Tamil Nadu Elections 2021: ಚುನಾವಣಾ ಪ್ರಚಾರ ಮುಗಿಸಿ ಬರುತ್ತಿದ್ದ ಕಮಲ್ ಹಾಸನ್​ರ ಕಾರಿನ ಬಾಗಿಲು ತೆರೆಯಲು ವ್ಯಕ್ತಿಯಿಂದ ಯತ್ನ; ಇದು ದಾಳಿ ಪ್ರಯತ್ನ ಎಂದ ಎಂಎನ್ಎಂ

|

Updated on: Mar 15, 2021 | 11:37 AM

Kamal Haasan: ಕಮಲ್ ಹಾಸನ್ ಅವರ ಕಾರಿನ ಬಾಗಿಲು ತೆರೆಯಲು ವ್ಯಕ್ತಿಯೊಬ್ಬರು ಪ್ರಯತ್ನಿಸಿದ್ದು, ಮದ್ಯದ ಅಮಲಿನಲ್ಲಿದ್ದ ಆತ ಎಂಎನ್ಎಂ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎಂಎನ್ಎಂ ಸದಸ್ಯರು ಆರೋಪಿಸಿದ್ದಾರೆ.

Tamil Nadu Elections 2021: ಚುನಾವಣಾ ಪ್ರಚಾರ ಮುಗಿಸಿ ಬರುತ್ತಿದ್ದ ಕಮಲ್ ಹಾಸನ್​ರ ಕಾರಿನ ಬಾಗಿಲು ತೆರೆಯಲು ವ್ಯಕ್ತಿಯಿಂದ ಯತ್ನ; ಇದು ದಾಳಿ ಪ್ರಯತ್ನ ಎಂದ ಎಂಎನ್ಎಂ
ಕಮಲ್ ಹಾಸನ್
Follow us on

ಚೆನ್ನೈ: ಬಹುಭಾಷಾ ನಟ, ಮಕ್ಕಳ್ ನೀಧಿ ಮಯ್ಯಂ (MNM) ಪಕ್ಷದ ಸಂಸ್ಥಾಪಕ ಕಮಲ್ ಹಾಸನ್ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮರಳುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಅವರ ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದ ಘಟನೆ ಭಾನುವಾರ ನಡೆದಿದೆ. ಏಪ್ರಿಲ್ 6 ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಗಾಗಿ ಪಕ್ಷದ ಪ್ರಚಾರ ಮಾಡಲು ಕಮಲ್ ಹಾಸನ್ ಭಾನುವಾರ ಕಾಂಚೀಪುರಂಗೆ ಹೋಗಿದ್ದರು. ಅಲ್ಲಿಂದ ಚೆನ್ನೈಗೆ ಮರಳುವ ದಾರಿಯಲ್ಲಿ ಅಭಿಮಾನಿಗಳ ನಡುವೆ ಕಾರು ಸಾಗಿದಾಗ ವ್ಯಕ್ತಿಯೊಬ್ಬ ಕಾರಿನ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾರೆ.

ಈ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ಆತ ಕಮಲ್ ಹಾಸನ್ ಅಭಿಮಾನಿ ಎಂದು ಹೇಳಿದ್ದಾರೆ. ಮದ್ಯದ ಅಮಲಿನಲ್ಲಿದ್ದ ಆ ವ್ಯಕ್ತಿ ಎಂಎನ್ಎಂ ಬೆಂಬಲಿಗರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಎಂಎನ್ಎಂ ಸದಸ್ಯರು ಆರೋಪಿಸಿದ್ದಾರೆ. ಪೊಲೀಸರು ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ಎನ್​​ಡಿಟಿವಿ ವರದಿ ಮಾಡಿದೆ. ಇದೊಂದು ದಾಳಿ ಪ್ರಯತ್ನ ಎಂದು ಆರೋಪಿಸಿರುವ ಎಂಎನ್ಎಂ ಈ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಹೇಳಿದೆ.

ಆದಾಗ್ಯೂ, ಆ ವ್ಯಕ್ತಿ ಕಮಲ್ ಹಾಸನ್ ಅವರ ಅಭಿಮಾನಿ. ಕಮಲ್ ಮೇಲೆ ದಾಳಿ ಮಾಡಬೇಕು ಎಂಬ ಯಾವ ಉದ್ದೇಶವೂ ಆತನಿಗೆ ಇರಲಿಲ್ಲ. ಕಮಲ್ ಹಾಸನ್​ಗಾಗಲೀ, ಅವರ ಕಾರಿಗಾಗಲೀ ಯಾವುದೇ ಹಾನಿ ಆಗಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ತಮಿಳುನಾಡು ಚುನಾವಣೆಯಲ್ಲಿ ಕೊಯಂಬತ್ತೂರ್​ ದಕ್ಷಿಣ ವಿಧಾನಸಭಾಕ್ಷೇತ್ರದಿಂದ ಕಮಲ್ ಹಾಸನ್ ಸ್ಪರ್ಧೆಗಿಳಿದಿದ್ದಾರೆ. ರಾಜ್ಯದಲ್ಲಿ ಹೆಚ್ಚುತ್ತಿರುವ ಭ್ರಷ್ಟಾಚಾರ, ನಿರುದ್ಯೋಗ ಸಮಸ್ಯೆಗಳನ್ನು ನಿವಾರಿಸುತ್ತೇವೆ. ಗ್ರಾಮಗಳನ್ನು ಅಭಿವೃದ್ಧಿ ಪಡಿಸುತ್ತೇವೆ, ಇ-ಆಡಳಿತಕ್ಕೆ ಒತ್ತು ನೀಡುತ್ತೇವೆ ಎಂದು ಕಮಲ್ ಅವರ ಪಕ್ಷ ಮಕ್ಕಳ್ ನೀಧಿ ಮಯ್ಯಂ ಜನರಿಗೆ ಭರವಸೆ ನೀಡಿದೆ. ಗೃಹಿಣಿಯರಿಗೆ ಸಂಬಳ ಮತ್ತು ಎಲ್ಲ ಮನೆಗಳಿಗೆ ಉಚಿತ ಕಂಪ್ಯೂಟರ್ ಮತ್ತು ಇಂಟರ್ನೆಟ್ ಸೌಲಭ್ಯ ನೀಡುವುದಾಗಿ ಪಕ್ಷ ವಾಗ್ದಾನ ನೀಡಿದೆ.

 154 ಸೀಟುಗಳಲ್ಲಿ ಸ್ಪರ್ಧಿಸಲಿದೆ ಮಕ್ಕಳ್ ನೀಧಿ ಮಯ್ಯಂ
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಕಮಲ್ ಹಾಸನ್ ಅವರ ಮಕ್ಕಳ್ ನೀಧಿ ಮಯ್ಯಂ( MNM), ಆಲ್ ಇಂಡಿಯಾ ಸಮತ್ವ ಮಕ್ಕಳ್ ಕಟ್ಚಿ (AISMK) ಮತ್ತು ಇಂದಿಯಾ ಜನನಾಯಕ ಕಟ್ಚಿ(IJK) ಸೀಟು ಹಂಚಿಕೆ ಬಗ್ಗೆ ನಿರ್ಧಾರ ಕೈಗೊಂಡಿದ್ದು ತಮಿಳುನಾಡಿನಲ್ಲಿ ಅಭಿವೃದ್ಧಿ ಮತ್ತು ಬದಲಾವಣೆ ತರುತ್ತೇವೆ ಎಂದು ಈ ಪಕ್ಷಗಳು ಜನರಿಗೆ ಭರವಸೆ ನೀಡಿವೆ. ಒಟ್ಟು 234 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು ಈ ಪೈಕಿ 154 ಸೀಟುಗಳಲ್ಲಿ ಎಂಎನ್ಎಂ ಸ್ಪರ್ಧಿಸಲಿದೆ. ಅದೇ ವೇಳೆ ಎಐಎಸ್ ಎಂಕೆ ಮತ್ತು ಐಜೆಕೆ 40 ಸೀಟುಗಳಲ್ಲಿ ಕಣಕ್ಕಿಳಿಯಲಿದೆ.

ತಮಿಳುನಾಡಿನ ಜನರ ಬಹುಕಾಲದ ಆಗ್ರಹವನ್ನು ಪೂರೈಸಲು ನಮ್ಮ ಪಕ್ಷ ಬದ್ಧವಾಗಿದೆ. ತಮಿಳುನಾಡಿನ ಪ್ರತಿಷ್ಠೆ ಮತ್ತು ಕೀರ್ತಿಯನ್ನು ಪುನಸ್ಥಾಪಿಸುವ ಉದ್ದೇಶದಿಂದ ನಮ್ಮ ಸುದೀರ್ಘ ಪಯಣ ಮುಂದುವರಿಸಲು ನಿರ್ಧರಿಸಿದ್ದೇವೆ ಎಂದು ಎಂಎನ್ಎಂ ಪಕ್ಷ ತಮ್ಮ ಪ್ರಕಟಣೆಯಲ್ಲಿ ತಿಳಿಸಿದೆ.  2019 ಲೋಕಸಭಾ ಚುನಾವಣೆಯಲ್ಲಿ ಎಂಎನ್ಎಂ ಶೇಕಡಾ 4ರಷ್ಟು ಮತಗಳಿಸಿತ್ತು.

ಸಿ- ವೋಟರ್ ಸಮೀಕ್ಷೆ
ಟೈಮ್ಸ್ ನೌ- ಸಿ ವೋಟರ್ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಾರ ಡಿಎಂಕೆ-ಕಾಂಗ್ರೆಸ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ 154ರಿಂದ 162 ಸೀಟುಗಳನ್ನು ಗೆಲ್ಲಲಿದೆ. ಅದೇ ವೇಳೆ ಯುಪಿಎ ಮೈತ್ರಿಕೂಟ 158 ಸೀಟುಗಳನ್ನು ಗೆಲ್ಲುವ ನಿರೀಕ್ಷೆ ಇದೆ. 2016ರ ಚುನಾವಣೆಯಲ್ಲಿ ಲಭಿಸಿದ ಸೀಟುಗಳಿಗಿಂತ 60 ಸೀಟುಗಳು ಯುಪಿಎಗೆ ಹೆಚ್ಚಾಗಲಿದೆ ಎಂದು ಸಮೀಕ್ಷೆ ಹೇಳಿದೆ. 234 ವಿಧಾನಸಭೆ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.

ಇದನ್ನೂ ಓದಿ:   Assembly Elections 2021: ಪಂಚರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಯಾರು ಗೆಲ್ಲಬಹುದು? ಸಮೀಕ್ಷೆ ಏನು ಹೇಳುತ್ತಿದೆ?