ಒಂದೂವರೆ ತಿಂಗಳು ಕೊರೊನಾ ವಿರುದ್ಧ ಹೋರಾಡಿದ ಡಿಪಿಐಐಟಿ ಕಾರ್ಯದರ್ಶಿ ಡಾ. ಗುರುಪ್ರಸಾದ್ ಮೋಹಪಾತ್ರಾ ನಿಧನ; ಪ್ರಧಾನಿ ಮೋದಿಯವರಿಂದ ಸಂತಾಪ

1986ನೇ ಬ್ಯಾಚ್​​ನ ಗುಜರಾತ್​ನ ಐಎಎಸ್​ ಅಧಿಕಾರಿಯಾಗಿರುವ ಗುರುಪ್ರಸಾದ್ ಮೋಹಪಾತ್ರಾ ಆಗಸ್ಟ್​​ 2019ರಲ್ಲಿ ಡಿಪಿಐಐಟಿ ಕಾರ್ಯದರ್ಶಿ ಆಗುವುದಕ್ಕೂ ಮೊದಲು ಏರ್​ಪೋರ್ಟ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು.

ಒಂದೂವರೆ ತಿಂಗಳು ಕೊರೊನಾ ವಿರುದ್ಧ ಹೋರಾಡಿದ ಡಿಪಿಐಐಟಿ ಕಾರ್ಯದರ್ಶಿ ಡಾ. ಗುರುಪ್ರಸಾದ್ ಮೋಹಪಾತ್ರಾ ನಿಧನ; ಪ್ರಧಾನಿ ಮೋದಿಯವರಿಂದ ಸಂತಾಪ
ಡಾ. ಗುರುಪ್ರಸಾದ್ ಮೋಹಪಾತ್ರಾ
TV9kannada Web Team

| Edited By: Lakshmi Hegde

Jun 19, 2021 | 5:16 PM

ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆ (DPIIT-ಡಿಪಿಐಐಟಿ) ಕಾರ್ಯದರ್ಶಿ ಗುರುಪ್ರಸಾದ್ ಮೋಹಪಾತ್ರಾ ಇಂದು ಕೊವಿಡ್​ 19 ಸಂಬಂಧಿತ ಸಮಸ್ಯೆಯಿಂದ ನಿಧನರಾಗಿದ್ದಾರೆ. ಗುಜರಾತ್​ ಕೇಡರ್​ನ ಐಎಎಸ್​ ಅಧಿಕಾರಿಯಾಗಿದ್ದ ಗುರುಪ್ರಸಾದ್ ಮೋಹಪಾತ್ರಾ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಸಚಿವ ಪಿಯುಷ್​ ಗೋಯೆಲ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. 2019ರ ಆಗಸ್ಟ್​​ನಲ್ಲಿ ಡಿಪಿಐಐಟಿ ಇಲಾಖೆ ಕಾರ್ಯದರ್ಶಿಯಾಗಿ ನೇಮಕರಾಗಿದ್ದರು.

ಮೋಹಪಾತ್ರಾರಿಗೆ ಏಪ್ರಿಲ್​​ನಲ್ಲಿಯೇ ಕೊವಿಡ್​ 19 ಸೋಂಕು ಕಾಣಿಸಿಕೊಂಡಿತ್ತು. ಏಪ್ರಿಲ್​ 18ರಂದು ಅವರು ಏಮ್ಸ್​ಗೆ ದಾಖಲಾಗಿದ್ದರು. ಸುಮಾರು ಒಂದೂವರೆ ತಿಂಗಳ ಕಾಲ ಆಸ್ಪತ್ರೆಯಲ್ಲೇ ಇದ್ದು ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯದಲ್ಲಿ ಇತ್ತೀಚೆಗೆ ತುಸು ಚೇತರಿಕೆ ಕಾಣಿಸಿತ್ತು. ಆದರೆ ಇಂದು ಅವರು ಮೃತಪಟ್ಟಿದ್ದು ನಿಜಕ್ಕೂ ಶಾಕ್​ ಆಗಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೋಹಪಾತ್ರಾ ನಿಧನಕ್ಕೆ ಪ್ರಧಾನಿ ಮೋದಿಯವರು ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. ಡಾ. ಗುರುಪ್ರಸಾದ್​ ಮೋಹಪಾತ್ರಾ ಜತೆ ನಾನು ಗುಜರಾತ್​ ಮುಖ್ಯಮಂತ್ರಿಯಾಗಿದ್ದಾಗಲೂ ಕೆಲಸ ಮಾಡಿದ್ದೇನೆ. ಈಗ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಬಳಿಕವೂ ಕೆಲಸ ಮಾಡಿದ್ದೇನೆ. ಡಿಪಿಐಐಟಿ ಕಾರ್ಯದರ್ಶಿಯಾಗಿದ್ದ ಅವರಲ್ಲಿ ಆಡಳಿತಾತ್ಮಕ ವಿಷಯಗಳ ಬಗ್ಗೆ ತುಂಬ ತಿಳಿವಳಿಕೆ ಇತ್ತು. ಸದಾ ಉತ್ಸಾಹದಿಂದಲೇ ಇರುತ್ತಿದ್ದ ಅವರ ನಿಧನದಿಂದ ತುಂಬ ನೋವಾಗಿದೆ. ಮೋಹಪಾತ್ರಾ ಕುಟುಂಬ ಮತ್ತು ಸ್ನೇಹವಲಯಕ್ಕೆ ನನ್ನ ಸಾಂತ್ವನಗಳು..ಓಂ ಶಾಂತಿ ಎಂದು ಹೇಳಿದ್ದಾರೆ. ಕೇಂದ್ರ ಸಚಿವ ಪಿಯುಷ್​ ಗೋಯೆಲ್​ ಕೂಡ ಟ್ವೀಟ್ ಮಾಡಿದ್ದು, ಡಿಪಿಐಐಟಿ ಕಾರ್ಯದರ್ಶಿ ಡಾ. ಗುರುಪ್ರಸಾದ್ ಮೋಹಪಾತ್ರಾ ನಿಧನದಿಂದ ನೋವಾಗಿದೆ. ಅವರು ರಾಷ್ಟ್ರಕ್ಕೆ ದೀರ್ಘಕಾಲದ ಸೇವೆ ಸಲ್ಲಿಸಿದ್ದಾರೆ. ನಿಜಕ್ಕೂ ಅವರ ಸಾವು ತುಂಬಲಾರದ ನಷ್ಟ ಎಂದು ಹೇಳಿದ್ದಾರೆ. ಹಾಗೇ, ವಿದೇಶಾಂಗ ವ್ಯವಹಾರಗಳ ಸಚಿವರಾದ ಡಾ. ಜಯಶಂಕರ್​, ಗುಜರಾತ್​ ಸಿಎಂ ವಿಜಯ್​ ರೂಪಾಣಿ ಸೇರಿ ಹಲವು ನಾಯಕರು ಸಂತಾಪ ಸೂಚಿಸಿದ್ದಾರೆ.

ಏರ್​ಪೋರ್ಟ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು 1986ನೇ ಬ್ಯಾಚ್​​ನ ಗುಜರಾತ್​ನ ಐಎಎಸ್​ ಅಧಿಕಾರಿಯಾಗಿರುವ ಗುರುಪ್ರಸಾದ್ ಮೋಹಪಾತ್ರಾ ಆಗಸ್ಟ್​​ 2019ರಲ್ಲಿ ಡಿಪಿಐಐಟಿ ಕಾರ್ಯದರ್ಶಿ ಆಗುವುದಕ್ಕೂ ಮೊದಲು ಏರ್​ಪೋರ್ಟ್ ಪ್ರಾಧಿಕಾರದ ಅಧ್ಯಕ್ಷರಾಗಿದ್ದರು. ಇನ್ನು ಗುಜರಾತ್​​ನಲ್ಲಿಯೇ ಕಾರ್ಯ ನಿರ್ವಹಿಸುತ್ತಿದ್ದ ಇವರು, ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕವೇ ದೆಹಲಿ ಆಡಳಿತಕ್ಕೆ ಪ್ರವೇಶ ಮಾಡಿದ್ದಾರೆ.

ಡಾ.ಗುರುಪ್ರಸಾದ್​ ಮೋಹಪಾತ್ರಾ ಮೂಲತಃ ಓಡಿಶಾದ ಭುವನೇಶ್ವರ್​​ನವರು. ಜವಾಹರ್​ಲಾಲ್​ ನೆಹರೂ ವಿಶ್ವ ವಿದ್ಯಾಲಯದಲ್ಲಿ ಪೊಲಿಟಿಕಲ್​ ಸೈನ್ಸ್​​ನಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಿದ್ದಾರೆ. 1999ರಲ್ಲಿ ಸೂರತ್​ ಮುನ್ಸಿಪಲ್​ ಕಾರ್ಪೋರೇಶನ್​ನ ಆಯುಕ್ತರಾಗಿ ನೇಮಕರಾಗುವ ಮೂಲಕ ಒಂದು ದೊಡ್ಡ ಹುದ್ದೆಗೆ ಏರಿದ ಇವರು ನಂತರ ತಿರುಗಿ ನೋಡಲಿಲ್ಲ. 2002ರವರೆಗೂ ಈ ಪುರಸಭೆ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಈ ವೇಳೆ ಸೂರತ್​ನಲ್ಲಿ ಘನತ್ಯಾಜ್ಯ ನಿರ್ವಹಣೆ, ಮೂಲಸೌಕರ್ಯ ಅಭಿವೃದ್ಧಿ, ಹಣಕಾಸು ನಿರ್ವಹಣೆಯನ್ನು ಅತ್ಯುತ್ತಮವಾಗಿ ಮಾಡಿ ಶ್ಲಾಘನೆಗೆ ಪಾತ್ರರಾಗಿದ್ದರು. ಅದಾದ ನಂತರ ವಡೋದರಾದಲ್ಲಿರುವ ಗುಜರಾತ್​ ಕ್ಷಾರ ಮತ್ತು ರಾಸಾಯನಿಕ ಕಂಪನಿಯ ಮ್ಯಾನೇಜಿಂಗ್ ಡೈರೆಕ್ಟರ್​ ಆಗಿ, ಸಾರಿಗೆ ಇಲಾಖೆ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ ಮತ್ತು ಅಹಮದಾಬಾದ್ ಪುರಸಭೆ ಆಯುಕ್ತರಾಗಿಯೂ ಕಾರ್ಯ ನಿರ್ವಹಿಸಿದ್ದರು. ಹಾಗೇ, 2002 ರಿಂದ 2004ರವರೆಗೆ ಗುಜರಾತ್ ವಿದ್ಯುತ್​ ಮಂಡಳಿಯ ಸದಸ್ಯರೂ ಆಗಿದ್ದರು. 2014ರಲ್ಲಿ ಮೊದಲ ಬಾರಿಗೆ ದೆಹಲಿಗೆ ಹೋದ ಅವರು, ಅದೇ ವರ್ಷದಿಂದ 2016ರವರೆಗೆ ವಾಣಿಜ್ಯ ಮತ್ತು ಉದ್ಯಮ ಇಲಾಖೆ ಜಂಟಿ ಆಯುಕ್ತರಾಗಿದ್ದರು.

ಆಕ್ಸಿಜನ್ ಪೂರೈಕೆ ಸವಾಲು ಎದುರಿಸಿದ್ದರು ಕೊವಿಡ್ 19 ಎರಡನೇ ಅಲೆ ಉಲ್ಬಣಗೊಂಡಾಗ ಇಡೀ ದೇಶ ಆಕ್ಸಿಜನ್ ಅಭಾವದ ಸಮಸ್ಯೆಯನ್ನು ಎದುರಿಸಿತ್ತು. ಪ್ರತಿನಿತ್ಯ ಒಂದಲ್ಲ ಒಂದು ಆಸ್ಪತ್ರೆಗಳು ಆಮ್ಲಜನಕಕ್ಕಾಗಿ ಬೇಡಿಕೆಯನ್ನು ಇಡುತ್ತಿದ್ದವು. ದೆಹಲಿಯ ಕೆಲವು ಆಸ್ಪತ್ರೆಗಳಂತೂ ಹೈಕೋರ್ಟ್​ ಮೆಟ್ಟಿಲನ್ನೂ ಹತ್ತಿದ್ದವು. ಇಂಥ ಸವಾಲಿನ ಪರಿಸ್ಥಿತಿ ನಿರ್ವಹಣೆಯಲ್ಲಿ ಡಾ. ಗುರುಪ್ರಸಾದ್ ಮೋಹಪಾತ್ರಾ ತುಂಬ ಪ್ರಮುಖ ಪಾತ್ರ ವಹಿಸಿದ್ದರು. ಆಮ್ಲಜನಕ ಪೂರೈಕೆಯ ಕಾರ್ಯವಿಧಾನವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ಇದನ್ನೂ ಓದಿ: ಭಾರತೀಯರು ಸ್ವಿಸ್​ ಬ್ಯಾಂಕ್​ಗಳಲ್ಲಿ ಹೂಡಿರುವ ಹಣದ ಬಗ್ಗೆ ಸ್ವಿಜರ್​ಲ್ಯಾಂಡ್​ ಅಧಿಕಾರಿಗಳಿಂದ ವಿವರ ಕೇಳಿದ ಭಾರತ ಸರ್ಕಾರ

(DPIIT Secretary Dr Guruprasad Mohapatra Died By Coronavirus in New delhi)

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada