ಪಂಜಾಬ್‌ನಲ್ಲಿ ದುಷ್ಕರ್ಮಿಗಳಿಂದ ಮಹಾತ್ಮ ಗಾಂಧೀಜಿ ಪ್ರತಿಮೆ ಧ್ವಂಸ
ಪಂಜಾಬ್‌ನ ಬಟಿಂಡಾದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ದುಷ್ಕರ್ಮಿಗಳ ಗುಂಪು ಧ್ವಂಸಗೊಳಿಸಿದೆ. ಶುಕ್ರವಾರದ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಟಿಂಡಾ: ಪಂಜಾಬ್‌ನ ಬಟಿಂಡಾದಲ್ಲಿ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ದುಷ್ಕರ್ಮಿಗಳ ಗುಂಪು ಧ್ವಂಸಗೊಳಿಸಿದೆ. ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಈಗಾಗಲೇ ತನಿಖೆ ನಡೆಯುತ್ತಿದೆ. ಗಾಂಧಿ ಪ್ರತಿಮೆಯನ್ನು ರಾಮನ್ ಮಂಡಿಯ ಸಾರ್ವಜನಿಕ ಉದ್ಯಾನವನದಲ್ಲಿ ಸ್ಥಾಪಿಸಲಾಗಿತ್ತು. ಇದೀಗ ಆ ಪ್ರತಿಮೆಯನ್ನು ಹೊಡೆದು ಹಾಕಿದ್ದಾರೆ. ಈ ಘಟನೆಯ ಬಗ್ಗೆ ರಮ್ಮನ್ ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆ ಪ್ರದೇಶದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಶೀಘ್ರದಲ್ಲೇ ದುಷ್ಕರ್ಮಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ.
ಈ ವಿಧ್ವಂಸಕ ಕೃತ್ಯವನ್ನು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದು, ಈ ಕೃತ್ಯದಲ್ಲಿ ಭಾಗಿಯಾಗಿರುವವರನ್ನು ಕೂಡಲೇ ಬಂಧಿಸಬೇಕು ಎಂದು ಜಿಲ್ಲಾ ನಗರ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಸಿಂಗ್ ಒತ್ತಾಯಿಸಿದ್ದಾರೆ.
ಕೆನಡಾದ ಒಂಟಾರಿಯೊ ಪ್ರಾಂತ್ಯದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆಯನ್ನು ಅಪವಿತ್ರಗೊಳಿಸಿದ ಕೆಲವೇ ದಿನಗಳಲ್ಲಿ ಭಟಿಂಡಾದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ, ಯೋಂಗ್ ಸ್ಟ್ರೀಟ್ ಮತ್ತು ಗಾರ್ಡನ್ ಅವೆನ್ಯೂ ಪ್ರದೇಶದ ವಿಷ್ಣು ಮಂದಿರದಲ್ಲಿ ಗಾಂಧಿ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿದೆ.
ಸ್ಥಳೀಯ ಪೊಲೀಸರು ವಿಧ್ವಂಸಕ ಕೃತ್ಯವನ್ನು ದ್ವೇಷ ಪ್ರೇರಿತ ಘಟನೆ ಎಂದು ವಿವರಿಸಿದ್ದಾರೆ. ಟೊರೊಂಟೊದಲ್ಲಿರುವ ಭಾರತೀಯ ಕಾನ್ಸುಲೇಟ್ ಜನರಲ್ ಈ ಬಗ್ಗೆ ಟ್ವಿಟ್ ಮಾಡಿದ್ದು ರಿಚ್ಮಂಡ್ ಹಿಲ್‌ನಲ್ಲಿರುವ ವಿಷ್ಣು ದೇವಸ್ಥಾನದಲ್ಲಿರುವ ಮಹಾತ್ಮ ಗಾಂಧಿ ಪ್ರತಿಮೆಯನ್ನು ಅಪವಿತ್ರಗೊಳಿಸಿದ್ದಕ್ಕಾಗಿ ತುಂಬಾ ನೋವು ಉಂಟು ಮಾಡಿದೆ. ಈ ಕ್ರಿಮಿನಲ್, ದ್ವೇಷಪೂರಿತ ವಿಧ್ವಂಸಕ ಕೃತ್ಯವು ಕೆನಡಾದಲ್ಲಿರುವ ಭಾರತೀಯ ಸಮುದಾಯದ ಭಾವನೆಗಳಿಗೆ ಧಕ್ಕೆ ಮಾಡಿದೆ. ಈ ಬಗ್ಗೆ ತನಿಖೆ ಮಾಡಲು ನಾವು ಕೆನಡಾದ ಅಧಿಕಾರಿಗಳೊಂದಿಗೆ ಮಾತನಾಡಿದ್ದು, ಇಲ್ಲಿಯ ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಭರವಸೆ ನೀಡಿದ್ದಾರೆ.