ಮಹಾರಾಷ್ಟ್ರದ ಸಿಎಂ ಆಗಲಿರುವ ದೇವೇಂದ್ರ ಫಡ್ನವಿಸ್ ಕುರಿತ ಅಚ್ಚರಿಯ ವಿಷಯಗಳಿವು

|

Updated on: Dec 04, 2024 | 4:18 PM

ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಎಲ್ಲರ ನಿರೀಕ್ಷೆಯಂತೆ ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಆಯ್ಕೆಯಾಗಿದ್ದಾರೆ. ನಾಳೆ (ಡಿಸೆಂಬರ್ 5) ದೇವೇಂದ್ರ ಫಡ್ನವಿಸ್ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದು, ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಭಾಗಿಯಾಗಲಿದ್ದಾರೆ. ದೇವೇಂದ್ರ ಫಡ್ನವಿಸ್ ಈ ಬಾರಿ ತಮ್ಮ ಹೆಸರಿನಲ್ಲೂ ಬದಲಾವಣೆ ಮಾಡಿಕೊಂಡಿದ್ದಾರೆ. ಅವರ ಬಗ್ಗೆ ನಿಮಗೆ ಗೊತ್ತಿಲ್ಲದ ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

ಮಹಾರಾಷ್ಟ್ರದ ಸಿಎಂ ಆಗಲಿರುವ ದೇವೇಂದ್ರ ಫಡ್ನವಿಸ್ ಕುರಿತ ಅಚ್ಚರಿಯ ವಿಷಯಗಳಿವು
ಪ್ರಧಾನಿ ಮೋದಿ ಜೊತೆ ದೇವೇಂದ್ರ ಫಡ್ನವಿಸ್
Follow us on

ಮುಂಬೈ: ಮಹಾರಾಷ್ಟ್ರ ರಾಜ್ಯ ಬಿಜೆಪಿ ಶಾಸಕಾಂಗ ಪಕ್ಷದ ನಾಯಕರಾಗಿ ಅವಿರೋಧವಾಗಿ ಆಯ್ಕೆಯಾಗಿರುವ ದೇವೇಂದ್ರ ಫಡ್ನವೀಸ್ ಡಿಸೆಂಬರ್ 5ರಂದು ಮಹಾರಾಷ್ಟ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಮಹಾರಾಷ್ಟ್ರ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟದ ಅದ್ಭುತ ಗೆಲುವಿನ ಶಿಲ್ಪಿಗಳಲ್ಲಿ ಒಬ್ಬರಾದ ಬಿಜೆಪಿಯ ಹಿರಿಯ ನಾಯಕ ದೇವೇಂದ್ರ ಫಡ್ನವೀಸ್ ನಾಳೆ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಬಾರಿ ಅವರು ತಮ್ಮ ಹೆಸರನ್ನು “ದೇವೇಂದ್ರ ಸರಿತಾ ಗಂಗಾಧರರಾವ್ ಫಡ್ನವಿಸ್” ಎಂದು ಬದಲಾಯಿಸಿಕೊಂಡಿರುವುದು ಕುತೂಹಲ ಮೂಡಿಸಿದೆ.

ಪ್ರಮಾಣವಚನ ಸ್ವೀಕಾರ ಸಮಾರಂಭದ ಆಹ್ವಾನ ಪತ್ರಿಕೆಯಲ್ಲಿ ದೇವೇಂದ್ರ ಫಡ್ನವಿಸ್ ಹೆಸರಿನ ಜೊತೆ ಅವರ ತಾಯಿಯ ಹೆಸರು ಸರಿತಾ ಮತ್ತು ಅವರ ತಂದೆಯ ಹೆಸರು ಗಂಗಾಧರ್ ರಾವ್ ಎಂಬ ಎರಡನ್ನೂ ಸೇರಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರ ನಿವಾಸಿಗಳು ತಮ್ಮ ತಂದೆಯ ಹೆಸರನ್ನು ತಮ್ಮ ಮಧ್ಯದ ಹೆಸರನ್ನಾಗಿ ಬಳಸುವುದು ವಾಡಿಕೆಯಾದರೂ ದೇವೇಂದ್ರ ಫಡ್ನವಿಸ್ ಅವರು ಅಧಿಕೃತ ಉದ್ದೇಶಕ್ಕಾಗಿ ತಮ್ಮ ತಾಯಿಯ ಹೆಸರನ್ನು ಬಳಸಿದ್ದು ಇದೇ ಮೊದಲು.

ಈ ವರ್ಷದ ವಿಧಾನಸಭಾ ಚುನಾವಣೆಗೆ ಮುನ್ನ ಸಲ್ಲಿಸಿದ ಅಫಿಡವಿಟ್‌ನಲ್ಲಿ ಬಿಜೆಪಿ ನಾಯಕ ‘ದೇವೇಂದ್ರ ಗಂಗಾಧರ್ ಫಡ್ನವೀಸ್’ ಅನ್ನು ತಮ್ಮ ಹೆಸರನ್ನಾಗಿ ಬಳಸಿದ್ದರು. 2014 ಮತ್ತು 2019ರ ಪ್ರಮಾಣ ವಚನ ಸಮಾರಂಭಕ್ಕೆ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸಿದಾಗ ಅವರ ತಾಯಿಯ ಹೆಸರನ್ನು ಹೇಳಿರಲಿಲ್ಲ. ಆದರೆ, ಈ ಬಾರಿ ಅವರು ಮಧ್ಯದ ಹೆಸರಾಗಿ ತಾಯಿಯ ಹೆಸರನ್ನೂ ಸೇರಿಸಿಕೊಳ್ಳುವ ಮೂಲಕ ಹೊಸ ಸಂಪ್ರದಾಯವನ್ನು ಅನುಸರಿಸಿದ್ದಾರೆ.

ದೇವೇಂದ್ರ ಫಡ್ನವಿಸ್ ಕುರಿತು ಅಚ್ಚರಿಯ ಮಾಹಿತಿಗಳು ಇಲ್ಲಿವೆ…

  1. ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ದೇವೇಂದ್ರ ಫಡ್ನವೀಸ್ ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್​ನಿಂದ ತಮ್ಮ ತಂದೆಯಾಗಿದ್ದ ರಾಜ್ಯ ವಿಧಾನ ಪರಿಷತ್ ಸದಸ್ಯ ಗಂಗಾಧರ್ ರಾವ್ ಫಡ್ನವಿಸ್ ಅವರನ್ನು ಕಳೆದುಕೊಂಡರು. ಗಂಗಾಧರ್ ರಾವ್ ಜನಸಂಘ ಮತ್ತು ಬಿಜೆಪಿಯ ನಾಯಕರಾಗಿದ್ದರು.
  2. ದೇವೇಂದ್ರ ಫಡ್ನವೀಸ್ ಅವರ ಪತ್ನಿ ಅಮೃತಾ ಫಡ್ನವಿಸ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಸಾಮಾಜಿಕ ಕಾರ್ಯಕರ್ತೆಯಾಗಿಯೂ ಗುರುತಿಸಿಕೊಂಡಿದ್ದಾರೆ. ಅವರಿಗೆ ದಿವಿಜಾ ಎಂಬ ಮಗಳು ಇದ್ದಾರೆ.
  3. 54 ವರ್ಷದ ದೇವೇಂದ್ರ ಫಡ್ನವಿಸ್​ ಚಿಕ್ಕವರಾಗಿದ್ದಾಗ ಇಂದಿರಾ ಗಾಂಧಿ ಕಾನ್ವೆಂಟ್​ಗೆ ಸೇರಿದ್ದರು. ಆದರೆ, ಆ ಕಾನ್ವೆಂಟ್ ಹೆಸರು ಇಂದಿರಾ ಗಾಂಧಿ ಎಂದು ಇದ್ದುದರಿಂದ ಅವರು ಆ ಕಾನ್ವೆಂಟ್​ ಬಿಟ್ಟು ಸರಸ್ವತಿ ವಿದ್ಯಾಲಯದಲ್ಲಿ ತಮ್ಮ ಶಿಕ್ಷಣ ಮುಂದುವರೆಸಿದರು. ಇಂದಿರಾ ಗಾಂಧಿಯ ಕಾರಣದಿಂದಾಗಿಯೇ ಅವರ ತಂದೆ ಗಂಗಾಧರ್ ರಾವ್ ಜೈಲು ಶಿಕ್ಷೆ ಅನುಭವಿಸಬೇಕಾದ ಪರಿಸ್ಥಿತಿ ಬಂದಿತ್ತು. ಹೀಗಾಗಿ, ದೇವೇಂದ್ರ ಫಡ್ನವಿಸ್​ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯ ಮೇಲೆ ಆಕ್ರೋಶವಿತ್ತು.
  4. ವಕೀಲರಾಗಬೇಕೆಂಬ ಆಸೆಯಿಟ್ಟುಕೊಂಡಿದ್ದ ದೇವೇಂದ್ರ ಫಡ್ನವಿಸ್ ಕೊನೆಗೆ ರಾಜಕೀಯದಲ್ಲಿ ಗುರುತಿಸಿಕೊಂಡರು. ಕಾಲೇಜು ದಿನಗಳಲ್ಲಿ ಆರ್​ಎಸ್​ಎಸ್​ ವಿದ್ಯಾರ್ಥಿ ವಿಭಾಗವಾದ ಎಬಿವಿಪಿಯಲ್ಲಿ ಸಕ್ರಿಯರಾಗಿದ್ದರು. ನಂತರ ನಾಗ್ಪುರ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ಪರ್ಧಿಸಿದರು. ತಮ್ಮ 27ನೇ ವಯಸ್ಸಿನಲ್ಲಿ ದೇಶದ ಕಿರಿಯ ಮೇಯರ್‌ಗಳಲ್ಲಿ ಒಬ್ಬರಾದರು. 1999ರಲ್ಲಿ ಅವರು ಅವರ ಮೊದಲ ಚುನಾವಣೆಗೆ ಸ್ಪರ್ಧಿಸಿ ಗೆದ್ದರು. ನಂತರ ಮಹಾರಾಷ್ಟ್ರದ ಎರಡನೇ ಬ್ರಾಹ್ಮಣ ಮುಖ್ಯಮಂತ್ರಿಯಾದರು.ಈ ಬಾರಿ 6ನೇ ಬಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದಾರೆ.
  5. 2014ರಲ್ಲಿ ಅವರು ಮೊದಲ ಬಾರಿ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಮರಾಠ ಮೀಸಲಾತಿ ಸಮಸ್ಯೆ, ಮುಂಬೈ-ನಾಗ್ಪುರ ಸಮೃದ್ಧಿ ಮಹಾಮಾರ್ಗ್‌ನಂತಹ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಪ್ರಾರಂಭಿಸುವುದು ಮತ್ತು ಪೊಲೀಸ್ ಸುಧಾರಣೆಗಳನ್ನು ಪ್ರಾರಂಭಿಸುವ ಮೂಲಕ ಪ್ರಮುಖ ಸವಾಲುಗಳನ್ನು ಎದುರಿಸಿದರು. ನೀರಾವರಿ ಹಗರಣವನ್ನು ಬಹಿರಂಗಪಡಿಸಿದರು. ಭ್ರಷ್ಟಾಚಾರದ ವಿರುದ್ಧ ಹೋರಾಡಲು ತಮ್ಮ ಬದ್ಧತೆಯನ್ನು ಪ್ರದರ್ಶಿಸಿದರು.

 

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ