ಮಹಾರಾಷ್ಟ್ರದ ಥಾಣೆಯ ಉಲ್ಲಾಸನಗರದಲ್ಲಿ ಸಿಎಂ ಶಿಂಧೆ (Eknath Shinde) ಬಣದ ಮುಖಂಡ ಮಹೇಶ್ ಗಾಯಕ್ವಾಡ್ (Mahesh Gaikwad) ಮೇಲೆ ಗುಂಡಿನ ದಾಳಿ ನಡೆದಿದೆ. ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಮಹೇಶ್ ಗಾಯಕ್ವಾಡ್ಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಮಹೇಶ್ ಗಾಯಕ್ವಾಡ್ ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಉಲ್ಲಾಸನಗರದ ಹಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಗುಂಡಿನ ದಾಳಿ ನಡೆದಿದೆ. ಬಿಜೆಪಿ ಶಾಸಕ ಗಣಪತ್ ಗಾಯಕ್ವಾಡ್ ಬೆಂಬಲಿಗರು ಶಿವಸೇನಾ (ಏಕನಾಥ್ ಶಿಂಧೆ) ಬಣದ ನಾಯಕ ಮಹೇಶ್ ಗಾಯಕ್ವಾಡ್ ಅವರ ಬೆಂಬಲಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಗುಂಡಿನ ದಾಳಿಯಲ್ಲಿ ಸಿಎಂ ಶಿಂಧೆ ಬಣದ ಮುಖಂಡ ಮಹೇಶ್ ಗಾಯಕ್ವಾಡ್ ಹಾಗೂ ಮತ್ತೋರ್ವ ಗಾಯಗೊಂಡಿದ್ದಾರೆ. ಮಹೇಶ್ ಗಾಯಕ್ವಾಡ್ ಮತ್ತು ಅವರ ಬೆಂಬಲಿಗನೊಬ್ಬನಿಗೆ ಐದು ಗುಂಡುಗಳು ತಗುಲಿವೆ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಮಹೇಶ್ ಗಾಯಕ್ವಾಡ್ ಅವರನ್ನು ಥಾಣೆ ನಗರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ವರದಿಗಳ ಪ್ರಕಾರ, ಬಿಜೆಪಿ ಶಾಸಕ ಗಣಪತ್ ಗಾಯಕವಾಡ್ ಹಾಗೂ ಮಹೇಶ್ ಗಾಯಕವಾಡ್ ನಡುವೆ ಜಮೀನಿನ ವಿಚಾರವಾಗಿ ಬಹಳ ದಿನಗಳಿಂದ ವಿವಾದವಿತ್ತು. ಈ ವಿವಾದದಿಂದಾಗಿ ಇಬ್ಬರೂ ಮುಖಂಡರು ಹಾಗೂ ಅವರ ಬೆಂಬಲಿಗರು ದೂರು ನೀಡಲು ಶುಕ್ರವಾರ ತಡರಾತ್ರಿ ಹಿಲ್‌ಲೈನ್ ಪೊಲೀಸ್ ಠಾಣೆಗೆ ಬಂದಿದ್ದರು. ಹಿರಿಯ ಇನ್‌ಸ್ಪೆಕ್ಟರ್ ಅನಿಲ್ ಜಗತಾಪ್ ಅವರ ಸಭಾಂಗಣದಲ್ಲಿ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಮತ್ತು ನಗರ ಮುಖ್ಯಸ್ಥ ಮಹೇಶ್ ಗಾಯಕ್ವಾಡ್ನ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದ್ದು ಈ ವೇಳೆ ಬಿಜೆಪಿ ಶಾಸಕ ಗಣಪತ್ ಗಾಯಕ್‌ವಾಡ್ ಅವರ ಬೆಂಬಲಿಗರು ಗುಂಡು ಹಾರಿಸಿದ್ದಾರೆ. ಇದರಿಂದ ಇಬ್ಬರು ಗಾಯಗೊಂಡಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ಡಿಸಿಪಿ ಸುಧಾಕರ ಪತ್ತಾರೆ ತಿಳಿಸಿದ್ದಾರೆ.
ಇದನ್ನೂ ಓದಿ: ಲಂಚ ಆರೋಪ: ಅರವಿಂದ್ ಕೇಜ್ರಿವಾಲ್ ಮನೆಗೆ ಬಂದು ನೋಟಿಸ್ ನೀಡಿದ ದೆಹಲಿ ಕ್ರೈಂ ಬ್ರಾಂಚ್
ಈ ಗುಂಡಿನ ದಾಳಿಯಲ್ಲಿ, ಮಹೇಶ್ ಗಾಯಕ್ವಾಡ್ ಮತ್ತು ಶಿಂಧೆ ಬೆಂಬಲಿಗ ರಾಹುಲ್ ಪಾಟೀಲ್ ತೀವ್ರವಾಗಿ ಗಾಯಗೊಂಡಿದ್ದು, ತಕ್ಷಣ ಚಿಕಿತ್ಸೆಗಾಗಿ ಉಲ್ಲಾಸನಗರದ ಮೀರಾ ಆಸ್ಪತ್ರೆಗೆ ರಾತ್ರಿ 11 ಗಂಟೆಗೆ ಕರೆದೊಯ್ಯಲಾಗಿದೆ. ಆದರೆ ಅವರ ಸ್ಥಿತಿ ಗಂಭೀರವಾದ ನಂತರ, ಇಬ್ಬರೂ ನಾಯಕರನ್ನು ಠಾಣೆಯ ಜುಪಿಟರ್ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.
ಸುದ್ದಿವಾಹಿನಿಯೊಂದರ ಜೊತೆ ದೂರವಾಣಿಯಲ್ಲಿ ಮಾತನಾಡಿದ ಗಣೇಶ್ ಗಾಯಕವಾಡ್, ಘಟನೆಯ ಕುರಿತು ನ್ಯಾಯಾಲಯ ಯಾವುದೇ ತೀರ್ಮಾನ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳನ್ನು ಮಾಡಿದ ಅವರು, ಶಿವಸೇನೆ ಮುಖ್ಯಸ್ಥರ ಆಡಳಿತದಲ್ಲಿ ಅಪರಾಧಗಳು ಹೆಚ್ಚಿವೆ ಎಂದು ಹೇಳಿದರು.
ದೇಶದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ