AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಳ್ಳಿಗಳ ನಾಡಿಮಿಡಿತ ಅರಿತ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಜನ್ಮದಿನ ಇಂದು

Happy Birthday Mansukh Mandaviya; ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಮನ್​ಸುಖ್ ಮಾಂಡವೀಯ ಕೊಡುಗೆಯನ್ನು ಗೌರವಿಸಿ ಯುನಿಸೆಫ್ ಪುರಸ್ಕಾರ ನೀಡಿದೆ.

ಹಳ್ಳಿಗಳ ನಾಡಿಮಿಡಿತ ಅರಿತ ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ ಜನ್ಮದಿನ ಇಂದು
ಕೇಂದ್ರ ಆರೋಗ್ಯ ಸಚಿವ ಮನ್​ಸುಖ್ ಮಾಂಡವೀಯ
TV9 Web
| Edited By: |

Updated on:Jun 01, 2022 | 11:31 AM

Share

ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ರಾಸಾಯನಿಕ, ರಸಗೊಬ್ಬರ ಇಲಾಖೆ ಸಚಿವರಾದ ಮನ್​ಸುಖ್ ಮಾಂಡವೀಯ (Mansukh Mandaviya) ಅವರ ಜನ್ಮದಿನ ಇಂದು. ಜೂನ್ 1, 1972ರಂದು ಜನಿಸಿದ ಮಾಂಡವೀಯ ಬಿಜೆಪಿ ಪ್ರಮುಖ ನಾಯಕರಾಗಿ, ಉತ್ತಮ ಆಡಳಿತಗಾರನಾಗಿ ಪ್ರವರ್ಧಮಾನಕ್ಕೆ ಬಂದವರು. ಗುಜರಾತ್​ನಿಂದ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಗುಜರಾತ್​ನ ಭಾವ್​ನಗರ ಜಿಲ್ಲೆಯ ಹನೋಲ್ ಎನ್ನುವ ಸಣ್ಣ ಹಳ್ಳಿಯಲ್ಲಿ ಮಧ್ಯವರ್ಗದ ರೈತ ಕುಟುಂಬದಲ್ಲಿ 1972ರಲ್ಲಿ ಮಾಂಡವೀಯ ಜನಿಸಿದರು. ಹನೋಲ್​ನ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಸೊಂಗಧ್ ಗುರುಕುಲದಲ್ಲಿ ಪ್ರೌಢಶಾಲೆಯ ವಿದ್ಯಾಭ್ಯಾಸ ಮುಗಿಸಿದರು. ಪಶುವಿಜ್ಞಾನದಲ್ಲಿ ಸರ್ಟಿಫಿಕೇಟ್ ಕೋರ್ಸ್ ಮಾಡಿದ ನಂತರ ಭಾವ್​ನಗರ್ ವಿಶ್ವವಿದ್ಯಾಲಯದಿಂದ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.

2002-2007ರ ಅವಧಿಯಲ್ಲಿ ಗುಜರಾತ್ ವಿಧಾನಸಭೆ ಸದಸ್ಯರಾಗಿದ್ದರು. 2012ರಲ್ಲಿ ರಾಜ್ಯಸಭೆ ಸದಸ್ಯರಾದರು. 2013ರಲ್ಲಿ ಬಿಜೆಪಿ ಗುಜರಾತ್ ರಾಜ್ಯ ಘಟಕದ ಕಾರ್ಯದರ್ಶಿಯಾದರು. 2015ರಲ್ಲಿ ಬಿಜೆಪಿಯ ಅತ್ಯಂತ ಕಿರಿಯ ಪ್ರಧಾನ ಕಾರ್ಯದರ್ಶಿ ಎಂಬ ಶ್ರೇಯಕ್ಕೆ ಭಾಜನರಾದರು. 2016-19ರ ಅವಧಿಯಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ, ಜಲಸರಿಗೆ ಮತ್ತು ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಗಳ (ರಾಜ್ಯ ದರ್ಜೆ) ಸಚಿವರಾಗಿ ಸೇವೆ ಸಲ್ಲಿಸಿದರು. 2018ರಲ್ಲಿ ರಾಜ್ಯಸಭೆಗೆ ಮತ್ತೆ ಆಯ್ಕೆಯಾದ ನಂತರವೂ ವಿವಿಧ ಇಲಾಖೆಗಳ ರಾಜ್ಯದರ್ಜೆ (ಸ್ವತಂತ್ರ) ಸಚಿವರಾಗಿದ್ದರು. 2021ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರ ಸಚಿವ ಸಂಪುಟ ಪುನರ್​ರಚನೆ ಮಾಡಿದಾಗ ಮನ್​ಸುಖ್ ಮಾಂಡವೀಯ ಅವರಿಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ರಾಸಾಯನಿಕ ಹಾಗೂ ರಸಗೊಬ್ಬರ ಇಲಾಖೆಯ ಹೊಣೆ ನೀಡಲಾಯಿತು.

ರಾಜಕೀಯ ಹೆಜ್ಜೆ ಗುರುತು

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಸದಸ್ಯರಾಗಿ ಸಾರ್ವಜನಿಕ ಜೀವನ ಆರಂಭಿಸಿದ ಮನ್​ಸುಖ್ ಮಾಂಡವೀಯ, ಬಿಜೆಪಿ ಯುವ ಮೋರ್ಚಾ ಮತ್ತು ಬಿಜೆಪಿ ಪಲಿತಾನಾ ತಾಲ್ಲೂಕು ಘಟಕದ ಅಧ್ಯಕ್ಷರಾದರು. 2002ರಲ್ಲಿ ಮೊದಲ ಬಾರಿಗೆ ಗುಜರಾತ್ ವಿಧಾನಸಭೆಗೆ ಆಯ್ಕೆಯಾದ ಮನ್​ಸುಖ್ ಮಾಂಡವೀಯ, ವಿಧಾನಸಭೆಯ ಅತ್ಯಂತ ಕಿರಿಯ ಸದಸ್ಯರಾಗಿದ್ದರು. 2010ರಲ್ಲಿ ಗುಜರಾತ್ ಆಗ್ರೋ ಇಂಡಸ್ಟ್ರೀಸ್ ಕಾರ್ಪೊರೇಷನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು.

ತಮ್ಮ 38ನೇ ವಯಸ್ಸಿನಲ್ಲಿ ಮೊದಲ ಬಾರಿಗೆ ಗುಜರಾತ್​ನಿಂದ ರಾಜ್ಯಸಭೆಗೆ ಆಯ್ಕೆಯಾದರು. ಬಿಜೆಪಿಯ ಗುಜರಾತ್ ಘಟಕದ ಕಾರ್ಯದರ್ಶಿಯಾಗಿ 2013ರಲ್ಲಿ, ರಾಷ್ಟ್ರೀಯ ಕಾರ್ಯದರ್ಶಿಯಾಗಿ 2014ರಲ್ಲಿ ನೇಮಿಸಲಾಯಿತು. ಬಿಜೆಪಿ ಆಯೋಜಿಸಿದ್ದ ಹೈಟೆಕ್ ಸದಸ್ಯತ್ವ ನೋಂದಣಿ ಕಾರ್ಯಕ್ರಮದ ಉಸ್ತುವಾರಿಯಾಗಿಯೂ ಮನ್​ಸುಖ್ ಮಾಂಡವೀಯ ಸೇವೆ ಸಲ್ಲಿಸಿದ್ದರು.

ಪ್ರಸ್ತುತ ಕೇಂದ್ರ ಅರೋಗ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿರುವ ಮನ್​ಸುಖ್ ಮಾಂಡವೀಯ ಕೊವಿಡ್​ನಿಂದ ಕಲಿತ ಪಾಠಗಳನ್ನು ಪರಿಶೀಲಿಸಿ, ಆರೋಗ್ಯ ಇಲಾಖೆ ಮತ್ತು ಆರೋಗ್ಯ ವ್ಯವಸ್ಥೆಯನ್ನು ಸುಸ್ಥಿತಿಯಲ್ಲಿಡಲು ಶ್ರಮಿಸುತ್ತಿದ್ದಾರೆ. ಮಹಿಳೆಯರ ಆರೋಗ್ಯ ಮತ್ತು ನೈರ್ಮಲ್ಯಕ್ಕೆ ಇವರ ಕೊಡುಗೆಯನ್ನು ಗೌರವಿಸಿ ಯುನಿಸೆಫ್ ಪುರಸ್ಕಾರ ನೀಡಿದೆ. 10 ಕೋಟಿ ಸ್ಯಾನಿಟರಿ ಪ್ಯಾಡ್​ಗಳನ್ನು ಪ್ರಧಾನಮಂತ್ರಿ ಜನೌಷಧ ಕೇಂದ್ರಗಳಿಂದ ವಿತರಿಸಲು ಮನ್​ಸುಖ್ ಮಾಂಡವೀಯ ಕ್ರಮ ಕೈಗೊಂಡಿದ್ದರು. ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಮತ್ತು ಪರಿಸರ ಜಾಗೃತಿ ಮೂಡಿಸಲು ಎರಡು ಬಾರಿ ಪಾದಯಾತ್ರೆ ಮಾಡಿದ್ದರು.

ವೈಯಕ್ತಿಕ ಬದುಕು

ಮನ್​ಸುಖ್ ಮಾಂಡವೀಯ ಅವರ ಪತ್ನಿ ನೀತಾಬೆನ್ ಮಾಂಡವೀಯ. ಈ ದಂಪತಿಗೆ ಪವನ್ ಮತ್ತು ದಿಶಾ ಹೆಸರಿನ ಮಕ್ಕಳಿದ್ದಾರೆ.

ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ. ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಪ್ರಮುಖ  ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:31 am, Wed, 1 June 22