AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುವೇಂದು ರಾಜೀನಾಮೆಯಿಂದ ತೆರವಾದ ನಂದಿಗ್ರಾಮದಲ್ಲಿ ಮತ್ತೆ ಮಮತಾ ಸ್ಪರ್ಧೆ ಸಾಧ್ಯತೆ: ಟಿಎಂಸಿ ಚಿಹ್ನೆ ಜಟಾಪಟಿಯ ನಡುವೆ ಕದನ ಕುತೂಹಲ

ಸುವೇಂದು ಅಧಿಕಾರಿ ರಾಜೀನಾಮೆಯಿಂದ ತೆರವಾದ ನಂದಿಗ್ರಾಮ ಅಥವಾ ಮುಸ್ಲಿಂ ಬಾಹುಳ್ಯದ ರೆಜಿನಗರದಲ್ಲಿ ಮಮತಾ ಬ್ಯಾನರ್ಜಿ ಉಪಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಇದೆ. ವಿಧಾನಸಭೆ ಪ್ರವೇಶಕ್ಕೆ ಇದು ನಿರ್ಣಾಯಕ. 2021ರ ಸೋಲಿನ ಸೇಡು ತೀರಿಸಿಕೊಳ್ಳಲು ನಂದಿಗ್ರಾಮ ಅವಕಾಶ. ಆದರೆ ಟಿಎಂಸಿ ಚಿಹ್ನೆ ವಿವಾದ ಮಮತಾಗೆ ದೊಡ್ಡ ಸವಾಲಾಗಿದೆ. ಬಿಜೆಪಿ ಸವಾಲನ್ನೂ ಎದುರಿಸಬೇಕಿದೆ. ಈ ಚುನಾವಣೆ ಮಮತಾ ರಾಜಕೀಯ ಭವಿಷ್ಯಕ್ಕೆ ಮಹತ್ವದ್ದಾಗಿದೆ.

ಸುವೇಂದು ರಾಜೀನಾಮೆಯಿಂದ ತೆರವಾದ ನಂದಿಗ್ರಾಮದಲ್ಲಿ ಮತ್ತೆ ಮಮತಾ ಸ್ಪರ್ಧೆ ಸಾಧ್ಯತೆ: ಟಿಎಂಸಿ ಚಿಹ್ನೆ ಜಟಾಪಟಿಯ ನಡುವೆ ಕದನ ಕುತೂಹಲ
ಮಮತಾ ಬ್ಯಾನರ್ಜಿImage Credit source: Indian Express
ನಯನಾ ರಾಜೀವ್
|

Updated on: Sep 10, 2026 | 7:24 AM

Share

ಕೋಲ್ಕತ್ತಾ, ಸೆಪ್ಟೆಂಬರ್ 10: ಪಶ್ಚಿಮ ಬಂಗಾಳದ ನಂದಿಗ್ರಾಮ ಮತ್ತು ರೆಜಿನಗರ ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 6 ರಂದು ಉಪಚುನಾವಣೆ ನಡೆಯಲಿದ್ದು, ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಣಕ್ಕಿಳಿಯಲಿದ್ದಾರೆಯೇ ಎಂಬ ಕುತೂಹಲ ಮನೆಮಾಡಿದೆ. ಸುವೇಂದು ಅಧಿಕಾರಿ ರಾಜೀನಾಮೆಯಿಂದ ತೆರವಾದ ನಂದಿಗ್ರಾಮ ಅಥವಾ ಮುಸ್ಲಿಂ ಬಾಹುಳ್ಯದ ರೆಜಿನಗರದಲ್ಲಿ ಸ್ಪರ್ಧಿಸಿ, ಮಮತಾ ವಿಧಾನಸಭೆ ಪ್ರವೇಶಿಸುವ ಮೂಲಕ ಪಕ್ಷಕ್ಕೆ ಹೊಸ ಶಕ್ತಿ ತುಂಬಲಿದ್ದಾರೆ ಎಂಬ ಲೆಕ್ಕಾಚಾರಗಳು ಜೋರಾಗಿವೆ.

ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ನಂದಿಗ್ರಾಮ ಮತ್ತು ಭವಾನಿಪುರ ಎರಡೂ ಕಡೆ ಗೆದ್ದಿದ್ದು, ಭವಾನಿಪುರ ಉಳಿಸಿಕೊಂಡು ನಂದಿಗ್ರಾಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ಅಲ್ಲಿ ಉಪಚುನಾವಣೆ ಅನಿವಾರ್ಯವಾಗಿದೆ. ಇತ್ತ ಮುರ್ಷಿದಾಬಾದ್‌ನ ರೆಜಿನಗರದಿಂದ ಗೆದ್ದಿದ್ದ ಹುಮಾಯೂನ್ ಕಬೀರ್ ಅವರ ರಾಜೀನಾಮೆಯಿಂದಾಗಿ ಆ ಕ್ಷೇತ್ರವೂ ತೆರವಾಗಿದೆ.

ನಂದಿಗ್ರಾಮ: 2021ರಲ್ಲಿ ಸುವೇಂದು ವಿರುದ್ಧ ಮಮತಾ ಕೇವಲ1,956 ಮತಗಳಿಂದ ಸೋತಿದ್ದರು. ಈ ಬಾರಿ ಸುವೇಂದು ತೆರವು ಮಾಡಿರುವ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆದ್ದು ಸೇಡು ತೀರಿಸಿಕೊಳ್ಳುವ ಅವಕಾಶವಿದೆ.

ರೆಜಿನಗರ: ಈ ಕ್ಷೇತ್ರದಲ್ಲಿ ಶೇಕಡಾ ೬೫ಕ್ಕೂ ಹೆಚ್ಚು ಅಲ್ಪಸಂಖ್ಯಾತ ಮತದಾರರಿದ್ದಾರೆ. ಹೀಗಾಗಿ ಮಮತಾ ಅವರಿಗೆ ಇದು ಸುರಕ್ಷಿತ ಕ್ಷೇತ್ರವಾಗಬಹುದು ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಮತ್ತಷ್ಟು ಓದಿ: ಪಶ್ಚಿಮ ಬಂಗಾಳದ ಸಂಪುಟವನ್ನು ವಿಸರ್ಜಿಸಿದ ರಾಜ್ಯಪಾಲ; ಮಮತಾ ಬ್ಯಾನರ್ಜಿ ಈಗ ಮಾಜಿ ಸಿಎಂ

ಕಾಂಗ್ರೆಸ್ ಮೈತ್ರಿ ಲೆಕ್ಕಾಚಾರ: ಮುರ್ಷಿದಾಬಾದ್ ಕಾಂಗ್ರೆಸ್‌ನ ಪ್ರಭಾವಿ ನಾಯಕ ಅಧೀರ್ ರಂಜನ್ ಚೌಧರಿ ಅವರ ಭದ್ರಕೋಟೆಯಾಗಿರುವುದರಿಂದ, ಟಿಎಂಸಿ-ಕಾಂಗ್ರೆಸ್ ಮೈತ್ರಿ ಮಾಡಿಕೊಂಡು ರೆಜಿನಗರವನ್ನು ಕಾಂಗ್ರೆಸ್‌ಗೆ ಬಿಟ್ಟುಕೊಟ್ಟು ಅಥವಾ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆಯೂ ಇದೆ.

ಬಿಜೆಪಿ ಸವಾಲು: “ಮಮತಾ ಬ್ಯಾನರ್ಜಿ ಎರಡೂ ಕ್ಷೇತ್ರಗಳಿಂದ ಬೇಕಾದರೂ ಸ್ಪರ್ಧಿಸಲಿ, ಅವರನ್ನು ಮತ್ತೊಮ್ಮೆ ಸೋಲಿಸಲು ಬಿಜೆಪಿ ಸಿದ್ಧವಾಗಿದೆ” ಎಂದು ಬಿಜೆಪಿ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಮತಾ ಬ್ಯಾನರ್ಜಿಗೆ ಸದ್ಯ ಅತಿದೊಡ್ಡ ತಲೆನೋವಾಗಿರುವುದು ತೃಣಮೂಲ ಕಾಂಗ್ರೆಸ್‌ನ ಅಧಿಕೃತ ಚಿಹ್ನೆ ಉಳಿಸಿಕೊಳ್ಳುವುದು. ಪಕ್ಷದಲ್ಲಿ ಬಂಡಾಯವೆದ್ದಿರುವ ಋತಬ್ರತ ಬ್ಯಾನರ್ಜಿ ಬಣವು ತಾವೇ ‘ಅಸಲಿ ಟಿಎಂಸಿ’ ಎಂದು ಚುನಾವಣಾ ಆಯೋಗದ (ECI) ಮೆಟ್ಟಿಲೇರಿದೆ. ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಎನ್‌ಸಿಪಿ ಚಿಹ್ನೆ ವಿವಾದದಂತೆಯೇ ಇಲ್ಲೂ ಚಿಹ್ನೆ ಕೈತಪ್ಪುವ ಭೀತಿ ಎದುರಾಗಿದೆ.

ಸೆಪ್ಟೆಂಬರ್ 16 ನಾಮಪತ್ರ ಸಲ್ಲಿಕೆಗೆ ಕಡೆ ದಿನವಾಗಿದ್ದು, ಅಕ್ಟೋಬರ್ 6 ರಂದು ಮತದಾನ ಹಾಗೂ ಅಕ್ಟೋಬರ್ 9 ರಂದು ಮತ ಎಣಿಕೆ ನಡೆಯಲಿದೆ. ಮಮತಾ ಬ್ಯಾನರ್ಜಿ ಸ್ಪರ್ಧೆಯ ಬಗ್ಗೆ ಮುಂಬರುವ ದಿನಗಳಲ್ಲಿ ಅಂತಿಮ ತೀರ್ಮಾನ ಹೊರಬೀಳಲಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us