ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಅಪಮಾನವಾಗಿದೆ: ಮನ್ ಕೀ ಬಾತ್ನಲ್ಲಿ ನರೇಂದ್ರ ಮೋದಿ ಬೇಸರ
ಜನವರಿ ತಿಂಗಳು ಭಾರತಕ್ಕೆ ಹೆಮ್ಮೆ, ಬೇಸರ ಎರಡನ್ನೂ ಹೊತ್ತು ತಂದಿದೆ ಎಂದು ಮನ್ ಕೀ ಬಾತ್ನ 73ನೇ ಸಂಚಿಕೆ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಮಾತನಾಡಿದರು.
ದೆಹಲಿ: ಜನವರಿ ತಿಂಗಳು ಭಾರತಕ್ಕೆ ಹೆಮ್ಮೆ, ಬೇಸರ ಎರಡನ್ನೂ ಹೊತ್ತು ತಂದಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಮನ್ ಕೀ ಬಾತ್ನ 73ನೇ ಸಂಚಿಕೆ ಉದ್ದೇಶಿಸಿ ಮಾತನಾಡಿದ ಅವರು, ಗಣರಾಜ್ಯೋತ್ಸವ, ಪದ್ಮ ಪುರಸ್ಕಾರ, ಆಸ್ಟ್ರೇಲಿಯಾ ನೆಲದಲ್ಲಿ ಭಾರತ ಕ್ರಿಕೆಟ್ ತಂಡದ ಐತಿಹಾಸಿಕ ಗೆಲುವು ಮತ್ತು ಟ್ರ್ಯಾಕ್ಟರ್ ಚಳುವಳಿಯ ದಿನ ನಡೆದ ಹಿಂಸಾತ್ಮಕ ಘಟನೆಗಳ ಬಗ್ಗೆ ಪ್ರಧಾನಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಹೊಸ ವರ್ಷದಲ್ಲಿ, ಮಕರ ಸಂಕ್ರಾಂತಿಯನ್ನು ಆಚರಿಸಿದ್ದೇವೆ. ಗಣರಾಜ್ಯೋತ್ಸವವನ್ನು ಕೂಡ ಆಚರಣೆ ಮಾಡಿದ್ದೇವೆ. ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರು ಪದ್ಮ ಪ್ರಶಸ್ತಿಯನ್ನ ಪಡೆದಿದ್ದಾರೆ. ಆಸ್ಪ್ರೇಲಿಯಾ ನೆಲದಲ್ಲಿ ಭಾರತೀಯರು ಕಪ್ ಗೆದ್ದಿದ್ದಾರೆ ಎಂದು ಈ ವರ್ಷದ ಮೊದಲ ಮನ್ ಕೀ ಬಾತ್ನಲ್ಲಿ ಮೋದಿ ಸಂತಸ ವ್ಯಕ್ತಪಡಿಸಿದರು. ಆದರೆ, ಜನವರಿ 26ರಂದು ಕೆಂಪುಕೋಟೆಯಲ್ಲಿ ನಡೆದ ಘಟನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಕೆಂಪುಕೋಟೆಯ ಮೇಲೆ ತ್ರಿವರ್ಣ ಧ್ವಜಕ್ಕೆ ಅಪಮಾನವಾಗಿದೆ. ತ್ರಿವರ್ಣ ಧ್ವಜಕ್ಕೆ ಅಪಮಾನ ಮಾಡಿದ್ದು ದುಃಖಕರ. ಇಡೀ ದೇಶದ ಜನರು ತಲೆತಗ್ಗಿಸುವಂಥ ಕೆಲಸವಾಗಿದೆ ಎಂದು ಮೋದಿ, ಅಂದಿನ ಘಟನೆಯನ್ನು ಖಂಡಿಸಿದರು.
ಇದನ್ನೂ ಓದಿ: ರಾಷ್ಟ್ರದ ಘನತೆಯನ್ನು ಗೌರವಿಸುತ್ತೇವೆ, ನಮ್ಮ ಸ್ವಾಭಿಮಾನವನ್ನೂ ರಕ್ಷಿಸಿಕೊಳ್ಳುತ್ತೇವೆ: ನರೇಶ್ ಟಿಕಾಯತ್ ಹೇಳಿಕೆ
ಕೊರೊನಾ ಲಸಿಕೆ ನೀಡುವಲ್ಲಿ ಭಾರತ ಐತಿಹಾಸಿಕ ಸಾಧನೆ ಮಾಡಿದೆ. ನಾವು ಜಗತ್ತಿನಲ್ಲಿಯೇ ಅತೀ ದೊಡ್ಡ ಲಸಿಕೆ ವಿತರಣೆ ಅಭಿಯಾನ ಮಾಡಿದ್ದೇವೆ. ಆ ಮೂಲಕ, ಭಾರತ ಕೊರೊನಾ ವಿರುದ್ಧ ಸಮರ ಸಾರುವಲ್ಲಿ ಯಶಸ್ವಿಯಾಗಿದೆ. ಜೊತೆಗೆ, ವಿಶ್ವದ ವಿವಿಧ ದೇಶಗಳಿಗೆ ಕೊರೊನಾ ಲಸಿಕೆ ರಫ್ತು ಮಾಡಿದ್ದೇವೆ. ಕೊರೊನಾ ಲಸಿಕೆ ನೀಡುವ ಮೂಲಕ ವಿಶ್ವಕ್ಕೆ ಮಾದರಿಯಾಗಿದ್ದೇವೆ ಎಂದು ಪ್ರಧಾನಿ ಕೊವಿಡ್-19 ವಿರುದ್ಧ ದೇಶ ಹೋರಾಡಿರುವ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದರು.
ಕೆಲವು ದಿನಗಳ ಹಿಂದೆ ಭಾರತದ ಏರ್ ಇಂಡಿಯಾ ಸಂಸ್ಥೆ, ಮಹಿಳಾ ಪೈಲೆಟ್ಗಳ ನೇತೃತ್ವದಲ್ಲಿ ಸಾನ್ ಫ್ರಾನ್ಸಿಸ್ಕೊದಿಂದ ಬೆಂಗಳೂರಿಗೆ ವಿಮಾನಯಾನ ನಡೆಸಿದೆ. ಯಾವುದೇ ಕ್ಷೇತ್ರವಾಗಿರಲಿ ಭಾರತೀಯ ಮಹಿಳೆಯರ ಸಾಧನೆ ಗಣನೀಯವಾಗಿ ಹೆಚ್ಚುತ್ತಿದೆ ಎಂದು ಪ್ರಧಾನಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡಿದರು.
ಭಾರತವು ಈ ಬಾರಿ 75ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಿದೆ. ಈ ಸಂದರ್ಭದಲ್ಲಿ ಭಾರತದ ಯುವಕರು ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಬರೆಯಬೇಕು. ಸ್ವಾತಂತ್ರ್ಯ ಚಳುವಳಿಯ ಬಗ್ಗೆ ತಿಳಿದುಕೊಳ್ಳಬೇಕು. ಅದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದವರಿಗೆ ನಾವು ನೀಡುವ ವಿಶೇಷ ಗೌರವ ಎಂದು ಮೋದಿ ಭಾರತೀಯ ಯುವ ಸಮುದಾಯಕ್ಕೆ ಕರೆ ನೀಡಿದರು.
ರಸ್ತೆ ಸುರಕ್ಷತೆಯ ಬಗ್ಗೆ ನಾವು ಜಾಗೃತರಾಗಿರೋಣ. ಹೊಸ ವರ್ಷಕ್ಕೆ ಹೊಸ ಆಲೋಚನೆಗಳೊಂದಿಗೆ ಕಾಲಿಟ್ಟಿದ್ದೇವೆ. ಪ್ರತಿಯೊಂದು ಜವಾಬ್ದಾರಿಗಳನ್ನೂ ಸಮರ್ಪಕವಾಗಿ ನಿಭಾಯಿಸಿ ಹೆಜ್ಜೆ ಇಡುವ ಮೂಲಕ ಈ ವರ್ಷವನ್ನು ಸಾರ್ಥಕಗೊಳಿಸೋಣ ಎಂದು ಪ್ರಧಾನಿ ತಿಳಿಸಿದರು.
ಕೊರೊನಾ ನಂತರ ಪ್ರಧಾನಿ ಮೋದಿ ಮೊದಲ ವಿದೇಶ ಪ್ರವಾಸ! ಅದೂ ಎಲ್ಲಿಗೆ, ಯಾವಾಗ ಗೊತ್ತಾ?
Published On - 11:54 am, Sun, 31 January 21