West Bengal Elections 2021: ಕೂಚ್ ​ಬೆಹಾರ್​ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದು ಮಮತಾ ಬ್ಯಾನರ್ಜಿ: ಅಮಿತ್ ಶಾ ಆರೋಪ

|

Updated on: Apr 11, 2021 | 5:22 PM

Amit Shah in West Bengal: ಇನ್ನುಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ವೇಳೆ ಶಾಂತಿ ಕಾಪಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿ. ನಿಮ್ಮ ಇಷ್ಟದ ವ್ಯಕ್ತಿ ಗೆಲ್ಲಲು ಮತ ಹಾಕಿ. ಬಂಗಾಳದಲ್ಲಿ ಶಾಂತಿಯುತ ಚುನಾವಣೆಗಾಗಿ ಹೊಸ ಇತಿಹಾಸ ರಚಿಸಲು ಕೆಲಸ ಮಾಡಿ ಎಂದಿದ್ದಾರೆ ಅಮಿತ್ ಶಾ.

West Bengal Elections 2021: ಕೂಚ್ ​ಬೆಹಾರ್​ನಲ್ಲಿ ನಡೆದ ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ್ದು ಮಮತಾ ಬ್ಯಾನರ್ಜಿ: ಅಮಿತ್ ಶಾ ಆರೋಪ
ಅಮಿತ್ ಶಾ
Follow us on

ಕೊಲ್ಕತ್ತಾ: ಪಶ್ಚಿಮ ಬಂಗಾಳದ ಶಾಂತೀಪುರ್​ನಲ್ಲಿ ಭಾನುವಾರ ಚುನಾವಣಾ ಪ್ರಚಾರ ಮಾಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರದ ಭದ್ರತಾ ಪಡೆಗಳನ್ನು ಮುತ್ತಿಗೆ ಹಾಕಲು ಮಮತಾ ಆದೇಶಿಸಿದ್ದರು. ಈ ಆದೇಶವೇ ಜನರು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳ ಮೇಲೆ ದಾಳಿ ನಡೆಸಲು ಪ್ರಚೋದನೆ ನೀಡಿದ್ದು ಎಂದ ಆರೋಪಿಸಿದ್ದಾರೆ. ಶಾಂತೀಪುರ್​ನಲ್ಲಿ ರೋಡ್ ಶೋ ಆರಂಭಿಸಿದ ಅಮಿತ್ ಶಾ ಮಧ್ಯಾಹ್ನದ ನಂತರ ರಾಣಘಾಟ್​ನಲ್ಲಿ ಮತ್ತೊಂದು ರೋಡ್ ಶೋ ನಡೆಸಿದ್ದಾರೆ. ಇದಾದನಂತರ ಬಸೀರ್ ಹಟ್ ದಕ್ಷಿಣದಲ್ಲಿ ಸಾರ್ವಜನಿಕ ಸಭೆ ನಡೆಸಿದ್ದಾರೆ.

ಇನ್ನುಳಿದ ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನದ ವೇಳೆ ಶಾಂತಿ ಕಾಪಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಆಚರಿಸಿ. ನಿಮ್ಮ ಇಷ್ಟದ ವ್ಯಕ್ತಿ ಗೆಲ್ಲಲು ಮತ ಹಾಕಿ. ಬಂಗಾಳದಲ್ಲಿ ಶಾಂತಿಯುತ ಚುನಾವಣೆಗಾಗಿ ಹೊಸ ಇತಿಹಾಸ ರಚಿಸಲು ಕೆಲಸ ಮಾಡಿ ಎಂದಿದ್ದಾರೆ. ಮೇ 2ರನಂತರ ಮೋದಿಯವರ ನೇತೃತ್ವದಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ರಚನೆ ಆದಾಗ ಮತಗಟ್ಟೆಯಲ್ಲಿನ ಗಲಭೆ, ರಾಜಕೀಯ ಹಿಂಸಾಚಾರ ಎಲ್ಲವೂ ಬಂಗಾಳದಿಂದ ಎಂದೆಂದಿಗೂ ಹೊರ ಹೋಗಲಿದೆ ಎಂದು ಶಾ ಹೇಳಿದ್ದಾರೆ.


ಇದು ಹತ್ಯಾಕಾಂಡ- ಮಮತಾ ಬ್ಯಾನರ್ಜಿ
ಕೂಚ್ ​ಬೆಹಾರ್ ಜಿಲ್ಲೆಯಲ್ಲಿ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು ( CISF) ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಹತರಾಗಿದ್ದರು. ಈ ಪ್ರಕರಣ ಬಗ್ಗೆ ಪ್ರತಿಕ್ರಿಯಿಸಿದ ಮಮತಾ ಇದು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗಳು ನಡೆಸಿದ ಹತ್ಯಾಕಾಂಡ. ಸಂತ್ರಸ್ತರ ಎದೆ ಮತ್ತು ಕುತ್ತಿಗೆ ಮೇಲೆ ಗುಂಡಿನ ಸುರಿಮಳೆಗೈಯ್ಯಲಾಗಿತ್ತು ಎಂದಿದ್ದರು.

ಸೀತಾಲ್​ಗುಚಿ ಕ್ಷೇತ್ರದ 126ನೇ ಮತಗಟ್ಟೆಯಲ್ಲಿ ಕರ್ತವ್ಯದ ಮೇಲಿದ್ದ ಸಿಐಎಸ್​ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದರು. ಈ ವೇಳೆ 4 ಮಂದಿ ಮೃತಪಟ್ಟಿದ್ದರು.

ಸಿತಾಲ್​ಗುಚಿಗೆ ಮುಂದಿನ 72 ಗಂಟೆಗಳ ಅವಧಿಯಲ್ಲಿ ಹೊರಗಿನ ಯಾವುದೇ ರಾಜಕಾರಿಣಿಗಳು ಪ್ರವೇಶಿಸಬಾರದು ಎಂದು ಚುನಾವಣಾ ಆಯೋಗವು ಆದೇಶಿಸಿದೆ. ಈ ಆದೇಶವನ್ನೂ ಮಮತಾ ಖಂಡಿಸಿದ್ದಾರೆ. ನೊಂದ ಕುಟುಂಬಗಳನ್ನು ನಾನು ಭೇಟಿಯಾಗಬಾರದು ಎಂಬ ಒಂದೇ ಉದ್ದೇಶದಿಂದ ಆಯೋಗವು ಇಂಥ ಆದೇಶ ಹೊರಡಿಸಿದೆ ಎಂದು ದೂರಿದರು. ಸುದ್ದಿಗೋಷ್ಠಿ ನಡೆಯುತ್ತಿದ್ದಾಗಲೇ ಮೃತರ ಹತ್ತಿರದ ಸಂಬಂಧಿಯೊಂದಿಗೆ ಮಮತಾ ವಿಡಿಯೊ ಕಾನ್ಫರೆನ್ಸ್​ ಮೂಲಕ ಮಾತನಾಡಿದರು.

ನೊಂದ ಕುಟುಂಬಗಳನ್ನು ನಾನು ಭೇಟಿಯಾಗಬಾರದು ಎಂಬ ಕಾರಣಕ್ಕೆ ಚುನಾವಣಾ ಆಯೋಗವು ಇಂಥ ಆದೇಶ ಹೊರಡಿಸಿರುವುದು ದುರದೃಷ್ಟಕರ. ಆಯೋಗ ವಿಧಿಸಿರುವ 72 ಗಂಟೆಗಳ ನಿರ್ಬಂಧ ಮುಗಿದ ತಕ್ಷಣ ನಾನು ಆ ಕುಟುಂಬಗಳನ್ನು ಭೇಟಿಯಾಗುತ್ತೇನೆ. ನನ್ನ ಚುನಾವಣಾ ವೆಚ್ಚದ ನಿಧಿಯಿಂದಲೇ ಆ ಕುಟುಂಬಗಳಿಗೆ ಸಾಧ್ಯವಾದಮಟ್ಟಿಗೂ ಹಣಸಹಾಯ ಮಾಡುತ್ತೇನೆ ಎಂದು ಮಮತಾ ಭರವಸೆ ನೀಡಿದರು.


ಚುನಾವಣಾ ಆಯೋಗದ ನಿರ್ಧಾರವನ್ನು ಶನಿವಾರ ಟ್ವೀಟ್​ ಮೂಲಕ ಖಂಡಿಸಿದ್ದ ಮಮತಾ ಬ್ಯಾನರ್ಜಿ, ಎಂಸಿಸಿಯನ್ನು ಮೋದಿ ಕೋಡ್ ಆಫ್ ಕಂಡಕ್ಟ್​ ಎಂದು ಮರುನಾಮಕರಣ ಮಾಡಬೇಕು ಎಂದು ಛೇಡಿಸಿದ್ದರು. ಚುನಾವಣಾ ನೀತಿ ಸಂಹಿತೆಗೆ (Model Code of Conduct – MCC) ಸಂಕ್ಷಿಪ್ತವಾಗಿ ಎಂಸಿಸಿ ಎನ್ನಲಾಗುತ್ತದೆ. ಈ ಅಕ್ಷರಗಳನ್ನೇ ವ್ಯಂಗ್ಯವಾಡಿದ್ದ ಮಮತಾ, ಬಿಜೆಪಿಯು ತನ್ನೆಲ್ಲಾ ಅಧಿಕಾರ ಬಳಸಿಕೊಳ್ಳಲು ಅವಕಾಶವಿದೆ. ಆದರೆ ನನ್ನನ್ನು ನೊಂದ ನನ್ನ ಜನರಿಂದ ದೂರ ಇಡಲು ಯಾರಿಗೂ ಸಾಧ್ಯವಿಲ್ಲ. ಅವರ ನೋವನ್ನು ನಾನು ಹಂಚಿಕೊಳ್ಳುತ್ತೇನೆ. ಕೂಚ್​ಬೆಹಾರ್​ಗೆ ಮುಂದಿನ ಮೂರು ದಿನ ನಾನು ಭೇಟಿ ನೀಡಲು ಅವರು ನಿರ್ಬಂಧಿಸಿರಬಹುದು. ಆದರೆ 4ನೇ ದಿನ ನಾನು ಅಲ್ಲಿರುತ್ತೇನೆ ಎಂದು ಮಮತಾ ಹೇಳಿದ್ದರು.

ಇದನ್ನೂ ಓದಿ: ಕೂಚ್ ಬೆಹಾರ್​ ಸಾವುಗಳನ್ನು ಕೇಂದ್ರೀಯ ಪಡೆಗಳು ನಡೆಸಿದ ಹತ್ಯಾಕಾಂಡ ಎಂದ ಮಮತಾ ಬ್ಯಾನರ್ಜಿ

West Bengal Assembly polls| ಸಿತಾಲಕುಚ್ಚಿಯಲ್ಲಿ ಚುನಾವಣಾ ಹಿಂಸೆ ಮತ್ತು ನಾಲ್ವರ ಸಾವಿಗೆ ಗೃಹಮಂತ್ರಿ ಅಮಿತ್ ಶಾ ಕಾರಣ: ಮಮತಾ ಬ್ಯಾನರ್ಜಿ

(Mamata Banerjee Provoked Cooch Behar central force firing Says Home Minister Amit Shah in West Bengal)

 

Published On - 5:02 pm, Sun, 11 April 21