್ರಗಳನ್ನು ಅಳವಡಿಸುವುದರೊಂದಿಗೆ ಬೆಳಕಿನ ಮತ್ತು ಧ್ವನಿ ವ್ಯವಸ್ಥೆಯನ್ನು ಸಹ ಅಭಿವೃದ್ಧಿಪಡಿಸಲಾಗಿದೆ. ಇನ್ನೂ ಹಲವಾರು ಪ್ರತಿಮೆಗಳನ್ನು ಸಹ ನಿರ್ಮಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಕೇವಲ ಚುನಾವಣೆಯನ್ನೇ ಗಮನದಲ್ಲಿಟ್ಟುಕೊಂಡರೆ ನಗರಗಳ ಅಭಿವೃದ್ಧಿ ಅಸಾಧ್ಯ; ಬಿಜೆಪಿ ಮೇಯರ್ಗಳಿಗೆ ಪ್ರಧಾನಿ ಮೋದಿ ಕಿವಿಮಾತು
ಇದಲ್ಲದೆ, 800 ಮೀಟರ್ ಗೋಡೆಯನ್ನೂ ನಿರ್ಮಿಸಲಾಗಿದೆ. 23.90 ಕೋಟಿ ವೆಚ್ಚದಲ್ಲಿ ಸೌಲಭ್ಯ ಕೇಂದ್ರವನ್ನೂ ಸರ್ಕಾರ ನಿರ್ಮಿಸುತ್ತಿದೆ. ಸೌಲಭ್ಯ ಕೇಂದ್ರದಲ್ಲಿ ಸುಮಾರು 4,000 ಭಕ್ತರು ಇರಬಹುದಾಗಿದೆ. 2ನೇ ಹಂತದಲ್ಲಿ ಮಹಾರಾಜವಾಡ, ರುದ್ರಸಾಗರ ನವೀಕರಣ, ಛೋಟಾ ರುದ್ರ ಸಾಗರ ಕೆರೆಯ ಮುಂಭಾಗ, ರಾಮ್ ಘಾಟ್‌ನ ಸೌಂದರ್ಯೀಕರಣ, ವಾಹನ ನಿಲುಗಡೆ ಮತ್ತು ಪ್ರವಾಸೋದ್ಯಮ ಮಾಹಿತಿ ಕೇಂದ್ರ, ಹರಿ ಫಟಕ್ ಸೇತುವೆ ಮತ್ತು ರೈಲ್ವೆ ಕೆಳಸೇತುವೆಗಳ ಅಗಲೀಕರಣ, ರುದ್ರ ಸಾಗರದ ಮೇಲಿನ ಕಾಲು ಸೇತುವೆ, ಮಹಾಕಾಳ್ ಗೇಟ್, ರುದ್ರ ಸಾಗರ ಪಶ್ಚಿಮ ರಸ್ತೆ ಮತ್ತು ಮಹಾಕಾಳ್ ಪ್ರವೇಶ ರಸ್ತೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು.
ಈ ಕಾರಿಡಾರ್ನಲ್ಲಿ ಒಟ್ಟು 108 ಕಂಬಗಳಿವೆ. ಈ ಕಾರಿಡಾರ್ ಸುಂದರವಾದ ಬೆಳಕಿನ ಕೆಲಸ ಮತ್ತು ಶಿಲ್ಪಗಳನ್ನು ಹೊಂದಿದೆ. ಮೊದಲ ಹಂತದಲ್ಲಿ ಮಹಾಕಾಳ್ ಪ್ಲಾಜಾ, ಮಹಾಕಾಳ್ ಕಾರಿಡಾರ್, ಮಿಡ್‌ವೇ ಝೋನ್, ಮಹಾಕಾಳ್ ಥೀಮ್ ಪಾರ್ಕ್, ಘಾಟ್ ಮತ್ತು ಡೆಕ್ ಏರಿಯಾ, ನೂತನ್ ಸ್ಕೂಲ್ ಕಾಂಪ್ಲೆಕ್ಸ್, ಗಣೇಶ್ ಸ್ಕೂಲ್ ಕಾಂಪ್ಲೆಕ್ಸ್, ಪಾರ್ಕಿಂಗ್, ಧರ್ಮಶಾಲಾ, ಪ್ರವಚನ ಭವನ ಮತ್ತು ಅನ್ನ ಕ್ಷೇತ್ರ ನಿರ್ಮಾಣ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ.
ಈ ಕಾರಿಡಾರ್ನ ಪುನರಾಭಿವೃದ್ಧಿ ಕಾರ್ಯವನ್ನು 2 ಹಂತಗಳಲ್ಲಿ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಇದುವರೆಗೆ 316 ಕೋಟಿ ರೂ. ಹೂಡಿಕೆ ಮಾಡಲಾಗಿದೆ. ಪುನರಾಭಿವೃದ್ಧಿ ಕಾರ್ಯದೊಂದಿಗೆ ಈ ಹಿಂದೆ 2.82 ಹೆಕ್ಟೇರ್‌ಗಳಲ್ಲಿ ಹರಡಿರುವ ದೇವಾಲಯ ಸಂಕೀರ್ಣವು ಈಗ 20.82 ಹೆಕ್ಟೇರ್ ಆಗಲಿದೆ. ಮಹಾಕಾಳೇಶ್ವರ ದೇವಸ್ಥಾನದ ಕಾರಿಡಾರ್ ದೇಶದ ಅತಿ ಉದ್ದದ ಕಾರಿಡಾರ್ ಆಗಿದೆ. ಅನನ್ಯ ಕಲಾಕೃತಿಗಳು ಮತ್ತು ಶಿಲ್ಪಗಳಿಂದ ಅಲಂಕರಿಸಲ್ಪಟ್ಟ ಈ ಸಂಪೂರ್ಣ ಕಾರಿಡಾರ್ ವೀಕ್ಷಿಸಲು ಭಕ್ತರಿಗೆ ಸುಮಾರು 5 ಗಂಟೆಗಳು ಬೇಕಾಗುತ್ತದೆ.
Published On - 1:15 pm, Wed, 21 September 22