ದೆಹಲಿ: ತಾನೊಬ್ಬ ಸೇನಾಧಿಕಾರಿ ಎಂದು ಹೇಳಿಕೊಂಡು ಮಹಿಳೆಯರನ್ನು ವಂಚಿಸುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ಅಕೌಂಟ್ಗಳನ್ನು ಹೊಂದಿದ್ದ ಈ ವ್ಯಕ್ತಿ ತಾನೊಬ್ಬ ಆರ್ಮಿ ಆಫೀಸರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಈತನ ಹೆಸರು ದಿಲೀಪ್ ಕುಮಾರ್ ಎಂದಾಗಿದ್ದು ದೆಹಲಿಯ ಮೋಹನ್ ಗಾರ್ಡನ್ನಲ್ಲಿರುವ ಸೈನಿಕ್ ಎನ್ಕ್ಲೇವ್ ನಿವಾಸಿಯಾಗಿದ್ದ. ಶಾಲೆಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಶುಕ್ರವಾರ ಮಧ್ಯಾಹ್ನ 3 ಗಂಟೆ ಹೊತ್ತಿಗೆ, ಅರ್ಚನಾ ರೆಡ್ ಲೈಟ್ ಗ್ರೇಟರ್ ಕೈಲಾಶ್ನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಮಹಿಳೆಯೊಬ್ಬರನ್ನು ಭೇಟಿಯಾಗಲು ಈ ಪ್ರದೇಶಕ್ಕೆ ಬಂದಿದ್ದ ಎಂದು ಪೊಲೀಸರು ಹೇಳಿದ್ದಾರೆ. ಈ ವೇಳೆ ಈತ ಸೇನಾ ಸಮವಸ್ತ್ರದಲ್ಲಿಯೇ ಇದ್ದ. ಹಾಗೇ ಒಂದು ನಕಲಿ ಐಡಿಯನ್ನೂ ಹೊಂದಿದ್ದ. ಆತನ ಮೊಬೈಲ್ ಜತೆಗೆ ಫೇಕ್ ಐಡಿ ಕಾರ್ಡ್ನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಸೌತ್ನ ಡಿಸಿಪಿ ಅತುಲ್ ಕುಮಾರ್ ಠಾಕೂರ್ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರನ್ನು ಪರಿಚಯ ಮಾಡಿಕೊಂಡು, ತಾನೊಬ್ಬ ಸೇನಾ ಅಧಿಕಾರಿ, ಕ್ಯಾಪ್ಟನ್ ಶೇಖರ್ ಎಂದು ಪರಿಚಯಿಸಿಕೊಳ್ಳುತ್ತಿದ್ದ. ಅನೇಕ ವಾಟ್ಸ್ಆ್ಯಪ್ ಗ್ರೂಪ್ಗಳಲ್ಲಿ ಸಕ್ರಿಯನಾಗಿದ್ದ. ಅಲ್ಲದೆ, ಒಂದಷ್ಟು ಅಂತಾರಾಷ್ಟ್ರೀಯ ನಂಬರ್ಗಳಿಗೂ ಆಗಾ ಕರೆ ಮಾಡುತ್ತಿದ್ದ ಎಂಬುದು ಮೊಬೈಲ್ ಚೆಕ್ ಮಾಡಿದಾಗ ಬೆಳಕಿಗೆ ಬಂದಿದೆ ಎಂದೂ ಪೊಲೀಸರು ಮಾಹಿತಿ ನೀಡಿದ್ದಾರೆ.