ಚಂಡೀಗಢ: ಕೇವಲ 2,000 ರೂಪಾಯಿಗಾಗಿ ತನ್ನ ಗೆಳತಿಯ ಮುಖಕ್ಕೆ ಯುವಕನೊಬ್ಬ ಸ್ಯಾನಿಟೈಸರ್ ಎರಚಿ, ಲೈಟರ್ನಿಂದ ಬೆಂಕಿ ಹಚ್ಚಿರುವ ಘಟನೆ ನಗರದಲ್ಲಿ ನಡೆದಿದೆ.
ದೇಶದ ಈಶಾನ್ಯ ಭಾಗದ ಶಿಲ್ಲಾಂಗ್ ಮೂಲದ 22 ವರ್ಷದ ಯುವತಿ ಕಳೆದ ವರ್ಷ ನೌಕರಿ ಅರಸಿ ನಗರಕ್ಕೆ ಬಂದು ನೆಲೆಸಿದ್ದಳು. ಈ ವೇಳೆ ಯುವತಿಗೆ ಆರೋಪಿಯ ಪರಿಚಯವಾಗಿ ಇಬ್ಬರೂ ಹತ್ತಿರವಾಗಿದ್ದರು. ಆದರೆ, ಇತ್ತೀಚೆಗೆ ಯುವಕನು ಆಕೆಯ ಬಳಿ ಹಣಕ್ಕಾಗಿ ಪದೇ ಪದೇ ಪೀಡಿಸುತ್ತಿದ್ದನಂತೆ.
ಅಂತೆಯೇ, ಈ ಬಾರಿಯೂ 2,000 ರೂಪಾಯಿ ಡಿಮ್ಯಾಂಡ್ ಮಾಡಿದ್ದ. ಇವನ ಕಾಟಕ್ಕೆ ರೋಸು ಹೋಗಿದ್ದ ಯುವತಿ ನಿರಾಕರಿಸಿದಳು. ಅಷ್ಟಕ್ಕೇ ಸಿಟ್ಟಾದ ಆರೋಪಿ ಅಲ್ಲೇ ಇದ್ದ ಸ್ಯಾನಿಟೈಸರ್ನ ಅವಳ ಮುಖಕ್ಕೆ ಎರಚಿ, ಲೈಟರ್ನಿಂದ ಬೆಂಕಿ ಹಚ್ಚಿದ್ದಾನೆ. ಇದರಿಂದ ತೀವ್ರ ಸುಟ್ಟು ಗಾಯಗಳನ್ನ ಅನುಭವಿಸಿದ ಯುವತಿಯ ಚೀರಾಟ ಕೇಳಿ ಅಕ್ಕಪಕ್ಕದವರು ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅದೃಷ್ಟವಶಾತ್ ಯುವತಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಇದೀಗ ಯುವತಿ ನೀಡಿದ ದೂರಿನನ್ವಯ ಪೊಲೀಸರು ಯುವಕನನ್ನ ಬಂಧಿಸಿದ್ದಾರೆ.
Published On - 4:38 pm, Mon, 27 July 20