Mallikarjun Kharge: ದೇಶ ಒಡೆಯುವ ಮಾತು ಸಹಿಸಲ್ಲ: ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ

|

Updated on: Feb 02, 2024 | 12:38 PM

ಕಾಂಗ್ರೆಸ್ ಸಂಸದ ಡಿಕೆ ಸುರಶ್ ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆ ಶುಕ್ರವಾರ ಲೋಕಸಭೆ ಹಾಗೂ ರಾಜ್ಯಸಭೆ ಕಲಾಪಗಳಲ್ಲಿಯೂ ಪ್ರತಿಧ್ವನಿಸಿತು. ಹೇಳಿಕೆ ಕುರಿತು ಕಾಂಗ್ರೆಸ್ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಸಂಸದರು ಪಟ್ಟುಹಿಡಿದರು. ಇದೇ ವೇಳೆ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಂಥ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದರು.

Mallikarjun Kharge: ದೇಶ ಒಡೆಯುವ ಮಾತು ಸಹಿಸಲ್ಲ: ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಮಲ್ಲಿಕಾರ್ಜುನ ಖರ್ಗೆ ತೀವ್ರ ಅಸಮಾಧಾನ
ಮಲ್ಲಿಕಾರ್ಜುನ ಖರ್ಗೆ & ಡಿಕೆ ಸುರೇಶ್
Follow us on

ನವದೆಹಲಿ, ಫೆಬ್ರವರಿ 2: ಕಾಂಗ್ರೆಸ್ ಸಂಸದ ಡಿಕೆ ಸುರೇಶ್ (DK Suresh) ಅವರ ಪ್ರತ್ಯೇಕ ರಾಷ್ಟ್ರ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯಸಭೆ ಕಲಾಪದ ವೇಳೆ ಈ ವಿಚಾರವಾಗಿ ಪ್ರಸ್ತಾಪಿಸಿದ ಅವರು, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಾವು ಒಗ್ಗಟ್ಟಾಗಿದ್ದೇವೆ. ಭಾರತಕ್ಕಾಗಿ ಕಾಂಗ್ರೆಸ್ ನಾಯಕಿ ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ತ್ಯಾಗ ಬಲಿದಾನ ಮಾಡಿದ್ದಾರೆ. ಆದಾಗ್ಯೂ, ಲೋಕಸಭೆ ಸಂಸದ (ಡಿ.ಕೆ.ಸುರೇಶ್) ಹಾಗೆ ಹೇಳಿಲ್ಲ ಎಂದು ಹೇಳಿದ್ದು, ಅದನ್ನು ಚರ್ಚಿಸಬಾರದು ಎಂದು ಹೇಳಿದರು.

ದೇಶ ಒಡೆಯುವ ಬಗ್ಗೆ ಯಾರೇ ಮಾತನಾಡಿದರೂ ಸಹಿಸಲ್ಲ. ಯಾವುದೇ ಪಕ್ಷದವರಾಗಿರಲಿ ನಾವು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಖರ್ಗೆ ಹೇಳಿದರು.

ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ‘ಪ್ರತ್ಯೇಕ ದೇಶ’ ಹೇಳಿಕೆಯನ್ನು ಪಿಯೂಷ್ ಗೋಯಲ್ ರಾಜ್ಯಸಭೆಯಲ್ಲಿ ಪ್ರಸ್ತಾಪಿಸಿದರು. ಈ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕ್ಷಮೆಯಾಚಿಸಬೇಕು ಎಂದು ಅವರು ಆಗ್ರಹಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ಖರ್ಗೆ, ದೇಶ ವಿಭಜಿಸುವ ಮಾತುಗಳನ್ನು ಯಾರೇ ಆಡಿದರೂ ಸಹಿಸಲ್ಲ ಎಂದರು.

ಕೇಂದ್ರದ ಮಧ್ಯಂತರ ಬಜೆಟ್​ ಟೀಕಿಸುವ ಭರದಲ್ಲಿ ಡಿಕೆ ಸುರೇಶ್ ಗುರುವಾರ ನೀಡಿದ್ದ ಪ್ರತ್ಯೇಕ ರಾಷ್ಟ್ರ ಹೇಳಿಕೆ ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಕರ್ನಾಟಕದಲ್ಲಿ ಬಿಜೆಪಿ ನಾಯಕರು ಡಿಕೆ ಸುರೇಶ್ ಹೇಳಿಕೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಾಂಗ್ರೆಸ್​ ಕ್ಷಮೆಯಾಚನೆಗೆ ಪ್ರಲ್ಹಾದ್ ಜೋಶಿ ಆಗ್ರಹ

ಡಿಕೆ ಸುರೇಶ್ ಹೇಳಿಕೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಚಿವ ಪ್ರಲ್ಹಾದ್ ಜೋಶಿ, ದೇಶವಿಭಜನೆ ಬಗ್ಗೆ ಮಾತನಾಡಿ ಸಂವಿಧಾನಕ್ಕೆ ಅಪಮಾನ ಮಾಡಿದ್ದಾರೆ. ಅನುದಾನ ನೀಡುತ್ತಿಲ್ಲ ಎಂಬ ಸುಳ್ಳು ಆರೋಪ ಮಾಡಿ ವಿಭಜನೆ ಬಗ್ಗೆ ಮಾತನಾಡಿದ್ದಾರೆ. ದೇಶ ವಿಭಜನೆ ಮಾಡುವ ಕಾಂಗ್ರೆಸ್​​ನ ಪ್ರಯತ್ನ ಇನ್ನೂ ಮುಂದುವರೆದಿದೆ. ಈ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ನೀಡಬೇಕು ಹಾಗೂ ಕ್ಷಮೆ ಕೇಳಬೇಕು. ಇದು ಸಂವಿಧಾನಕ್ಕೆ ಮಾಡಿದ ಘೋರ ಅಪಮಾನ. ಅಷ್ಟೆ ಅಲ್ಲದೆ ತನಿಖೆಯನ್ನು ನೈತಿಕ ಸಮಿತಿಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.

ನಿರ್ಮಲಾ ಸೀತಾರಾಮನ್ ಖಂಡನೆ

ಸಂಸದ ಡಿ.ಕೆ.ಸುರೇಶ್​ ದೇಶವಿಭಜನೆ ಹೇಳಿಕೆಯನ್ನು ರಾಜ್ಯಸಭೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖಂಡಿಸಿದ್ದಾರೆ. ದೇಶದ ಏಕತೆ, ಸಾರ್ವಭೌಮತ್ವದ ಬಗ್ಗೆ ಯಾರೂ ಮಾತನಾಡಬಾರದು. ಸಂಸದ ಡಿ.ಕೆ.ಸುರೇಶ್​ ಹೇಳಿಕೆಯನ್ನು ಖಂಡಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಯಿಂದ ವಿವಾದದ ಕಿಡಿ: ಮುಗಿಬಿದ್ದ ಬಿಜೆಪಿ

ಏನು ಹೇಳಿದ್ದರು ಡಿಕೆ ಸುರೇಶ್?

ಕೇಂದ್ರ ಬಜೆಟ್ ಬಗ್ಗೆ ಪ್ರತಿಕ್ರಿಯಿಸಿದ್ದ ಡಿಕೆ ಸುರೇಶ್, ಈ ಬಾರಿಯ ಕೇಂದ್ರ ಬಜೆಟ್​​​ನಲ್ಲಿ ಹೊಸತೇನನ್ನೂ ಕೊಟ್ಟಿಲ್ಲ. ಕೇಂದ್ರ ಸರ್ಕಾರವು ದಕ್ಷಿಣ ಭಾರತದ ರಾಜ್ಯಗಳಿಗೆ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆಯೇ ಅನ್ಯಾಯ ಆಗುತ್ತಿದ್ದರೆ ನಾವು ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ. ದಕ್ಷಿಣ ಭಾರತದವರು ಧ್ವನಿ ಎತ್ತಬೇಕಾಗುತ್ತದೆ ಎಂದು ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:32 pm, Fri, 2 February 24