ಇಂಫಾಲ್: ಈಶಾನ್ಯ ರಾಜ್ಯ ಮಣಿಪುರದಲ್ಲಿ ನಡೆದಿದ್ದ ಹಿಂಸಾಚಾರ ಪ್ರಕರಣದ (Manipur violence) ತನಿಖೆಗಾಗಿ ಕೇಂದ್ರ ಸರ್ಕಾರವು (Central Government) 1952ರ ತನಿಖಾ ಆಯೋಗದ (Commission of Inquiry) ಅಡಿಯಲ್ಲಿ ಸಮಿತಿ ರಚಿಸಿದೆ. ಗೌಹಾಟಿ ಹೈಕೋರ್ಟ್‌ನ ಮಾಜಿ ಮುಖ್ಯ ನ್ಯಾಯಮೂರ್ತಿ ಅಜಯ್ ಲಂಬಾ, ನಿವೃತ್ತ ಐಎಎಸ್ ಅಧಿಕಾರಿ ಹಿಮಾಂಶು ಶೇಖರ್ ದಾಸ್ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಅಲೋಕ ಪ್ರಭಾಕರ್ ಅವರನ್ನು ಒಳಗೊಂಡ ಸಮಿತಿ ಪ್ರಕರಣದಲ್ಲಿ ಸಂಭವಿಸಿದ ಪ್ರಾಣಹಾನಿ, ಗಾಯಗಳು ಮತ್ತು ಆಸ್ತಿಹಾನಿ ಕುರಿತಾಗಿ ಕೂಲಂಕಷವಾಗಿ ತನಿಖೆ ಮಾಡಲಿದೆ.
ಮೇ 3, 2023 ರಂದು ವಿವಿಧ ಸಮುದಾಯಗಳ ಸದಸ್ಯರನ್ನು ಗುರಿಯಾಗಿಸಿಕೊಂಡು ನಡೆಸಲಾದ ಹಿಂಸಾಚಾರ ಮತ್ತು ಗಲಭೆಗಳ ಕಾರಣಗಳ ಕುರಿತಾಗಿ ಆಯೋಗವು ತನಿಖೆ ನಡೆಯಲಿದೆ. ಇದು ಹಿಂಸಾಚಾರಕ್ಕೆ ಕಾರಣವಾಗುವ ಘಟನೆಗಳ ಕುರಿತಾಗು ಸೂಕ್ಷ್ಮವಾಗಿ ಅಧ್ಯಯನ ಮಾಡುತ್ತದೆ.
ಈ ಪ್ರಕರಣದಲ್ಲಿ ಅಧಿಕಾರಿಗಳ ಕೈವಾಡವಿದೆಯೇ ಅಥವಾ ಕರ್ತವ್ಯ ಲೋಪವೆಸಗಿರುವ ಸಾಧ್ಯತೆ ಇದೆಯೇ ಎಂಬುವುದರ ಕುರಿತಾಗಿ ಪರಿಶೀಲಿಸುತ್ತದೆ. ಹೆಚ್ಚುವರಿಯಾಗಿ, ಹಿಂಸಾಚಾರ ಮತ್ತು ಗಲಭೆಗಳನ್ನು ತಡೆಗಟ್ಟಲು ತೆಗೆದುಕೊಳ್ಳಲಾದ ಆಡಳಿತಾತ್ಮಕ ಕ್ರಮಗಳ ಕುರಿತಾಗಿ ಸಮಿತಿ ಪರಿಶೀಲನೆ ಮಾಡಲಿದೆ. ಅಲ್ಲದೇ ವಿಚಾರಣೆಯಲ್ಲಿ ದಾಖಲಾದ ದೂರುಗಳು, ಸಂಘ-ಸಂಸ್ಥೆಗಳು ನೀಡಿದ ದೂರುಗಳು ಅಥವಾ ಆರೋಪಗಳನ್ನು ಸಮಿತಿ ಪರಿಗಣಿಸುತ್ತದೆ.
ಜೂನ್ 1 ರಂದು ಮಣಿಪುರಕ್ಕೆ ಭೇಟಿ ನೀಡಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಸರಣಿ ಭದ್ರತಾ ಸಭೆಗಳು ಹಾಗೂ ಕುಕಿ ಮತ್ತು ಮೈತೇಯಿ ಸಮುದಾಯಗಳ ಮುಖಂಡರ ನಡುವೆ ಸಂಧಾನ ಸಭೆಗಳನ್ನು ನಡೆಸಿದ್ದರು. ಸಭೆಗಳ ಬಳಿಕ ಸುದ್ದಿಗೋಷ್ಠಿ ನಡೆಸಿದ್ದ ಅಮಿತ್ ಶಾ, ಮಣಿಪುರದಲ್ಲಿ ಶಾಂತಿ ಮರುಸ್ಥಾಪನೆ, ಕಾನೂನು ಸುವ್ಯವಸ್ಥೆ ಪಾಲನೆ ಸರಕಾರದ ಪ್ರಮುಖ ಆದ್ಯತೆಯಾಗಿದೆ. ಜನಾಂಗೀಯ ಹಿಂಸಾಚಾರದ ಬಗ್ಗೆ ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ಸದ್ಯದಲ್ಲೇ ಸಮಿತಿ ರಚಿಸಲಾಗುವುದು ಎಂದು ಹೇಳಿದ್ದರು.
ಅಲ್ಲದೇ ರಾಜ್ಯಪಾಲರಾದ ಅನುಸೂಯ ಉಕಿ ಮತ್ತು ಭದ್ರತಾ ಸಲಹೆಗಾರ ಕುಲದೀಪ್ ಸಿಂಗ್ ಹಾಗೂ ನಾಗರಿಕರನ್ನು ಒಳಗೊಂಡ ಶಾಂತಿ ಪಾಲನಾ ಸಮಿತಿ ರಚಿಸಲಾಗುವುದು. ಹಿಂಸಾಚಾರಕ್ಕೆ ಸಂಬಂಧಿಸಿದ 6 ಪ್ರಕರಣಗಳ ತನಿಖೆಯ ಹೊಣೆಯನ್ನು ಸಿಬಿಐಗೆ ವಹಿಸಲಾಗುವುದು. ಶಾಂತಿಗೆ ಭಂಗದಂಥ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಶತಃಸಿದ್ಧ ಎಂದು ತಿಳಿಸಿದ್ದರು.
ಬಹುಸಂಖ್ಯಾತ ಮೈತೇಯಿ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ಸರಕಾರ ನಿರ್ಧಾರ ಕೈಗೊಂಡಿದ್ದನ್ನು ವಿರೋಧಿಸಿ ಕುಕಿ ಸೇರಿದಂತೆ ಕೆಲ ಬುಡಕಟ್ಟು ಸಮುದಾಯಗಳ ಸದಸ್ಯರು ನಡೆಸಿದ ಪ್ರತಿಭಟನೆ ಹಿಂಸಾಚಾರ ತಿರುಗಿದ್ದರಿಂದ ಕಳೆದ ಕೆಲವು ದಿನಗಳಲ್ಲಿ ಮಣಿಪುರ ಹೊತ್ತಿ ಉರಿದಿತ್ತು. ಹಿಂಸಾಚಾರದಲ್ಲಿ 80ಕ್ಕೂ ಹೆಚ್ಚು ಜನರು ಮೃತಪಟ್ಟಿರುವ ಅಂದಾಜಿದೆ. ಈಗಾಗಲೇ ಕೇಂದ್ರ ಸರಕಾರವು ಮೃತರ ಕುಟುಂಬಕ್ಕೆ ತಲಾ 10 ಲಕ್ಷ ರೂ ಪರಿಹಾರ ಘೋಷಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:10 pm, Sun, 4 June 23