Mann Ki Baat: ಪ್ರಧಾನಿ ಮೋದಿಯವರ ‘ಮನ್​ ಕೀ ಬಾತ್’​ನಿಂದ 31 ಕೋಟಿ ರೂ. ಆದಾಯ; ರಾಜ್ಯಸಭೆಯಲ್ಲಿ ಮಾಹಿತಿ

| Updated By: Digi Tech Desk

Updated on: Jul 20, 2021 | 5:50 PM

ಟಿವಿ ಚಾನೆಲ್​ಗಳ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC-ಬಾರ್ಕ್)ಯ ಡಾಟಾ ಅನ್ವಯ, ಮನ್​ ಕೀ ಬಾತ್​ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ 2018-2020ರ ಅವಧಿಯಲ್ಲಿ ಅಂದಾಜು 6 ಕೋಟಿಯಿಂದ 14.35 ಕೋಟಿಗೆ ಏರಿಕೆಯಾಗಿದೆ.

Mann Ki Baat: ಪ್ರಧಾನಿ ಮೋದಿಯವರ ‘ಮನ್​ ಕೀ ಬಾತ್’​ನಿಂದ 31 ಕೋಟಿ ರೂ. ಆದಾಯ; ರಾಜ್ಯಸಭೆಯಲ್ಲಿ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ
Follow us on

2014ರಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi)ಯವರ ಮನ್​ ಕೀ ಬಾತ್​ (Mann Ki Baat) ಶುರುವಾದಾಗಿನಿಂದ ಇಲ್ಲಿಯವರೆಗೆ ಸುಮಾರು 31 ಕೋಟಿ ರೂಪಾಯಿ (30,80,91,225)ಆದಾಯ ಗಳಿಸಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ಮಾಹಿತಿ ನೀಡಿದೆ. ಹಾಗೇ, ಈ ಕಾರ್ಯಕ್ರಮಕ್ಕಾಗಿ ರಾಷ್ಟ್ರೀಯ ಪ್ರಸಾರಕರು ಹೆಚ್ಚುವರಿ ಖರ್ಚು ಮಾಡಿಲ್ಲ, ಬದಲಾಗಿ ಆಂತರಿಕ ಸಂಪನ್ಮೂಲಗಳ ಸದುಪಯೋಗಪಡಿಸಿಕೊಂಡು ಮನ್​ ಕೀ ಬಾತ್​ ನಿರ್ಮಾಣ ಮಾಡಲಾಗಿದೆ ಎಂದೂ ಹೇಳಿದೆ.

ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್​ ಸಿಂಗ್ ಠಾಕೂರ್​, ಪ್ರಧಾನಿ ನರೇಂದ್ರ ಮೋದಿಯವರ ಮನ್​ ಕೀ ಬಾತ್​ ದೂರದರ್ಶನ್​ ಮತ್ತು ಆಲ್​ ಇಂಡಿಯಾ ರೇಡಿಯೋದ ಹಲವು ಚಾನಲ್​ಗಳಲ್ಲಿ ಪ್ರಸಾರವಾಗುತ್ತದೆ. 2014ರಿಂದ ಇಲ್ಲಿಯವರೆಗೆ ಪ್ರಸಾರ್ ಭಾರತಿ ತನ್ನ ಆಲ್​ ಇಂಡಿಯಾ ರೇಡಿಯೋ, ದೂರದರ್ಶನ ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ಮೂಲಕ ಒಟ್ಟು 78 ಆವೃತ್ತಿಗಳನ್ನು ಪ್ರಸಾರ ಮಾಡಿದೆ. ಈಗಂತೂ 23 ಭಾಷೆ, 29 ಉಪಭಾಷೆಗಳಲ್ಲೂ ಮನ್​ ಕೀ ಬಾತ್​ ಪ್ರಸಾರವಾಗುತ್ತಿದೆ ಎಂದು ತಿಳಿಸಿದರು.

ಪ್ರಸಾರ ಭಾರತಿ ತನ್ನ ಹಿಂದಿ ಮತ್ತು ವಿವಿಧ ಭಾಷೆಗಳ ಡಿಡಿ ಚಾನೆಲ್​ಗಳ ಮೂಲಕ ಮನ್​ ಕೀ ಬಾತ್​ನ ದೃಶ್ಯೀಕೃತ ಆವೃತ್ತಿಗಳನ್ನೂ ಪ್ರಸಾರ ಮಾಡುತ್ತಿದೆ. ಆಲ್​ ಇಂಡಿಯಾ ರೇಡಿಯೋ ಮತ್ತು ದೂರದರ್ಶನಗಳ ಹೊರತಾಗಿಯೂ ಈ ಕಾರ್ಯಕ್ರಮವನ್ನು ದೇಶದಲ್ಲಿ ಸುಮಾರು 91 ಖಾಸಗಿ ಸೆಟಲೈಟ್​ ಟಿವಿ ಚಾನಲ್​ಗಳು, ಕೇಬಲ್​, ಡಿಟಿಎಚ್​ ಪ್ಲ್ಯಾಟ್​ಫಾರಂಗಳು ಪ್ರಸಾರ ಮಾಡುತ್ತಿವೆ. ಅದರೊಂದಿಗೆ iOS, ಆ್ಯಂಡ್ರಾಯ್ಡ್ ಮೊಬೈಲ್​ ಬಳಕೆದಾರರು ನ್ಯೂಸ್ ಆನ್​ ಏರ್​ ಮೂಲಕ ಅಥವಾ ಪ್ರಸಾರ ಭಾರತಿಯ ಯೂಟ್ಯೂಬ್​ ಚಾನಲ್​ಗಳ ಮೂಲಕ ಮನ್​ ಕೀ ಬಾತ್ ಕೇಳುತ್ತಿದ್ದಾರೆ ಎಂದು ಅನುರಾಗ್​ ಠಾಕೂರ್​ ಮಾಹಿತಿ ನೀಡಿದರು.

ಟಿವಿ ಚಾನೆಲ್​ಗಳ ಪ್ರಸಾರ ಪ್ರೇಕ್ಷಕರ ಸಂಶೋಧನಾ ಮಂಡಳಿ (BARC-ಬಾರ್ಕ್)ಯ ಡಾಟಾ ಅನ್ವಯ, ಮನ್​ ಕೀ ಬಾತ್​ ಕಾರ್ಯಕ್ರಮದ ವೀಕ್ಷಕರ ಸಂಖ್ಯೆ 2018-2020ರ ಅವಧಿಯಲ್ಲಿ ಅಂದಾಜು 6 ಕೋಟಿಯಿಂದ 14.35 ಕೋಟಿಗೆ ಏರಿಕೆಯಾಗಿದೆ. ಮನ್​ ಕೀ ಬಾತ್​ ಮೂಲಕ ಪ್ರಧಾನಿ ನರೇಂದ್ರ ಮೋದಿಯವರು ದೇಶದ ವಿವಿಧ ಸಮುದಾಯವನ್ನು ತಲುಪುತ್ತಿದ್ದಾರೆ. ಪೂರ್ತಿಯಾಗಿ ರಾಜಕೀಯ ಹೊರತಾಗಿಯೇ ಮಾತನಾಡುತ್ತಾರೆ. ಸಾಧಕರನ್ನು ಹೊಗಳುತ್ತಾರೆ. ಅದೆಷ್ಟೋ ರಾಜ್ಯಗಳ ಕುಗ್ರಾಮಗಳ ಸಾಧಕರನ್ನೂ ಅವರು ಈ ಮನ್​ ಕೀ ಬಾತ್​ನಲ್ಲಿ ಉಲ್ಲೇಖಿಸಿದ್ದುಂಟು. ಒಟ್ಟಾರೆ ಪ್ರತಿತಿಂಗಳ ಕೊನೆಯಲ್ಲಿ ನಡೆಯುವ ಈ ಮನ್​ ಕೀ ಬಾತ್​ಗೆ ಅಪಾರ ಶ್ರೋತೃಗಳು ಇರುವುದು ಸುಳ್ಳಲ್ಲ.

ಇದನ್ನೂ ಓದಿ: 100 ಕೋಟಿಗೂ ಹೆಚ್ಚು ಅನುದಾನದ ಕಾರ್ಯಕ್ರಮಗಳ ಕಡ್ಡಾಯ ಮೌಲ್ಯಮಾಪನಕ್ಕೆ ಯಡಿಯೂರಪ್ಪ ಸೂಚನೆ 

Mann Ki Baat Radio Programme Generated Rs 31 Crore Revenue informed in Rajyasabha

 

Published On - 3:50 pm, Tue, 20 July 21