ಮುಂಬೈ: ಮಹಾರಾಷ್ಟ್ರ ಸರ್ಕಾರವು ರಾಜಕೀಯ ಬಿಕ್ಕಟ್ಟು ಎದುರಿಸುತ್ತಿರುವ ಬೆನ್ನಲ್ಲೇ ಅಧಿಕಾರ ಹೋದರೆ ಮತ್ತೆ ಪಡೆಯಬಹುದು ಎಂಬ ಸಂಜಯ್ ರಾವತ್ (Sanjay Raut)ಹೇಳಿಕೆ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ. ಏಕನಾಥ್ ಶಿಂಧೆ ಹಾಗೂ ಬಂಡಾಯ ಶಾಸಕರು ವಾಪಸಾಗುವ ಭರವಸೆ ಇದೆ. ಏಕನಾಥ್ ಶಿಂಧೆ ನನ್ನ ಸ್ನೇಹಿತರಾಗಿದ್ದು, ದಶಕಗಳ ಕಾಲ ಒಟ್ಟಿಗೆ ಕೆಲಸ ಮಾಡಿದ್ದೇವೆ. ಒಬ್ಬರನ್ನೊಬ್ಬರು ದೂರ ಮಾಡಿಕೊಳ್ಳಲು ಇಬ್ಬರಿಗೂ ಇಷ್ಟವಿಲ್ಲ. ಗಂಟೆಗಳ ಕಾಲ ಅವರ ಜತೆ ಚರ್ಚಿಸಿದ್ದೇನೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಏಕನಾಥ್ ಶಿಂಧೆ ಅವರ ಜತೆ ಇರುವ ಶಾಸಕರ ಬಳಿ ಕೂಡ ಮಾತನಾಡಲಾಗುತ್ತಿದೆ. ಎಲ್ಲಾ ಶಾಸಕರೂ ಶಿವಸೇನೆಯಲ್ಲಿಯೇ ಇರಲಿದ್ದಾರೆ. ನಮ್ಮ ಪಕ್ಷವು ಫೈಟರ್ ಆಗಿದ್ದು, ನಾವು ಅಧಿಕಾರ ಕಳೆದುಕೊಂಡರೂ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದರು.
ಇನ್ನೊಂದೆಡೆ ಬಂಡಾಯ ಶಾಸಕರು ತಮಗೆ ಎನ್ಸಿಪಿ ಹಾಗೂ ಕಾಂಗ್ರೆಸ್ ಮೇಲೆ ಬೇಸರವಿದೆ, ಉದ್ಧವ್ ಠಾಕ್ರೆ ಮೇಲಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಶಿಂಧೆ ಯಾವುದೇ ಬೇಡಿಕೆಗಳನ್ನು ನಮ್ಮ ಮುಂದಿಟ್ಟಿಲ್ಲ ಎಂದು ರಾವತ್ ಸ್ಪಷ್ಟಪಡಿಸಿದರು. ಮುಖ್ಯಮಂತ್ರಿ ಉದ್ಧವ್ ಠಾಕ್ರೆ ತುರ್ತು ಸಂಪುಟ ಸಭೆ ಕರೆದಿದ್ದಾರೆ. ಮಧ್ಯಾಹ್ನ 1 ಕ್ಕೆ ಸಂಪುಟ ಸಭೆ ನಡೆಯಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಏಕನಾಥ ಶಿಂಧೆ ನೇತೃತ್ವದಲ್ಲಿ 30ಕ್ಕೂ ಹೆಚ್ಚು ಶಾಸಕರು ಸರ್ಕಾರದ ವಿರುದ್ಧ ಬಂಡಾಯ ಎದ್ದಿದ್ದಾರೆ. ಪಕ್ಷೇತರ ಶಾಸಕರ ಜೊತೆ ಶಿವಸೇನೆ ಶಾಸಕರು ಗುವಾಹಟಿಯ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದು, ಈ ಹಿನ್ನೆಲೆಯಲ್ಲಿ ಸಂಪುಟ ಸಭೆ ಕರೆಯಲಾಗಿದೆ.
ಮಹಾರಾಷ್ಟ್ರ ನಗರಾಭಿವೃದ್ಧಿ ಸಚಿವರಾಗಿದ್ದ ಏಕನಾಥ್ ಶಿಂಧೆ ಬಂಡಾಯವೆದ್ದಿದ್ದು, ವಿಧಾನ ಪರಿಷತ್ ಮತ್ತು ರಾಜ್ಯ ಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿದ ಹಿನ್ನೆಲೆಯಲ್ಲೇ ಹತ್ತಕ್ಕೂ ಹೆಚ್ಚು ಸೇನಾ ಶಾಸಕರೊಂದಿಗೆ ಸೂರತ್‌ಗೆ ತೆರಳಿದ್ದರು. ಅಲ್ಲದೇ 26ಕ್ಕೂ ಹೆಚ್ಚು ಶಾಸಕರು ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದು, ಶಿಂಧೆ ಜೊತೆ ಗುಜರಾತ್‌ಗೆ ತೆರಳಿದ್ದರು. ಇದೀಗ ರೆಬೆಲ್ ಶಾಸಕರನ್ನ ಸೂರತ್‌ನಿಂದ ಅಸ್ಸಾಂಗೆ ಸ್ಥಳಾಂತರಿಸಲಾಗಿದೆ.
ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆ ನಂತರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ ಆಘಾಡಿ ಸರ್ಕಾರ ಇಕ್ಕಟ್ಟಿಕ್ಕೆ ಸಿಲುಕಿದೆ. ಶಾಸಕರ ಮನವೊಲಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ.
ದೇಶದ ಇತರೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ