ಕೋಟಿ ಒಡೆಯ ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ: ಆಸ್ತಿ ಮೌಲ್ಯ ಎಷ್ಟು?
ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ 2021 ರ ಚುನಾವಣೆಯಲ್ಲಿ ತಮ್ಮ ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು 1.80 ಕೋಟಿ ರೂ. ಎಂದು ಘೋಷಿಸಿದ್ದರು.
ಚೆನ್ನೈ: ಬರೋಬ್ಬರಿ 18 ಗಂಟೆಗಳ ಕಾಲ ವಿಚಾರಣೆ ಬಳಿಕ ತಮಿಳುನಾಡಿನ ವಿದ್ಯುತ್ ಸಚಿವ ಸೆಂಥಿಲ್ ಬಾಲಾಜಿ (Senthil Balaji) ಅವರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿ ಬುಧವಾರ ಬಂಧಿಸಿದ್ದಾರೆ. 2011-16ರಲ್ಲಿ ಎಐಎಡಿಎಂಕೆ ಆಡಳಿತದಲ್ಲಿ ಸಾರಿಗೆ ಸಚಿವರಾಗಿದ್ದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸೆಂಥಿಲ್ ಬಾಲಾಜಿ ಅವರನ್ನು ಬಂಧಿಸಲಾಗಿದೆ. ಸದ್ಯ ಈ ಪ್ರಕರಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅದರ ಜೊತೆ ಜೊತೆಗೆ ಸೆಂಥಿಲ್ ಬಾಲಾಜಿ ಅವರ ಆಸ್ತಿ ಬಗ್ಗೆ ಊಹಾಪೋಹಗಳು ಕೇಳಿ ಬರುತ್ತಿವೆ.
ಸೆಂಥಿಲ್ ಬಾಲಾಜಿ ಅವರ ಚುನಾವಣಾ ಅಫಿಡವಿಟ್ನಲ್ಲಿ ಏನಿದೆ?
ಡಿಎಂಕೆ ಸಚಿವ ಸೆಂಥಿಲ್ ಬಾಲಾಜಿ 2021 ರ ಚುನಾವಣೆಯಲ್ಲಿ ತಮ್ಮ ಚುನಾವಣಾ ಅಫಿಡವಿಟ್ನಲ್ಲಿ ತಮ್ಮ ಒಟ್ಟು ಆಸ್ತಿ ಮೌಲ್ಯವನ್ನು 1.80 ಕೋಟಿ ರೂ. ಎಂದು ಘೋಷಿಸಿದ್ದರು. ಅವರ ಅಫಿಡವಿಟ್ನ ಪ್ರಕಾರ ಬಾಲಾಜಿ ಅವರ ಹೆಸರಿನಲ್ಲಿ 97,93,067 ರೂ. ಚರಾಸ್ತಿಯನ್ನು ಹೊಂದಿದ್ದು, 2019-20ರ ಆರ್ಥಿಕ ವರ್ಷದಲ್ಲಿ ಸುಮಾರು 9 ಲಕ್ಷ ರೂ. ವಾರ್ಷಿಕ ಆದಾಯವನ್ನು ತೋರಿಸಿದರೆ. ಅವರ ಪತ್ನಿ ಎಸ್.ಮೇಗಲಾ ಅವರ ಹೆಸರಿನಲ್ಲಿ 83,04,002 ರೂ. ಹೊಂದಿದ್ದಾರೆ.
ಇದನ್ನೂ ಓದಿ: ಭ್ರಷ್ಟಾಚಾರ ಮಾತ್ರವಲ್ಲ ಕೊಲೆ ಮತ್ತು ಅಪಹರಣದ ಆರೋಪಗಳನ್ನು ಎದುರಿಸುತ್ತಿದ್ದಾರೆ ಸೆಂಥಿಲ್ ಬಾಲಾಜಿ
11.56 ಲಕ್ಷ ಮೌಲ್ಯದ ಫಾರ್ಚೂನರ್ ಕಾರು, 11.62 ಲಕ್ಷ ಮೌಲ್ಯದ ಇನ್ನೋವಾ ಕಾರು ಮತ್ತು 1.15 ಲಕ್ಷ ಮೌಲ್ಯದ ಟೆಂಪೊ ಟ್ರಕ್ ಕೂಡ ತಮ್ಮ ಹೆಸರಿನಲ್ಲಿದೆ. ಅತ್ತೂರು ಗ್ರಾಮದಲ್ಲಿ 3.59 ಎಕರೆ ಕೃಷಿ ಭೂಮಿ ಅವರ ಹೆಸರಿನಲ್ಲಿರುವ ಏಕೈಕ ಸ್ಥಿರಾಸ್ತಿ ಆಗಿದೆ. ಅದರ ಪ್ರಸ್ತುತ ಮೌಲ್ಯ ಸುಮಾರು 1.1 ಕೋಟಿ ರೂ. ಎನ್ನಲಾಗುತ್ತಿದೆ.
ಸೆಂಥಿಲ್ ಬಾಲಾಜಿ ಬಳಿ 85,000 ರೂ ಮೌಲ್ಯದ ಪಿಸ್ತೂಲ್
ಸೆಂಥಿಲ್ ಬಾಲಾಜಿ ಮತ್ತು ಅವರ ಪತ್ನಿ 37 ಲಕ್ಷ ರೂ ಮೌಲ್ಯದ ಆಭರಣಗಳನ್ನು ಹೊಂದಿದ್ದಾರೆ. 96 ಲಕ್ಷ ಮೌಲ್ಯದ 382 ಗ್ರಾಂ ಚಿನ್ನ, 26.7 ಲಕ್ಷ ಮೌಲ್ಯದ 1019.48 ತೂಕದ ಚಿನ್ನಾಭರಣಗಳು ಹೊಂದಿದ್ದಾರೆ. ಇನ್ನು ಸೆಂಥಿಲ್ ಬಾಲಾಜಿ ಅವರು ತಮ್ಮ ಅಫಿಡವಿಟ್ನಲ್ಲಿ ತನ್ನ ಬಳಿ 85,000 ರೂ ಮೌಲ್ಯದ ಪಿಸ್ತೂಲ್ ಇದೆ ಎಂದು ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: ತಮಿಳುನಾಡು ಸಚಿವ ಸೆಂಥಿಲ್ ಬಾಲಾಜಿ ಬಂಧನ; 2024ರಲ್ಲಿ ಜನರು ಬಿಜೆಪಿಗೆ ತಕ್ಕ ಪಾಠ ಕಲಿಸಲಿದ್ದಾರೆ: ಎಂಕೆ ಸ್ಟಾಲಿನ್
ಸೆಂಥಿಲ್ ಬಾಲಾಜಿ ಅವರು 2006 ಮತ್ತು 2011 ರ ವಿಧಾನಸಭಾ ಚುನಾವಣೆಗಳಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪರವಾಗಿ ಕರೂರ್ನಿಂದ ಸ್ಪರ್ಧಿಸಿ ಗೆದಿದ್ದರು. 2011-16ರ ಅವಧಿಯಲ್ಲಿ ಜಯಲಲಿತಾ ಅವರ ಕ್ಯಾಬಿನೆಟ್ನಲ್ಲಿ ಸಾರಿಗೆ ಸಚಿವರಾಗಿ ಸೇವೆ ಸಲ್ಲಿಸಿ, ಬಳಿಕ 2018 ರಲ್ಲಿ ಡಿಎಂಕೆ ಸೇರಿದ್ದರು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.