ಕೋಲ್ಕತ್ತಾ: ಸದ್ಯ ಇಡೀ ದೇಶದ ಗಮನ ಕೇಂದ್ರೀಕೃತವಾದ ಒಂದು ಸ್ಥಳ ಹೇಳಿ ಎಂದರೆ ಒಂದು ಕ್ಷಣವೂ ತಡವಿಲ್ಲದೇ ಪಶ್ಚಿಮ ಬಂಗಾಳ ಎನ್ನಬಹುದು. ಅಷ್ಟು ತೀವ್ರ ಕುತೂಹಲ ಮೂಡಿಸುತ್ತಿದೆ ಬಂಗಾಳ. ಟಿಎಂಸಿ ತನ್ನ ಅಧಿಕಾರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದರೆ ಬಿಜೆಪಿಗೆ ಇದುವರೆಗೂ ಗೆಲ್ಲದ ರಾಜ್ಯದಲ್ಲಿ ಅಧಿಕಾರ ಸ್ಥಾಪಿಸುವ ಹುಕಿ. ಟಿಎಂಸಿಯ ಅಂದಿನ ಪ್ರಭಾವಿ ನಾಯಕ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಪ್ತನಾಗಿದ್ದ ಸುವೇಂದು ಅಧಿಕಾರಿಯನ್ನು ತನ್ನ ಬಳಗಕ್ಕೆ ಸೇರಿಸಿಕೊಂಡಿರುವ ಬಿಜೆಪಿ, ಅವರನ್ನು ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಸ್ವತಃ ಮಮತಾ ಬ್ಯಾನರ್ಜಿ ಅವರು ನಂದಿಗ್ರಾಮದಲ್ಲಿ ಕಣಕ್ಕಿಳಿಯುವುದು ಇಂದಷ್ಟೇ ಖಚಿತವಾಗಿದ್ದು, ಸುವೇಂದು ಅಧಿಕಾರಿ ಸಹ ಅಲ್ಲಿಂದಲೇ ಸ್ಪರ್ಧಿಸಲಿದ್ದಾರೆ ಎಂಬ ಮಾತು ಅವರು ಟಿಎಂಸಿಗೆ ಗುಡ್ ಬೈ ಹೇಳಿದ ದಿನದಿಂದಲೂ ಕೇಳಿಬರುತ್ತಿದೆ.
ಮಮತಾ ಬ್ಯಾನರ್ಜಿ ಅವರನ್ನೇ ಶಾಸಕಿಯಾಗದಂತೆ ತಡೆದು ವಿಧಾನಸಭೆಗೆ ಪ್ರವೇಶಿಸದಂತೆ ನೋಡಿಕೊಳ್ಳುವ ತಂತ್ರಗಾರಿಕೆ ಹೂಡಿರುವ ಬಿಜೆಪಿ, ಸುವೇಂದು ಅಧಿಕಾರಿ ಅವರನ್ನು ನಂದಿಗ್ರಾಮದ ಟಿಕೆಟ್ ನೀಡಲಿದ್ದಾ ಎನ್ನಲಾಗುತ್ತಿದೆ. ಕನಿಷ್ಠ 50 ಸಾವಿರ ಮತಗಳಿಂದ ಸುವೇಂದು ಅಧಿಕಾರಿ ನಂದಿಗ್ರಾಮದಿಂದ ಆಯ್ಕೆಯಾಗುತ್ತಾರೆ ಎಂದು ಬಿಜೆಪಿ ನಾಯಕರು ಈಗಾಗಲೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ ಈ ಕುರಿತು ಏನನ್ನಲಿದ್ದಾರೆ ಎಂದು ಬಂಗಾಲ ಬಿಜೆಪಿ ಕಾದುಕುಳಿತಿದೆ. ಅವರು ಒಪ್ಪಿಗೆ ಸೂಚಿಸಿದರಷ್ಟೇ ಮಮತಾ ಬ್ಯಾನರ್ಜಿ ಅವರಿಗೆ ನೇರಾನೇರವಾಗಿ ಎದುರಾಗಲಿದ್ದಾರೆ ಸುವೇಂದು ಅಧಿಕಾರಿ.
ಸುವೇಂದು ಅಧಿಕಾರಿ ಅವರನ್ನು ಬಿಟ್ಟರೆ ನಂದಿಗ್ರಾಮದಲ್ಲಿ ಬಿಜೆಪಿಯಿಂದ ಕೇಳಿಬಂದಿರುವ ಇನ್ನೋರ್ವ ಅಭ್ಯರ್ಥಿಯ ಹೆಸರು ಅನ್ಸೋಲ್ನ ಸಂಸದ ಬಬುಲ್ ಸುಪ್ರಿಯೋ ಅವರದ್ದು. ಆದರೆ ಈ ಕುರಿತು ಅಧಿಕೃತ ಸ್ಪಷ್ಟನೆ ಇದುವರೆಗೂ ದೊರೆತಿಲ್ಲ.
ನಂದಿಗ್ರಾಮ; ಏಕೆ ಅಷ್ಟು ಪ್ರಮುಖ?
ಟಿಎಂಸಿ ಅಧಿಕಾರಕ್ಕೇರಲು ಕಾರಣೀಕರ್ತರಲ್ಲಿ ನಂದಿಗ್ರಾಮವೂ ಒಂದು. 10 ವರ್ಷಗಳ ಹಿಂದೇ ಇದೇ ನಂದಿಗ್ರಾಮದಲ್ಲಿ ಟಿಎಂಸಿ ಆಯೋಜಿಸಿದ್ದ ರೈತ ಹೋರಾಟ ಪಶ್ಚಿಮ ಬಂಗಾಳದ ರಾಜಕೀಯ ದಿಕ್ಕನ್ನು ಬದಲಾಯಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸಿತು. ಆದರೆ ಅಂದಿನ ಟಿಎಂಸಿ ರೈತ ಹೋರಾಟದ ಹಿಂದಿನ ಶಕ್ತಿ ಮಾತ್ರ ಇದೇ ಸುವೇಂದು ಅಧಿಕಾರಿ. ಸುವೇಂದು ಅಧಿಕಾರಿ ಅವರ ಸಂಘಟನಾ ಚಾತುರ್ಯ ನೋಡಿಯೇ ಬಿಜೆಪಿ ಅವರನ್ನು ತೆಕ್ಕೆಗೆ ಎಳೆದುಕೊಂಡಿದೆ ಎಂಬುದು ಸರ್ವವಿದಿತ. ಇದೀಗ, ಮತ್ತೆ ಅದೇ ಸುವೇಂದು ಅಧಿಕಾರಿ ಮತ್ತು ಅವರ ನಂದಿಗ್ರಾಮ. ದೀದಿಗಾಗಿ ಕಲ್ಲು ಮುಳ್ಳು ತೆಗೆದು, ಮಣ್ಣು ಹಾಕಿ ನಂದಿಗ್ರಾಮದ ಅಂಗಳ ನಿರ್ಮಿಸಿಕೊಟ್ಟ ಸುವೇಂದುರನ್ನೇ ಮಮತಾ ವಿರುದ್ಧ ಇಳಿಸುವ ಬಿಜೆಪಿ ಯೋಜನೆ. ನಿಜಕ್ಕೂ ಹೀಗೆ ಆಗಿದ್ದೇ ಹೌದಾದಲ್ಲಿ, ಈಗಾಗಲೇ ಚುನಾವಣೆಯ ನಿಮಿತ್ತ ಹಿಂಸಾಚಾರಗಳು ಅಧಿಕಗೊಳ್ಳುತ್ತಿರುವ ಬಂಗಾಳದಿಂದ ಹೊರಹೊಮ್ಮುವ ಸುದ್ದಿಗಳು ಆತಂಕ ಸೃಷ್ಟಿಸುವ ಸಾಧ್ಯತೆಗಳೂ ಇವೆ.
ರಾಜಕೀಯ ಸೇರುತ್ತಿರುವ ತಾರಾಗಣ
ಚುನಾವಣೆಗೆ ದಿನಗಳು ಹತ್ತಿರವಾದಂತೆ ಪಶ್ಚಿಮ ಬಂಗಾಳದಲ್ಲಿ ತಾರಾಮಣಿಗಳು ರಾಜಕೀಯ ಸೇರುವ ಪ್ರವೃತ್ತಿ ಹೆಚ್ಚುತ್ತಿದೆ. ಚಲನಚಿತ್ರ ನಿರ್ದೇಶಕ ಮತ್ತು ನಟ ಧೀರಜ್ ಪಂಡಿತ್ ಅವರು ಟಿಎಂಸಿ ಸೇರಿದ್ದಾರೆ. ಜತೆಗೆ ಪ್ರಸಿದ್ಧ ನಟಿ ಸುಬಂದ್ರಾ ಮುಖರ್ಜಿ, ಮಾಜಿ ಬಿಜೆಪಿ ನಾಯಕ ಉಷಾ ಚೌಧರಿ, ಸಂಥಾಲಿ, ಕಲಾವಿದೆ ಬಿರ್ಬಹಾ ಹನ್ಸದಾ, ಗಾಯಕಿ ಅದಿತಿ ಮುನ್ಶಿ ಅವರು ಸಹ ಟಿಎಂಸಿಗೆ ಅಧಿಕೃತವಾಗಿ ಸೇರ್ಪಡೆಯಾಗಿದ್ದಾರೆ.
ಇದನ್ನೂ ಓದಿ: ಚುನಾವಣಾ ಪರ್ವಕಾಲ; ಸಿನಿತಾರೆಯರ ರಾಜಕೀಯ ಸೇರುವ ಹಂಬಲಕ್ಕೆ ನೀರೆರೆದ ಬಂಗಾಳ
ಪಶ್ಚಿಮ ಬಂಗಾಳದಲ್ಲಿ ಘೋಷಣೆಗಳ ಪ್ರವಾಹ: ಬಿಜೆಪಿಗೆ ಬೇಕಾಯ್ತು ಇಟಲಿ ಮೂಲದ ಹಾಡಿನ ಸಹಾಯ
Published On - 3:16 pm, Fri, 5 March 21