ಮನಮೋಹನ್ ಸಿಂಗ್ ಮಾಡಿದ ಆರ್ಥಿಕ ಸುಧಾರಣೆಗಳು ಅಳಿಸಲಾಗದ ಹೆಗ್ಗುರುತಾಗಿವೆ; ಆರ್‌ಬಿಐ ಗವರ್ನರ್ ಮಲ್ಹೋತ್ರಾ

|

Updated on: Dec 28, 2024 | 12:42 PM

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತ್ಯಕ್ರಿಯೆಯನ್ನು ಇಂದು ದೆಹಲಿಯ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ನೆರವೇರಿಸಲಾಗುತ್ತಿದೆ. 92 ವರ್ಷದ ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ಏಮ್ಸ್​ನಲ್ಲಿ ನಿಧನರಾದರು. ಭಾರತದ 13ನೇ ಪ್ರಧಾನ ಮಂತ್ರಿಯಾಗಿದ್ದ ಮನಮೋಹನ್ ಸಿಂಗ್ ಮೇ 2004ರಿಂದ ಮೇ 2014ರವರೆಗೆ ಕೇಂದ್ರದಲ್ಲಿ ಯುಪಿಎ ಸರ್ಕಾರದ ನೇತೃತ್ವ ವಹಿಸಿದ್ದರು. ಭಾರತದ ಶ್ರೇಷ್ಟ ಅರ್ಥಶಾಸ್ತ್ರಜ್ಞರಾಗಿದ್ದ ಮನಮೋಹನ್ ಸಿಂಗ್ ಆರ್ಥಿಕ ವಲಯದಲ್ಲಿ ಮಾಡಿದ ಹಲವು ಸುಧಾರಣೆಗಳು ಹೆಗ್ಗುರುತನ್ನು ಮೂಡಿಸಿವೆ ಎಂದು ಆರ್​ಬಿಐ ಗವರ್ನರ್ ಮಲ್ಹೋತ್ರಾ ಶ್ಲಾಘಿಸಿದ್ದಾರೆ.

ಮನಮೋಹನ್ ಸಿಂಗ್ ಮಾಡಿದ ಆರ್ಥಿಕ ಸುಧಾರಣೆಗಳು ಅಳಿಸಲಾಗದ ಹೆಗ್ಗುರುತಾಗಿವೆ; ಆರ್‌ಬಿಐ ಗವರ್ನರ್ ಮಲ್ಹೋತ್ರಾ
Rbi Governor Malhotra And Manmohan Singh
Follow us on

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ)ನ ಹೊಸ ಗವರ್ನರ್ ಸಂಜಯ್ ಮಲ್ಹೋತ್ರಾ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಪಾರ್ಥಿವ ಶರೀರಕ್ಕೆ ಗೌರವ ಸಲ್ಲಿಸಿದರು. ಭಾರತದ ಆರ್ಥಿಕ ಸುಧಾರಣೆಗಳ ಮೇಲೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬೀರಿದ ಪ್ರಭಾವವನ್ನು ನೆನಪಿಸಿಕೊಂಡ ಮಲ್ಹೋತ್ರಾ, “ದೂರದೃಷ್ಟಿಯ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಆರ್‌ಬಿಐ ಗವರ್ನರ್ ಡಾ. ಮನಮೋಹನ್ ಸಿಂಗ್ ಅವರ ನಿಧನದಿಂದ ನಾನು ತೀವ್ರ ದುಃಖಿತನಾಗಿದ್ದೇನೆ. ಭಾರತದ ಆರ್ಥಿಕ ಸುಧಾರಣೆಗಳ ಶಿಲ್ಪಿಯಾಗಿ ಅವರ ಕೊಡುಗೆಗಳು ಅಳಿಸಲಾಗದ ಗುರುತು ಮೂಡಿಸಿವೆ” ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಡಾ. ಮನಮೋಹನ್ ಸಿಂಗ್ ಅವರು ಸೆಪ್ಟೆಂಬರ್ 16, 1982ರಿಂದ ಜನವರಿ 14, 1985ರವರೆಗೆ ಆರ್​ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರಾವಧಿಯಲ್ಲಿ ಭಾರತದ ಆರ್ಥಿಕ ಸುಧಾರಣೆ ರೂಪಿಸುವ ಹಲವಾರು ಪ್ರಮುಖ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 1982-83ರ ಸಮಯದಲ್ಲಿ ದೇಶದಲ್ಲಿ ಉಂಟಾದ ತೀವ್ರ ಬರ ಪರಿಸ್ಥಿತಿಗಳು ಕೃಷಿ ಉತ್ಪಾದನೆಗೆ ಗಂಭೀರ ಹಿನ್ನಡೆ ಮತ್ತು ಕೈಗಾರಿಕಾ ಉತ್ಪಾದನೆಯಲ್ಲಿ ಕುಸಿತಕ್ಕೆ ಕಾರಣವಾಯಿತು. ಆಗ ಮನಮೋಹನ್ ಸಿಂಗ್ ಆರ್​ಬಿಐ ಮೂಲಕ ತೆಗೆದುಕೊಂಡ ನಿರ್ಧಾರಗಳು ಬಹಳ ಮಹತ್ವದ್ದಾಗಿವೆ. ವಿತ್ತೀಯ ವ್ಯವಸ್ಥೆಯ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಪ್ರೊ. ಸುಖಮೋಯ್ ಚಕ್ರವರ್ತಿ ನೇತೃತ್ವದಲ್ಲಿ ಸಮಿತಿಯನ್ನು ಡಿಸೆಂಬರ್ 1982ರಲ್ಲಿ ಸ್ಥಾಪಿಸಲಾಯಿತು.

ಇದನ್ನೂ ಓದಿ: ಮನಮೋಹನ್ ಸಿಂಗ್ ನಿಧನದ ಬಳಿಕ ಪ್ರಮುಖ ನಿರ್ಧಾರ ತೆಗೆದುಕೊಂಡ ಸಲ್ಮಾನ್ ಖಾನ್

ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ದೆಹಲಿಯ ನಿಗಮಬೋಧ್ ಘಾಟ್ ಚಿತಾಗಾರದಲ್ಲಿ ನಡೆಸಲಾಗುತ್ತಿದೆ. ಮನಮೋಹನ್ ಸಿಂಗ್ ಅವರು ಗುರುವಾರ ರಾತ್ರಿ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್​)ನಲ್ಲಿ ನಿಧನರಾದರು. 2004ರಿಂದ 2014ರವರೆಗೆ ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿ ಯುಪಿಎ ಸರ್ಕಾರವನ್ನು ಮುನ್ನಡೆಸಿದರು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದು, ಕಾಂಗ್ರೆಸ್ ಹೀನಾಯವಾಗಿ ಸೋತ ನಂತರ ಸಾರ್ವಜನಿಕ ಜೀವನದಿಂದ ನಿವೃತ್ತರಾದ ಡಾ. ಮನಮೋಹನ್ ಸಿಂಗ್ ಆಗಸ್ಟ್ 2023ರಲ್ಲಿ ರಾಜ್ಯಸಭೆ ಸದಸ್ಯರಾಗಿ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು.


ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಂತಿಮ ಸಂಸ್ಕಾರವನ್ನು ನವದೆಹಲಿಯ ನಿಗಮಬೋಧ್ ಘಾಟ್‌ನಲ್ಲಿ ನೆರವೇರಿಸಲಾಗುತ್ತಿದೆ. ಈಗಾಗಲೇ ಅವರ ನಿವಾಸದಿಂದ ಪುಷ್ಪಾಲಂಕಾರ ಮಾಡಿದ ವಾಹನದಲ್ಲಿ ಪಾರ್ಥಿವ ಶರೀರ ಇದೀಗ ಘಾಟ್‌ಗೆ ಆಗಮಿಸಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರು ಸ್ಥಳಕ್ಕೆ ಆಗಮಿಸಿ ನಮನ ಸಲ್ಲಿಸಿದ್ದಾರೆ. ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ಜೆ.ಪಿ ನಡ್ಡಾ ಸೇರಿದಂತೆ ಕೇಂದ್ರ ಸಚಿವರು ಮತ್ತು ಬಿಜೆಪಿಯ ಹಿರಿಯ ನಾಯಕರು ಕೂಡ ಆಗಮಿಸಿ ನಮನ ಸಲ್ಲಿಸಿದ್ದಾರೆ. ಇದಕ್ಕೂ ಮುನ್ನ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ, ರಾಹುಲ್, ಪ್ರಿಯಾಂಕಾ ಗಾಂಧಿ ಸೇರಿದಂತೆ ಹಿರಿಯ ನಾಯಕರು ಮಾಜಿ ಪ್ರಧಾನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ಇದನ್ನೂ ಓದಿ: ಡಾ. ಮನಮೋಹನ್ ಸಿಂಗ್ ಅಂತ್ಯಕ್ರಿಯೆ, ಸ್ಮಾರಕ ವಿಚಾರದಲ್ಲೂ ವಿವಾದ: ಕಾರಣ ಇಲ್ಲಿದೆ ನೋಡಿ

ರಾಷ್ಟ್ರಪತಿ ದ್ರೌಪದಿ ಮುರ್ಮು ಕೂಡ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸಿದರು. ಉಪರಾಷ್ಟ್ರಪತಿ ಹಾಗೂ ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನಕರ್ ಕೂಡ ಅಂತಿಮ ನಮನ ಸಲ್ಲಿಸಿದ್ದಾರೆ. ಎಲ್ಲಾ ಕೇಂದ್ರ ಸರ್ಕಾರಿ ಕಚೇರಿಗಳು ಮತ್ತು ಸಾರ್ವಜನಿಕ ವಲಯದ ಸಂಸ್ಥೆಗಳಲ್ಲಿ ಇಂದು ಅರ್ಧ ದಿನ ರಜೆ ಇರುತ್ತದೆ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಜನವರಿ 1ರವರೆಗೆ 7 ದಿನಗಳ ಕಾಲ ರಾಜ್ಯದಲ್ಲಿ ಶೋಕಾಚರಣೆಯನ್ನೂ ಘೋಷಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ