Breaking News: ಚುನಾವಣಾ ಪ್ರಚಾರದಿಂದ ಮಮತಾ ಬ್ಯಾನರ್ಜಿಗೆ 24 ತಾಸು ನಿಷೇಧ
ಮುಸ್ಲಿಂ ಮತಗಳ ಬಗ್ಗೆ ಹಾಗೂ ಕೇಂದ್ರೀಯ ಭದ್ರತಾ ಪಡೆಗಳ ವಿರುದ್ಧ ಬಂಡೇಳುವಂತೆ ಮಮತಾ ಬ್ಯಾನರ್ಜಿ ನೀಡಿದ್ದ ಹೇಳಿಕೆಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿದೆ.
ಕೊಲ್ಕತ್ತಾ: ತೃಣಮೂಲ ಕಾಂಗ್ರೆಸ್ ಪಕ್ಷದ ನಾಯಕಿ ಮಮತಾ ಬ್ಯಾನರ್ಜಿ ಅವರನ್ನು ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಿಂದ 24 ಗಂಟೆಗಳ ಅವಧಿಗೆ ನಿರ್ಬಂಧಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಮುಸ್ಲಿಂ ಮತಗಳ ಬಗ್ಗೆ ಮತ್ತು ಕೇಂದ್ರೀಯ ಭದ್ರತಾ ಪಡೆಗಳ ವಿರುದ್ಧ ಬಂಡೇಳುವಂತೆ ನೀಡಿದ ಹೇಳಿಕೆಗಳನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಿ, ಅವರನ್ನು ಚುನಾವಣಾ ಪ್ರಚಾರದಿಂದ ನಿರ್ಬಂಧಿಸುವ ಆದೇಶ ಹೊರಡಿಸಿದೆ.
ಚುನಾವಣಾ ಆಯೋಗದ ಈ ಆದೇಶದ ಪ್ರಕಾರ ಇಂದು (ಏಪ್ರಿಲ್ 12) ರಾತ್ರಿ 8 ಗಂಟೆಯಿಂದ ನಾಳೆ (ಏಪ್ರಿಲ್ 13) ರಾತ್ರಿ 8 ಗಂಟೆಯವರೆಗೆ ಮಮತಾ ಬ್ಯಾನರ್ಜಿ ಚುನಾವಣಾ ಪ್ರಚಾರ ನಡೆಸುವಂತಿಲ್ಲ. ಇದು ನಿರ್ಗಮಿಸುತ್ತಿರುವ ಚುನಾವಣಾ ಆಯುಕ್ತ ಸುನಿಲ್ ಅರೋರಾ ಅವರ ಕೊನೆಯ ಆದೇಶವಾಗಿದೆ.
ಚುನಾವಣಾ ಆಯೋಗದ ಈ ನಿರ್ಧಾರವನ್ನು ಟಿಎಂಸಿ ನಾಯಕರು ವ್ಯಾಪಕವಾಗಿ ಟೀಕಿಸಿದ್ದಾರೆ. ಚುನಾವಣಾ ಆಯೋಗವೆಂದರೆ ಅತಿಯಾದ ಹೊಂದಾಣಿಕೆ (EC stands for Extremely Compromised) ಎಂದು ಟಿಎಂಸಿ ನಾಯಕ ಡೆರೆಕ್ ಒ ಬ್ರೇನ್ ಲೇವಡಿ ಮಾಡಿ ಟ್ವೀಟ್ ಮಾಡಿದ್ದಾರೆ.
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮತ್ತು ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರಿಗೆ ಕಳೆದ ವಾರ ಚುನಾವಣಾ ಆಯೋಗವು ಎರಡು ನೊಟೀಸ್ಗಳನ್ನು ಜಾರಿ ಮಾಡಿತ್ತು. ಈ ನೊಟೀಸ್ಗಳಿಗೆ ಮಮತಾ ನೀಡಿದ್ದ ವಿವರಣೆಗಳು ಆಯೋಗಕ್ಕೆ ತೃಪ್ತಿ ನೀಡಿರಲಿಲ್ಲ.
‘ಕೇಂದ್ರೀಯ ಭದ್ರತಾ ಪಡೆಗಳ ಸಿಬ್ಬಂದಿ ಮತದಾರರಿಗೆ ತೊಂದರೆ ಕೊಡುತ್ತಿವೆ’ ಎಂದು ಆರೋಪಿಸಿದ್ದ ಮಮತಾ, ಮಹಿಳೆಯರು ಭದ್ರತಾ ಸಿಬ್ಬಂದಿಗೆ ತಿರುಗಿಸಿ ಹೊಡೆಯಬೇಕು ಅಥವಾ ಅವರನ್ನು ಸುತ್ತುಗಟ್ಟಬೇಕು’ ಎಂದು ಮಾರ್ಚ್ 28 ಮತ್ತು ಏಪ್ರಿಲ್ 7ರಂದು ಮಾಡಿದ್ದ ಭಾಷಣಗಳಲ್ಲಿ ಮಮತಾ ಹೇಳಿದ್ದರು. ಈ ಅಂಶಗಳಿಗೆ ಆಧಾರ ನೀಡುವಂತೆ ಚುನಾವಣಾ ಆಯೋಗ ಮಮತಾ ಅವರನ್ನು ಕೇಳಿತ್ತು.
‘ಅವರಿಗೆ ಅಷ್ಟು ಅಧಿಕಾರ ಯಾರು ಕೊಡುತ್ತಾರೆ. ಮಹಿಳೆಯರಿಗೆ ಮತ ಚಲಾಯಿಸಲು ಅವಕಾಶ ನೀಡುತ್ತಿಲ್ಲ. 2019ರಲ್ಲಿ (ಲೋಕಸಭೆ ಚುನಾವಣೆ ವೇಳೆ) ಮತ್ತು 2016ರಲ್ಲಿಯೂ ಹೀಗೆಯೇ ಆಗಿತ್ತು’ ಎಂದು ಮಾರ್ಚ್ ಸಮಾವೇಶದಲ್ಲಿ ಮಮತಾ ದೂರಿದ್ದರು.
‘ಅವರು ಯಾರ ಆದೇಶದ ಅನ್ವಯ ಹೀಗೆ ವರ್ತಿಸುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ನಿಮ್ಮ ಕುಟುಂಬದವರನ್ನು ರಕ್ಷಿಸಿಕೊಳ್ಳುವುದು ನಿಮ್ಮ ಕರ್ತವ್ಯ. ನಮ್ಮ ಯಾವುದೇ ತಾಯಂದಿರಿಗೆ, ಸೋದರಿಯರಿಗೆ ಒಂದೇ ಒಂದು ಲಾಠಿ ಏಟು ಬಿದ್ದರೂ ಅಥವಾ ಮತದಾನದ ಸ್ಥಳ ಪ್ರವೇಶಕ್ಕೆ ಅವಕಾಶ ಸಿಗದಿದ್ದರೂ ನೀವೆಲ್ಲರೂ ಹೊರಗೆ ಬಂದು ದಂಗೆಯೇಳಿ’ ಎಂದು ಮಮತಾ ಹೇಳಿದ್ದರು ಎಂದು ಆರೋಪಿಸಲಾಗಿದೆ.
ಕೂಚ್ಬೆಹಾರ್ನಲ್ಲಿ ಮಮತಾ ಬ್ಯಾನರ್ಜಿ ಕೇಂದ್ರ ಮೀಸಲು ಪಡೆಗಳ ಬಗ್ಗೆ ತೀವ್ರ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು ಎಂದು ಚುನಾವಣಾ ಆಯೋಗ ಹೇಳಿತ್ತು. ಏಪ್ರಿಲ್ 3ರಂದು ಹೂಗ್ಲಿ ಜಿಲ್ಲೆಯಲ್ಲಿ ಪ್ರಚಾರ ನಡೆಸುವ ವೇಳೆ ‘ನನ್ನ ಅಲ್ಪಸಂಖ್ಯಾತ ಸೋದರ-ಸೋದರಿಯರಿಗೆ ಕೈಮುಗಿದ ಕೇಳಿಕೊಳ್ಳುತ್ತಿದ್ದೇನೆ. ಭೂತದ ಮಾತು ಕೇಳಿ ಮತವನ್ನು ಚಲಾಯಿಸಬೇಡಿ. ಬಿಜೆಪಿಯಿಂದ ಹಣ ಪಡೆದು ಬೇಕಾಬಿಟ್ಟಿಯಾಗಿ ಹೇಳಿಕೆ ನೀಡಿ ಹಿಂದೂ-ಮುಸ್ಲಿಮರ ನಡುವೆ ಸಂಘರ್ಷ ತಂದಿಡುತ್ತಾರೆ. ಬಿಜೆಪಿ ಮತ್ತು ಸಿಪಿಎಂ ಕಾರ್ಯಕರ್ತರು ಬಿಜೆಪಿಯಿಂದ ಹಣ ಪಡೆದು ಅಲ್ಪಸಂಖ್ಯಾತರ ಮತ ಒಡೆಯಲು ಯತ್ನಿಸುತ್ತಾರೆ’ ಎಂದು ಅರೋಪಿಸಿದ್ದರು.
ಈ ಕುರಿತು ನೀಡಿದ್ದ ನೋಟಿಸ್ಗೆ ಪ್ರತಿಕ್ರಿಯಿಸಿದ್ದ ಮಮತಾ, ‘ನೀವು ನನಗೆ 10 ಶೋಕಾಸ್ ನೋಟಿಸ್ ಕೊಡಬಹುದು. ನನ್ನ ಉತ್ತರ ಒಂದೇ ಆಗಿರುತ್ತೆ. ನಾನು ಹಿಂದೂ-ಮುಸ್ಲಿ ಮತಗಳ ಧ್ರುವೀಕರಣವನ್ನು ವಿರೋಧಿಸುತ್ತೇನೆ. ಧರ್ಮದ ಆಧಾರದಲ್ಲಿ ಮತ ವಿಭಜನೆಗೆ ನನ್ನ ಸಹಮತವಿಲ್ಲ’ ಎಂದು ಹೇಳಿದ್ದರು.
ಪಶ್ಚಿಮ ಬಂಗಾಳ ವಿಧಾನಸಭೆಯ 5ನೇ ಹಂತದ ಮತದಾನ ಏಪ್ರಿಲ್ 17ರಂದು ನಡೆಯಲಿದೆ. ಮೇ 2ರಂದು ಮತಎಣಿಕೆ ನಡೆಯಲಿದ್ದು, ಅಂದೇ ಫಲಿತಾಂಶವೂ ಪ್ರಕಟವಾಗಲಿದೆ.
ಇದನ್ನೂ ಓದಿ: Amit Shah Interview: ಪ್ರಚಂಡ ಬಹುಮತದಿಂದ ಸೋಲುವ ಮಮತಾ ದೀದಿ ಮೇ 2ಕ್ಕೆ ರಾಜೀನಾಮೆ ಕೊಡ್ತಾರೆ; ಅಮಿತ್ ಶಾ
Published On - 8:45 pm, Mon, 12 April 21