ದಾಖಲೆ ಬರೆದ ಮಹಾಕುಂಭ; ತ್ರಿವೇಣಿ ಸಂಗಮದಲ್ಲಿ 50 ಕೋಟಿಗೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನ

ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ಮಹಾಕುಂಭ ಇನ್ನೂ ನಡೆಯುತ್ತಿದ್ದು, ತ್ರಿವೇಣಿ ಸಂಗಮದಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಜನವರಿ 13ರಂದು ಪ್ರಾರಂಭವಾದಾಗಿನಿಂದ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳದಲ್ಲಿ 50 ಕೋಟಿಗೂ ಹೆಚ್ಚು ಭಕ್ತರು ಪವಿತ್ರ ಸ್ನಾನ ಮಾಡಿದ್ದಾರೆ. ಇದು ಮಹತ್ವದ ಮೈಲುಗಲ್ಲಾಗಿದೆ ಎಂದು ಸಿಎಂ ಹೇಳಿದ್ದಾರೆ.

ದಾಖಲೆ ಬರೆದ ಮಹಾಕುಂಭ; ತ್ರಿವೇಣಿ ಸಂಗಮದಲ್ಲಿ 50 ಕೋಟಿಗೂ ಹೆಚ್ಚು ಭಕ್ತರಿಂದ ಪವಿತ್ರ ಸ್ನಾನ
Yogi Aditynatah With Rajnath Singh

Updated on: Feb 14, 2025 | 9:59 PM

ಪ್ರಯಾಗರಾಜ್: ಹಿಂದೂಗಳ ಪವಿತ್ರ ಆಚರಣೆಯೆಂದು ಪರಿಗಣಿಸಲ್ಪಡುವ ಉತ್ತರ ಪ್ರದೇಶದ ಪ್ರಯಾಗರಾಜ್​ನಲ್ಲಿ ನಡೆಯುತ್ತಿರುವ ಮಹಾಕುಂಭವು ಜನವರಿ 13ರಂದು ಪ್ರಾರಂಭವಾಯಿತು. ಫೆಬ್ರವರಿ 26ರವರೆಗೆ ಹಿಂದೂಗಳು ಪವಿತ್ರವೆಂದು ಪರಿಗಣಿಸುವ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದ ದಡದಲ್ಲಿ ಮಹಾಕುಂಭ ನಡೆಯಲಿದೆ. ಪ್ರಯಾಗರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದ ಸಂದರ್ಭದಲ್ಲಿ ಇಂದು ಸಂಜೆಯವರೆಗೆ 50 ಕೋಟಿಗೂ ಹೆಚ್ಚು ಭಕ್ತರು ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದ್ದಾರೆ ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರ ಪ್ರದೇಶ ಸರ್ಕಾರದ ಪ್ರಕಾರ, ಮಾನವನ ಇತಿಹಾಸದಲ್ಲಿಯೇ ಯಾವುದೇ ಧಾರ್ಮಿಕ, ಸಾಂಸ್ಕೃತಿಕ ಅಥವಾ ಸಾಮಾಜಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ ಅತಿ ದೊಡ್ಡ ಸಭೆ ಇದಾಗಿದೆ. ಭಾರತದ ಆಳವಾದ ಬೇರೂರಿರುವ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ನೀತಿಯನ್ನು ಒತ್ತಿ ಹೇಳಿದ ಸಿಎಂ ಯೋಗಿ, ದೇಶದಲ್ಲಿ 110 ಕೋಟಿ ಸನಾತನ ಧರ್ಮದ ಅನುಯಾಯಿಗಳಿದ್ದು, ಇಂತಹ ಬೃಹತ್ ಭಾಗವಹಿಸುವಿಕೆಯು ಸನಾತನ ಧರ್ಮದ ಶಾಶ್ವತ ಮೌಲ್ಯಗಳಲ್ಲಿನ ಅಚಲ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಹಾಕುಂಭದಲ್ಲಿ ಪವಿತ್ರಸ್ನಾನ ಮಾಡುವ ನೀರು ಹೇಗೆ ಶುದ್ಧವಾಗುತ್ತೆ ಗೊತ್ತಾ?

ಮಹಾಕುಂಭ ಭಾರತದ ಸಾಮೂಹಿಕ ನಂಬಿಕೆಯ ಅಮೃತ ಕಾಲ ಎಂದು ಯೋಗಿ ಆದಿತ್ಯನಾಥ್ ಬಣ್ಣಿಸಿದ್ದಾರೆ. ಈ ಭವ್ಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವ ಸಂತರು, ಋಷಿಗಳು, ಕಲ್ಪವಾಸಿಗಳು ಮತ್ತು ಭಕ್ತರಿಗೆ ಮುಖ್ಯಮಂತ್ರಿ ಯೋಗಿ ತಮ್ಮ ಕೃತಜ್ಞತೆ ಸಲ್ಲಿಸಿದರು. ಈ ಬೃಹತ್ ಆಧ್ಯಾತ್ಮಿಕ ಸಭೆಯ ಸುಗಮ ಅನುಷ್ಠಾನಕ್ಕೆ ಮಹಾಕುಂಭಮೇಳದ ಆಡಳಿತ, ಸ್ಥಳೀಯ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ನೈರ್ಮಲ್ಯ ಕಾರ್ಮಿಕರು, ಸ್ವಯಂಸೇವಕರು ಮತ್ತು ಧಾರ್ಮಿಕ ಸಂಸ್ಥೆಗಳ ಪ್ರಯತ್ನಗಳನ್ನು ಅವರು ಶ್ಲಾಘಿಸಿದರು.


ಇದನ್ನೂ ಓದಿ: ಮಹಾಕುಂಭದಲ್ಲಿ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್ ಪುಣ್ಯ ಸ್ನಾನ

ಇಂದು (ಫೆಬ್ರವರಿ 14) 92 ಲಕ್ಷಕ್ಕೂ ಹೆಚ್ಚು ಭಕ್ತರು ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದರು. ಇದು ಮಹಾಕುಂಭದಲ್ಲಿ ಭಾಗವಹಿಸಿದ ಒಟ್ಟು ಜನರ ಸಂಖ್ಯೆಯನ್ನು 50 ಕೋಟಿ ದಾಟಿಸಿದೆ. ಮಹಾಕುಂಭ ಪ್ರಾರಂಭವಾಗುವ ಮೊದಲು, ಸರ್ಕಾರವು ಸುಮಾರು 40 ಕೋಟಿಯಿಂದ 45 ಕೋಟಿ ಜನರು ಭಾಗವಹಿಸಲಿದ್ದಾರೆ ಎಂದು ಅಂದಾಜಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ