ಕಾಂತರಾಜ ವರದಿ ಪಡೆಯುವುದಕ್ಕೆ 1 ತಿಂಗಳ ಟೈಮ್ ನೀಡಿದ್ದೀನಿ: ಸಿಎಂ ಸಿದ್ದರಾಮಯ್ಯ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಕಾಂತರಾಜ ವರದಿ ಒಪ್ಪಿಕೊಳ್ಳುವಂತೆ ಜನರು ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಅವರು, ಕಾಂತರಾಜ ವರದಿ ಪಡೆಯುವುದಕ್ಕೆ 1 ತಿಂಗಳ ಟೈಮ್ ನೀಡಿದ್ದೀನಿ. ಆಮೇಲೆ ಸ್ವೀಕಾರ ಮಾಡುತ್ತೇನೆ ಎಂದು ಹೇಳಿದ್ದಾರೆ.
ಬೆಂಗಳೂರು, ಫೆಬ್ರುವರಿ 1: ಕಾಂತರಾಜ ವರದಿ ಪಡೆಯುವುದಕ್ಕೆ 1 ತಿಂಗಳ ಟೈಮ್ ನೀಡಿದ್ದೀನಿ. ಆಮೇಲೆ ಸ್ವೀಕಾರ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಾಚಿದೇವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವರದಿಯಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದರೆ ಸರಿಪಡಿಸುತ್ತೇವೆ. ಜಾತಿಗಣತಿಗೆ ಕಾಂತರಾಜ ಸಮಿತಿ ರಚಿಸಿ ಹಣ ಬಿಡುಗಡೆ ಮಾಡಿದ್ದೆ. ಹೆಚ್ಡಿ ಕುಮಾರಸ್ವಾಮಿ ಸಿಎಂ ಆಗಿದ್ದಾಗ ಕಾಂತರಾಜ ಸಮಿತಿ ವರದಿ ಸ್ವೀಕರಿಸಲಿಲ್ಲ. ನಾನು ಕಾಂತರಾಜ ಸಮಿತಿ ವರದಿ ಸ್ವೀಕರಿಸುತ್ತೇವೆ ಎಂದು ಹೇಳಿದ್ದಾರೆ.
ಕಾಂತರಾಜ ಸಮಿತಿ ವರದಿ ಅವೈಜ್ಞಾನಿಕವಾಗಿದೆ ಎಂದು ಹೇಳುತ್ತಾರೆ. ಒಂದು ವೇಳೆ ಅವೈಜ್ಞಾನಿಕವಾಗಿದ್ದರೆ ಸಲಹೆ ಪಡೆದು ಸರಿಪಡಿಸುತ್ತೇವೆ ಎಂದಿದ್ದಾರೆ. ಭಾಷಣದ ಮಧ್ಯೆ ಜನರು ಕಾಂತರಾಜ ವರದಿ ಒಪ್ಪಿಕೊಳ್ಳಿ ಅಂತ ಮನವಿ ಮಾಡಿದ್ದು, ಆಗ ಸಿಎಂ ಕೇಳಿದ್ದೇ ಕೇಳ್ಳುತ್ತೀರ. ನಾನು ಹೇಳಿದ್ದೀನಿ, ಸಮಿತಿಯ ವರದಿ ಪಡುತ್ತೇನೆ. ಹಾಡಿದ್ದೇ ಹಾಡು ಕಿಸ್ಬಾಯಿ ದಾಸ ಅಂತ ಕೇಳಿದೆ ಕೇಳ್ತಿಯಲ್ಲಪ್ಪ ಅಂತ ನಗೆ ಚಟಾಕಿ ಸಿಡಿಸಿದರು.
ಪ್ರತಿ ಜಿಲ್ಲೆಗಳಲ್ಲೂ ಮಡಿವಾಳ ಮಾಚಿದೇವ ಜಯಂತಿ
ಎಲ್ಲಾ ಜಿಲ್ಲೆಗಳಲ್ಲೂ ಮಡಿವಾಳ ಮಾಚಿದೇವ ಜಯಂತಿ ಆಚರಿಸುತ್ತೇವೆ. ಬಸವಣ್ಣಗೆ ಮಾಚಿದೇವರ ಮೇಲೆ ಅಪಾರ ಪ್ರೀತಿ ಇತ್ತು. ಜಾತಿ ಪದ್ಧತಿ, ಮೌಢ್ಯದ ವಿರುದ್ಧ ಹೋರಾಟ ಮಾಡಿದವರು. ಮಡಿವಾಳ ಮಾಚಿದೇವ ಒಬ್ಬ ನಿಷ್ಠಾವಂತ ಹೋರಾಟಗಾರರಾಗಿದ್ದರು.
ಇದನ್ನೂ ಓದಿ: Budget 2024: ಇದು ವಿನಾಶಕಾರಿ ಬಜೆಟ್ ಎಂದ ಸಿಎಂ ಸಿದ್ದರಾಮಯ್ಯ
ಯಾರೂ ಹಣೆಬರಹ ಬರೆಯಲ್ಲ, ದೇವರು ಕೂಡ ಹಣೆಬರಹ ಬರೆಯಲ್ಲ. ಅವಕಾಶ ಬಳಸಿಕೊಂಡು ಬೆಳೆಯಬೇಕು. ಮಡಿವಾಳ ಮಾಚಿದೇವ ಫೌಂಡೇಷನ್ ಬಗ್ಗೆ ಒಪ್ಪಿಗೆ ಸೂಚಿಸಿದ್ದೇವೆ. ನಾನು ನಿಮ್ಮ ಜೊತೆ ಇದ್ದೀನಿ, ನಮ್ಮ ಸರ್ಕಾರ ನಿಮ್ಮ ಜೊತೆ ಇರುತ್ತೆ ಎಂದರು.
ಸಂವಿಧಾನ ವಿರೋಧ ಮಾಡುವವರೆಲ್ಲರೂ ನಮ್ಮ ವೈರಿಗಳು
ಮಡಿವಾಳ ಮಾಚಿದೇವ ವಚನ ಸಾಹಿತ್ಯ ರಕ್ಷಣೆ ಮಾಡಿದ್ದಾರೆ. ಸಮಾಜದಲ್ಲಿ ಹಲವು ಅಂಕು ಡೊಂಕು ಇದೆ. ಪಟ್ಟಭದ್ರ ಹಿತಾಸಕ್ತಿ ಮುಖಂಡರು ಸಂವಿಧಾನ ಬದಲಿಸಲು ಯತ್ನಿಸಿದ್ದಾರೆ. ಸಂಸದ ಹೆಗಡೆ ಅಂಥವರು ಸಂವಿಧಾನ ಬದಲಿಸಲು ಹೊರಟಿದ್ದಾರೆ. ಉತ್ತರ ಕನ್ನಡ ಬಿಜೆಪಿ ಸಂಸದರಾಗಿರುವ ಅನಂತ ಕುಮಾರ ಹೆಗಡೆ ನಾನು ಸಿಎಂ ಆಗಿರುವುದಕ್ಕೆ ಸಂವಿಧಾನವೇ ಕಾರಣ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್ನಿಂದ ರಾಜ್ಯಕ್ಕೆ ಅನ್ಯಾಯ ಆಗಿದೆ-ಡಿಕೆ ಶಿವಕುಮಾರ್
ಸಂವಿಧಾನ ವಿರೋಧ ಮಾಡುವವರೆಲ್ಲರೂ ನಮ್ಮ ವೈರಿಗಳು. ನಾವು ಶಿಕ್ಷಣ ಪಡೆದು ಸಂಘಟಿತರಾಗಿ ಹೋರಾಟ ಮಾಡಬೇಕು. ನಿಮ್ಮ ಮಕ್ಕಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಬೇಡಿ. ಹಕ್ಕುಗಳು ಬೇಕಾದರೆ ಹೋರಾಟ ಮಾಡಬೇಕು. ಮಗು ಅಳದಿದ್ದರೆ ತಾಯಿಯೇ ಹಾಲು ಕೊಡುವುದಿಲ್ಲ. ನೀವು ಹೋರಾಟ ಮಾಡದಿದ್ದರೆ ನಿಮ್ಮ ಹಕ್ಕುಗಳು ಸಿಗಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.