DK Suresh: ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರ ಹೇಳಿಕೆಯಿಂದ ವಿವಾದದ ಕಿಡಿ: ಮುಗಿಬಿದ್ದ ಬಿಜೆಪಿ
ಕೇಂದ್ರ ಬಜೆಟ್ ಟೀಕಿಸುವ ಭರದಲ್ಲಿ ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ನೀಡಿರುವ ಹೇಳಿಕೆ ಇದೀಗ ಪಕ್ಷಕ್ಕೆ ಮುಜುಗರ ತಂದೊಡ್ಡುವಂತೆ ಮಾಡಿದೆ. ಪ್ರತ್ಯೇಕ ರಾಷ್ಟ್ರ ಕುರಿತ ಡಿಕೆ ಸುರೇಶ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು, ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಹೇಳಿಕೆಗೆ ಯಾರು ಏನಂದರು ಎಂಬ ವಿವರ ಇಲ್ಲಿದೆ.
ಬೆಂಗಳೂರು, ಫೆಬ್ರವರಿ 2: ಕೇಂದ್ರ ಸರ್ಕಾರದ ಮಧ್ಯಂತರ ಬಜೆಟ್ (Union Budget 2024) ಬಗ್ಗೆ ಟೀಕಿಸುವ ಬರದಲ್ಲಿ ಕಾಂಗ್ರೆಸ್ (Congress) ಸಂಸದ ಡಿಕೆ ಸುರೇಶ್ (DK Suresh) ದೊಡ್ಡ ವಿವಾದವನ್ನೇ ಮೈಮೇಲೆ ಎಳೆದುಕೊಂಡಿದ್ದಾರೆ. ಕೇಂದ್ರದ ಬಜೆಟ್‌ನಲ್ಲಿ ಹೊಸತೇನು ಇಲ್ಲ. ದಕ್ಷಿಣ ಭಾರತದ ರಾಜ್ಯಗಳಿಗೆ ಕೇಂದ್ರ ಹಣ ಬಿಡುಗಡೆ ಮಾಡುತ್ತಿಲ್ಲ. ಹೀಗೆ ಅನ್ಯಾಯ ಆಗುತ್ತಿದ್ದರೆ ಪ್ರತ್ಯೇಕ ರಾಷ್ಟ್ರ ಕೇಳಬೇಕಾಗುತ್ತದೆ. ದಕ್ಷಿಣ ಭಾರತದವರು ಧ್ವನಿ ಎತ್ತಬೇಕಾಗುತ್ತದೆ ಎಂದು ಸುರೇಶ್ ಹೇಳಿದ್ದಾರೆ. ಈ ಹೇಳಿಕೆ ಇದೀಗ ಭಾರಿ ವಿವಾದಕ್ಕೆ ಕಾರಣವಾಗಿದೆ. ಸುರೇಶ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.
ಭಾರತ ಅಖಂಡವಾಗಿಯೇ ಇರಬೇಕು: ಸಿಎಂ ಸಿದ್ದರಾಮಯ್ಯ
ಡಿಕೆ ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ, ಭಾರತ ಅಖಂಡವಾಗಿಯೇ ಇರಬೇಕು. ಆದರೆ ರಾಜ್ಯದ ಯಾವುದೇ ಯೋಜನೆಗಳಿಗೆ ಕೇಂದ್ರ ಅನುದಾನ ನೀಡಿಲ್ಲ ಎಂದು ಕಿಡಿಕಾರಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ, ಸುರೇಶ್ ಜನರ ಅಭಿಪ್ರಾಯ ಹೇಳಿದ್ದಾರೆ ಅಷ್ಟೆ ಎಂದು ಡ್ಯಾಮೇಜ್ ಕಂಟ್ರೋಲ್‌ಗೆ ಯತ್ನಿಸಿದ್ದಾರೆ.
ಭಾರತ್ ಜೋಡೋ ಮಾಡುತ್ತಿರುವ ರಾಹುಲ್ ಉತ್ತರಿಸಲಿ ಎಂದ ಬಿಜೆಪಿ
ಡಿಕೆ ಸುರೇಶ್ ಹೇಳಿಕೆಯನ್ನು ಖಂಡಿಸಿರುವ ಬಿಜೆಪಿ ನಾಯಕರು, ದೇಶ ಒಡೆಯುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ರಾಹುಲ್ ಗಾಂಧಿ ಇದಕ್ಕೆ ಉತ್ತರಿಸಲಿ ಎಂದಿದ್ದಾರೆ.
ವಿಪಕ್ಷ ನಾಯಕ ಆರ್ ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ನಾಯಕ ಸಿ.ಟಿ.ರವಿ ವಾಗ್ದಾಳಿ ನಡೆಸಿದ್ದು, ರಾಹುಲ್ ಗಾಂಧಿ ಉತ್ತರಿಸಲಿ ಎಂದು ಆಗ್ರಹಿಸಿದ್ದಾರೆ. ಭಾರತ ದೇಶದ ಸಮಸ್ತ ನಾಗರಿಕರು ಸಂವಿಧಾನದ 75 ನೇ ವಾರ್ಷಿಕೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಪ್ರತ್ಯೇಕ ರಾಷ್ಟ್ರದ ಬಗ್ಗೆ ಮಾತಾಡಿವುದು ದುರದೃಷ್ಟಕರ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೇಳಿದ್ದಾರೆ. ಸುರೇಶ್ ಅವರು ಒಬ್ಬ ಸಂಸದನಾಗಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು, ಹೀಗೆ ಬೇಜವಾಬ್ದಾರಿ ಮಾತುಗಳನ್ನಾಡುವುದು ಅವರಿಗೆ ಶೋಭೆ ತರುವುದಿಲ್ಲ ಎಂದು ವಿಜಯೇಂದ್ರ ಹೇಳಿದ್ದಾರೆ.
ಸುರೇಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕಾಂಗ್ರೆಸ್ ಯಾವಾಗಲೂ ದೇಶವನ್ನು ವಿಭಜಿಸುವ ಬಗ್ಗೆ ಮಾತನಾಡುತ್ತದೆ. ಅವರು ವಿಭಜನೆಯ ಮನಸ್ಥಿತಿಯನ್ನು ಹೊಂದಿದ್ದಾರೆ. ಅದಕ್ಕಾಗಿಯೇ ಅವರು ಭಾರತವನ್ನು ವಿಭಜಿಸಿ ಪಾಕಿಸ್ತಾನವನ್ನು ರಚಿಸಿದರು. ಅವರು ತಮ್ಮ ಮನಸ್ಥಿತಿಯನ್ನು ಮುಂದುವರೆಸಿದ್ದಾರೆ. ದೇಶವನ್ನು ಒಡೆಯಲು ಕಾಂಗ್ರೆಸ್ ಷಡ್ಯಂತ್ರ ನಡೆಸುತ್ತಿದ್ದು, ಸುರೇಶ್ ಮೂಲಕ ಹೇಳಿಕೆ ನೀಡಿಸಿದೆ. ದೇಶದ ಎಲ್ಲಾ ರಾಜ್ಯಗಳು ಅಭಿವೃದ್ಧಿ ಹೊಂದುತ್ತಿವೆ. ನಮಗೆ ದಕ್ಷಿಣ ಉತ್ತರ ಎಂಬ ಬೇಧವಿಲ್ಲ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಜವಾಬ್ದಾರಿಯುತ ಸ್ಥಾನದಲ್ಲಿರುವ ಡಿಕೆ ಸುರೇಶ್ ಬೇಜವಾಬ್ದಾರಿ ಹೇಳಿಕೆ ನೀಡಬಾರದು: ಬಿವೈ ವಿಜಯೇಂದ್ರ
ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಡಿಕೆ ಸುರೇಶ್ ಹೇಳಿಕೆಯನ್ನು ಖಂಡಿಸಿದ್ದಾರೆ.
ಹೇಳಿಕೆ ವಾಪಸ್ ಪಡೆಯಲ್ಲ: ಡಿಕೆ ಸುರೇಶ್
ಇಷ್ಟೆಲ್ಲಾ ವಿವಾದದ ನಡುವೆಯೂ ಹೇಳಿಕೆ ವಾಪಸ್ ಪಡೆಯಲ್ಲ ಎಂದು ಡಿಕೆ ಸುರೇಶ್ ಹೇಳಿದ್ದಾರೆ. ದೆಹಲಿಯಲ್ಲಿ ‘ಟಿವಿ9’ ಜತೆ ಮಾತನಾಡಿದ ಅವರು, ನನ್ನ ಹೇಳಿಕೆಯನ್ನು ತಿರುಚಲಾಗುತ್ತಿದೆ. ಕನ್ನಡಿಗರ ವಿರುದ್ಧದ ಧೋರಣೆ ಖಂಡಿಸಿದರೆ ನಾನು ದೇಶವಿರೋಧಿಯೇ? ದಕ್ಷಿಣ ಭಾರತದಲ್ಲಿ ಹಿಂದಿ ಕಲಿಸುತ್ತಾರೆ. ಅದೆ ರೀತಿ ಉತ್ತರಭಾರತದಲ್ಲಿ ಕನ್ನಡ, ತೆಲುಗು, ಮಲಯಾಳಂ, ತಮಿಳು ಕಲಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:57 am, Fri, 2 February 24