ಅಪರಿಚಿತ ವ್ಯಕ್ತಿಗಳಿಂದ ಮಣಿಪುರ ಸಚಿವೆ ಮನೆಗೆ ಬೆಂಕಿ: ಶೋಧ ಕಾರ್ಯಾಚರಣೆ ಆರಂಭ
ಮಣಿಪುರದ ಏಕೈಕ ಮಹಿಳಾ ಕೈಗಾರಿಕಾ ಸಚಿವೆ ನೆಮ್ಚಾ ಕಿಪ್ಗೆನ್ ಅವರ ಅಧಿಕೃತ ನಿವಾಸಕ್ಕೆ ಅಪರಿಚತ ವ್ಯಕ್ತಿಗಳಿಂದ ಬುಧವಾರ ಬೆಂಕಿ ಹಚ್ಚಲಾಗಿದೆ.
ಗುವಾಹಟಿ: ಮಣಿಪುರದ ಏಕೈಕ ಮಹಿಳಾ ಸಚಿವರ ಅಧಿಕೃತ ನಿವಾಸಕ್ಕೆ ಅಪರಿಚತ ವ್ಯಕ್ತಿಗಳಿಂದ ಬುಧವಾರ ಬೆಂಕಿ ಹಚ್ಚಲಾಗಿದೆ. ಮೈಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆ ಹಿನ್ನೆಲೆ ಇಂಫಾಲ್ ಪಶ್ಚಿಮ ಜಿಲ್ಲೆಯ ಲಂಫೇಲ್ ಪ್ರದೇಶದಲ್ಲಿರುವ ಕೈಗಾರಿಕಾ ಸಚಿವ ನೆಮ್ಚಾ ಕಿಪ್ಗೆನ್ (Nemcha Kipgen) ಅವರ ಬಂಗಲೆಯನ್ನು ಕಿಡಿಗೇಡಿಗಳು ಇಂದು ಸಂಜೆ ಗುರಿಯಾಗಿಸಿಕೊಂಡಿದ್ದಾರೆ. ಘಟನೆ ನಡೆದ ವೇಳೆ ನಿವಾಸದಲ್ಲಿ ಯಾರು ಇಲ್ಲದೇ ಇರುವುದರಿಂದ ಭಾರೀ ಅನಾಹುತ ತಪ್ಪಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿಗಳು ತಲುಪಿದ್ದು, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಿಪ್ಗೆನ್ ಕುಕಿ ಸಮುದಾಯದ ನಾಯಕಿ ಆಗಿದ್ದಾರೆ. ಘಟನೆಯ ಕುರಿತಾಗಿ ಇದುವರೆಗೂ ಯಾವುದೇ ಗುಂಪು ಕೂಡ ಜವಾಬ್ದಾರಿಯನ್ನು ವಹಿಸಿಕೊಂಡಿಲ್ಲ. ಸದ್ಯ ಹಿರಿಯ ಅಧಿಕಾರಿಗಳ ನೇತೃತ್ವದ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿವೆ.
ಇದನ್ನೂ ಓದಿ: ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಸಾರ್ವಜನಿಕರ ಅಭಿಪ್ರಾಯ ಕೇಳಲು ಮುಂದಾದ ಕಾನೂನು ಆಯೋಗ
ಬುಡಕಟ್ಟು ಪ್ರಾಬಲ್ಯ ಹೊಂದಿರುವ ಕಾಂಗ್ಪೊಕ್ಪಿ ಸ್ಥಾನದಿಂದ ಕಳೆದ ವರ್ಷದ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯ ವಿಧಾನಸಭೆಗೆ ಆಯ್ಕೆಯಾದ ಕಿಪ್ಗೆನ್, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ನೇತೃತ್ವದ 12 ಸದಸ್ಯರ ಸಂಪುಟದಲ್ಲಿ ಏಕೈಕ ಮಹಿಳಾ ಸಚಿವರಾಗಿದ್ದಾರೆ.
ಪ್ರತ್ಯೇಕ ಆಡಳಿತಕ್ಕಾಗಿ ಒತ್ತಾಯಿಸಿದ 10 ಕುಕಿ ಶಾಸಕರಲ್ಲಿ ಮತ್ತು ಬಿಜೆಪಿಯ ಏಳು ಕುಕಿ ಶಾಸಕರಲ್ಲಿ ಅವರು ಒಬ್ಬರು. ಕಳೆದ 24 ಗಂಟೆಗಳಲ್ಲಿ, ಒಬ್ಬರು ಮಹಿಳೆ ಸೇರಿದಂತೆ ಒಟ್ಟು ಒಂಬತ್ತು ಜನರು ಸಾವನ್ನಪ್ಪಿದ್ದಾರೆ. ಖಮೆನ್ಲೋಕ್ ಪ್ರದೇಶದಲ್ಲಿ ತಡರಾತ್ರಿ ನಡೆದ ಗುಂಡಿನ ದಾಳಿಯಲ್ಲಿ ಹೆಚ್ಚಿನವರು ಸಾವನ್ನಪ್ಪಿದ್ದಾರೆ ಎಂದು ಸೇನೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕೋಟಿ ಒಡೆಯ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ: ಆಸ್ತಿ ಮೌಲ್ಯ ಎಷ್ಟು?
ಮೈಟಿ ಮತ್ತು ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಘರ್ಷಣೆಗಳಿಂದಾಗಿ ಈಗ ಒಂದು ತಿಂಗಳಿನಿಂದ ಉದ್ವಿಗ್ನವಾಗಿರುವ ರಾಜ್ಯದಲ್ಲಿ ಈ ದಾಳಿಗಳು ದೊಡ್ಡ ಹಿನ್ನಡೆಯಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:02 pm, Wed, 14 June 23