ಬುಡಕಟ್ಟು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣ; ಮಣಿಪುರದಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ
ವಿಡಿಯೊ ಬಹಿರಂಗವಾದ ನಂತರ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಈ ಘೋರ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳ ವಿರುದ್ಧ ಮರಣದಂಡನೆಯ ಸಾಧ್ಯತೆ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಘಟನೆಯ ತನಿಖೆ ಮತ್ತು ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಹಲವಾರು ಪೊಲೀಸ್ ಘಟಕಗಳನ್ನು ತ್ವರಿತವಾಗಿ ರಚಿಸಲಾಯಿತು.
ಇಂಫಾಲ ಜುಲೈ 20: ರಾಜ್ಯದ ಜನಾಂಗೀಯ (Manipur Violence) ಘರ್ಷಣೆಗಳ ಮಧ್ಯೆ ಇಬ್ಬರು ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡುತ್ತಿರುವ ವಿಡಿಯೊ ವೈರಲ್ ಆದ ಬೆನ್ನಲ್ಲೇ ಗುರುವಾರ ಮಣಿಪುರದ (Manipur) ಚುರಾಚಂದ್‌ಪುರದ ಬೀದಿಗಳಲ್ಲಿ ಬೃಹತ್ ಪ್ರತಿಭಟನಾ ರ‍್ಯಾಲಿ (Protest Rally) ನಡೆದಿದೆ. ಒಂದು ದಿನದ ಹಿಂದೆ ಕಾಣಿಸಿಕೊಂಡ ಎರಡು ತಿಂಗಳ ಹಳೆಯ ಘಟನೆಯ ವಿಡಿಯೊದಲ್ಲಿ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಈ ಘಟನೆಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ನ್ಯಾಯಕ್ಕಾಗಿ ಜನರು ಒತ್ತಾಯಿಸಿದ್ದಾರೆ. ತೌಬಲ್ ಜಿಲ್ಲೆಯಿಂದ ಸೆರೆಹಿಡಿಯಲಾದ 26 ಸೆಕೆಂಡುಗಳ ವಿಡಿಯೊದಲ್ಲಿ ಕಾಣಿಸಿಕೊಂಡಿರುವ ಶಂಕಿತರಲ್ಲಿ ಒಬ್ಬನನ್ನು ಬಂಧಿಸಿರುವುದಾಗಿ ಮಣಿಪುರ ಪೊಲೀಸರು ಗುರುವಾರ ಹೇಳಿದ್ದಾರೆ. ಅಧಿಕಾರಿಗಳ ಪ್ರಕಾರ, ಆರೋಪಿಯು ಘಟನೆಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ನಂಬಲಾಗಿದೆ.
ವಿಡಿಯೊ ಬಹಿರಂಗವಾದ ನಂತರ, ಮುಖ್ಯಮಂತ್ರಿ ಎನ್ ಬಿರೇನ್ ಸಿಂಗ್ ಅವರು ಈ ಘೋರ ಕೃತ್ಯದಲ್ಲಿ ಭಾಗಿಯಾಗಿರುವ ಎಲ್ಲಾ ಅಪರಾಧಿಗಳ ವಿರುದ್ಧ ಮರಣದಂಡನೆಯ ಸಾಧ್ಯತೆ ಸೇರಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಸಾರ್ವಜನಿಕರಿಗೆ ಭರವಸೆ ನೀಡಿದರು. ಘಟನೆಯ ತನಿಖೆ ಮತ್ತು ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಹಲವಾರು ಪೊಲೀಸ್ ಘಟಕಗಳನ್ನು ತ್ವರಿತವಾಗಿ ರಚಿಸಲಾಯಿತು.
ತೀವ್ರವಾದ ಅವಮಾನ ಮತ್ತು ಅಮಾನವೀಯ ಕೃತ್ಯಕ್ಕೆ ಒಳಗಾದ ಇಬ್ಬರು ಮಹಿಳೆಯರಿಗಾಗಿ ನನ್ನ ಹೃದಯ ನೋಯುತ್ತಿದೆ ಎಂದು ಸಿಂಗ್ ಗುರುವಾರ ಟ್ವೀಟ್ ಮಾಡಿದ್ದಾರೆ. ಸಂಪೂರ್ಣ ತನಿಖೆ ನಡೆಯುತ್ತಿದೆ ಮತ್ತು ಸಂತ್ರಸ್ತರಿಗೆ ನ್ಯಾಯ ನೀಡುವುದಕ್ಕಾಗಿ ತಪ್ಪಿತಸ್ಥರನ್ನ ಸುಮ್ಮನೆ ಬಿಡುವುದಿಲ್ಲ ಎಂದು ಅವರು ಹೇಳಿದ್ದಾರೆ.
ಈ ಪ್ರದೇಶದಲ್ಲಿ ನಡೆಯುತ್ತಿರುವ ಜನಾಂಗೀಯ ಘರ್ಷಣೆಯ ಹಿನ್ನೆಲೆಯಲ್ಲಿ ನಡೆದ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ತೀವ್ರವಾಗಿ ಖಂಡಿಸಿದ್ದಾರೆ. ಇದುವರೆಗೆ ಕನಿಷ್ಠ 80 ಜೀವಗಳನ್ನು ಬಲಿ ಪಡೆದಿರುವ ಸಂಘರ್ಷದ ಕುರಿತು ಇದೇ ಮೊದಲ ಬಾರಿ ಮಾತನಾಡಿದ ಮೋದಿ ಇದು ನಾಚಿಕೆಗೇಡಿನ ಸಂಗತಿ ಎಂದು ಹೇಳಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮಣಿಪುರದ ಬಗ್ಗೆ ಪ್ರಧಾನಿ ಮೋದಿ ವಿಸ್ತೃತ ಹೇಳಿಕೆ ನೀಡಲಿ: ಸಂಸತ್ನಲ್ಲಿ ಮಲ್ಲಿಕಾರ್ಜುನ ಖರ್ಗೆ ಒತ್ತಾಯ
ಮ್ಯಾನ್ಮಾರ್‌ನ ಗಡಿಯಲ್ಲಿರುವ 3.2 ಮಿಲಿಯನ್ ನಿವಾಸಿಗಳ ರಾಜ್ಯವಾದ ಮಣಿಪುರದಲ್ಲಿ ಪ್ರಕ್ಷುಬ್ಧತೆಯು ಮೇ ತಿಂಗಳ ಆರಂಭದಲ್ಲಿ ಬುಡಕಟ್ಟು ಕುಕಿ ಜನರು ಅನುಭವಿಸುತ್ತಿರುವ ಆರ್ಥಿಕ ಪ್ರಯೋಜನಗಳು ಮತ್ತು ಕೋಟಾಗಳನ್ನು ಬಹುಸಂಖ್ಯಾತ ಮೈತಿ ಸಮುದಾಯಕ್ಕೆ ವಿಸ್ತರಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ ನ್ಯಾಯಾಲಯದ ಆದೇಶದ ನಂತರ ಪ್ರಾರಂಭವಾಯಿತು. ಹಿಂಸಾಚಾರವು ಆರಂಭದಲ್ಲಿ ಮೇ ಮಧ್ಯದ ವೇಳೆಗೆ ಕಡಿಮೆಯಾಯಿತು. ಆಮೇಲೆ ಮತ್ತೆ ಸಂಘರ್ಷಗಳು ಕಾಣಿಸಿಕೊಂಡಿತು. ಇದರಿಂದಾಗಿ ರಾಜ್ಯವು ಅಶಾಂತಿಯ ಸ್ಥಿತಿಯಲ್ಲಿದೆ. ಸಂಘರ್ಷದಲ್ಲಿ ನೂರಾರು ಜನರು ಗಾಯಗೊಂಡಿದ್ದು, 40,000 ಕ್ಕೂ ಹೆಚ್ಚು ಜನರು ತಮ್ಮ ಮನೆಗಳಿಂದ ಸ್ಥಳಾಂತರಗೊಂಡಿದ್ದಾರೆ.
ಏತನ್ಮಧ್ಯೆ ಸಂಸತ್ತಿನ ಅಧಿವೇಶನದಲ್ಲಿ, ಘಟನೆಯ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸಿದ ಪ್ರಧಾನಿ ಮೋದಿ, ಎಲ್ಲಾ ರಾಜ್ಯಗಳಾದ್ಯಂತ ಬಲವಾದ ಕಾನೂನು ಜಾರಿ ಕ್ರಮಗಳ ಅಗತ್ಯವನ್ನು ಒತ್ತಿ ಹೇಳಿದರು. “ಮಣಿಪುರದ ಹೆಣ್ಣುಮಕ್ಕಳಿಗೆ ಏನಾಯಿತು ಎಂಬುದನ್ನು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್ ಕೂಡ ಘಟನೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್, “ಸಾಂವಿಧಾನಿಕ ಪ್ರಜಾಪ್ರಭುತ್ವದಲ್ಲಿ ಇದು ಸ್ವೀಕಾರಾರ್ಹವಲ್ಲ” ಎಂದು ಹೇಳಿದ್ದಾರೆ. ಅಪರಾಧಿಗಳನ್ನು ಬಂಧಿಸಲು ಮತ್ತು ಇಂತಹ ಘಟನೆಗಳು ಮರುಕಳಿಸುವುದನ್ನು ತಡೆಯಲು ತೆಗೆದುಕೊಂಡ ಕ್ರಮಗಳ ಬಗ್ಗೆ ತಿಳಿಸುವಂತೆ ನ್ಯಾಯಾಲಯವು ಸರ್ಕಾರವನ್ನು ಕೇಳಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:49 pm, Thu, 20 July 23