AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆಯಾದ ಪುರುಷ ಲಿವ್-ಇನ್ ಸಂಬಂಧ ಇಟ್ಟುಕೊಳ್ಳುವುದು ಅಪರಾಧವಲ್ಲ; ಹೈಕೋರ್ಟ್ ತೀರ್ಪು

ವಯಸ್ಕ ಮಹಿಳೆಯೊಂದಿಗೆ ಸಮ್ಮತಿಯ, ಲಿವ್-ಇನ್ ಸಂಬಂಧವನ್ನು ಇಟ್ಟುಕೊಂಡಿದ್ದಕ್ಕಾಗಿ ವಿವಾಹಿತ ಪುರುಷನ ವಿರುದ್ಧ ಕೇಸ್ ದಾಖಲಿಸಲು ಸಾಧ್ಯವಿಲ್ಲ ಎಂದು ಉತ್ತರ ಪ್ರದೇಶದ ಶಹಜಹಾನ್‌ಪುರದ ಲಿವ್-ಇನ್ ದಂಪತಿ ಸಲ್ಲಿಸಿದ ಕ್ರಿಮಿನಲ್ ರಿಟ್ ಅರ್ಜಿಯ ವಿಚಾರಣೆ ವೇಳೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ತಮ್ಮ ವಿರುದ್ಧ ದಾಖಲಿಸಿದ ಪೊಲೀಸ್ ಪ್ರಕರಣವನ್ನು ರದ್ದುಗೊಳಿಸುವಂತೆ ದಂಪತಿ ಕೋರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ.

ಮದುವೆಯಾದ ಪುರುಷ ಲಿವ್-ಇನ್ ಸಂಬಂಧ ಇಟ್ಟುಕೊಳ್ಳುವುದು ಅಪರಾಧವಲ್ಲ; ಹೈಕೋರ್ಟ್ ತೀರ್ಪು
Live-In RelationshipImage Credit source: iStock
ಸುಷ್ಮಾ ಚಕ್ರೆ
|

Updated on:Mar 27, 2026 | 4:31 PM

Share

ಅಲಹಾಬಾದ್, ಮಾರ್ಚ್ 27: ವಿವಾಹಿತ ಪುರುಷ ಮಹಿಳೆಯೊಂದಿಗೆ ಲಿವ್-ಇನ್ ಸಂಬಂಧದಲ್ಲಿರುವುದು ಕಾನೂನಿನ ಅಡಿಯಲ್ಲಿ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ (Allahabad High Court) ಹೇಳಿದೆ. ಆತನಿಗೆ ಮದುವೆಯಾಗಿದೆ ಎಂಬ ವಿಷಯ ತಿಳಿದಿದ್ದರೂ ಮಹಿಳೆ ಆತನೊಂದಿಗೆ ಲಿವ್-ಇನ್ ರಿಲೇಷನ್​ಶಿಪ್​ನಲ್ಲಿದ್ದರೆ ಅದು ತಪ್ಪಲ್ಲ ಎಂದು ಕೋರ್ಟ್ ಹೇಳಿದೆ. ಆ ಮಹಿಳೆಯ ಕುಟುಂಬದಿಂದಲೇ ಬೆದರಿಕೆ ಎದುರಿಸುತ್ತಿರುವ ಲಿವ್-ಇನ್ ದಂಪತಿಗೆ ರಕ್ಷಣೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಪ್ರಕರಣವನ್ನು ಆಲಿಸಿದ ನ್ಯಾಯಾಲಯ ವಿವಾಹಿತ ಪುರುಷನು ಪರಸ್ಪರ ಒಪ್ಪಿಗೆಯ ಮೂಲಕ ವಯಸ್ಕ ಮಹಿಳೆಯ ಜೊತೆ ಒಟ್ಟಿಗೆ ವಾಸಿಸುವುದು ಯಾವುದೇ ಅಪರಾಧವಲ್ಲ ಎಂದು ಹೇಳಿದೆ.

“ವಿವಾಹಿತ ಪುರುಷನು ಮಹಿಳೆಯ ಒಪ್ಪಿಗೆಯ ಮೂಲಕ ಲಿವ್-ಇನ್ ಸಂಬಂಧದಲ್ಲಿ ವಾಸಿಸುವುದು ಮೊಕದ್ದಮೆ ಹೂಡಬಹುದಾದ ಯಾವುದೇ ಅಪರಾಧವಲ್ಲ. ನೈತಿಕತೆ ಮತ್ತು ಕಾನೂನನ್ನು ದೂರವಿಡಬೇಕು. ಹಾಗಂತ ಕಾನೂನಿನಡಿ ಅದು ಅಪರಾಧವಲ್ಲ ಎಂಬ ಮಾತ್ರಕ್ಕೆ ಸಾಮಾಜಿಕವಾಗಿಯೂ ಅದು ಸರಿ ಎಂದು ಹೇಳಲಾಗದು” ಎಂದು ನ್ಯಾಯಪೀಠ ಹೇಳಿದೆ.

ಇದನ್ನೂ ಓದಿ: ನಾಲ್ಕನೇ ಪತ್ನಿಗೆ 30,000 ರೂ. ಜೀವನಾಂಶ ನೀಡುವಂತೆ ಎಸ್‌ಪಿ ಸಂಸದ ನದ್ವಿಗೆ ಅಲಹಾಬಾದ್ ಹೈಕೋರ್ಟ್ ಆದೇಶ

ನ್ಯಾಯಾಲಯವು ‘ನೈತಿಕತೆ’ ಮತ್ತು ಕಾನೂನನ್ನು ಬೇರ್ಪಡಿಸಿ ನೋಡಬೇಕೆಂದು ಹೇಳಿದೆ. ಲಿವ್-ಇನ್ ರಿಲೇಷನ್​​ಶಿಪ್​ನಲ್ಲಿರುವ ವಿವಾಹಿತ ವ್ಯಕ್ತಿ ಯಾವುದೇ ಅಪರಾಧವನ್ನು ಮಾಡಿಲ್ಲ. ವಯಸ್ಕ ಮಹಿಳೆಯೊಂದಿಗಿನ ಅವರ ಲಿವ್-ಇನ್ ಸಂಬಂಧವು ಸಮ್ಮತಿಯಂತೆ ಕಾಣುತ್ತದೆ ಎಂದು ಕೋರ್ಟ್ ಹೇಳಿದೆ.

ಹಾಗೇ, ನ್ಯಾಯಾಲಯವು ಪೊಲೀಸರಿಗೆ ಅರ್ಜಿದಾರ ದಂಪತಿಯನ್ನು ಬಂಧಿಸದಂತೆ ನಿರ್ದೇಶಿಸಿತು. ಮಹಿಳಾ ಅರ್ಜಿದಾರರ ಕುಟುಂಬದ ಎಲ್ಲಾ ಸದಸ್ಯರು ದಂಪತಿಗೆ ಯಾವುದೇ ಹಾನಿ ಮಾಡದಂತೆ ಸೂಚಿಸಿತು. ಹಾಗೇ, ಅವರಿಬ್ಬರ ಕುಟುಂಬದ ಸದಸ್ಯರು ಅವರಿಬ್ಬರೂ ವಾಸಿಸುವ ಮನೆಗೆ ಪ್ರವೇಶಿಸುವಂತಿಲ್ಲ ಅಥವಾ ಅವರನ್ನು ನೇರವಾಗಿ, ಮೊಬೈಲ್ ಮೂಲಕ ಅಥವಾ ಮೂರನೇ ವ್ಯಕ್ತಿಯ ಮೂಲಕ ಸಂಪರ್ಕಿಸಲು ಪ್ರಯತ್ನಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರ ಸುರಕ್ಷತೆ ಮತ್ತು ಭದ್ರತೆಗೆ ಸ್ಥಳೀಯ ಪೊಲೀಸ್ ಮುಖ್ಯಸ್ಥರು ವೈಯಕ್ತಿಕವಾಗಿ ಜವಾಬ್ದಾರರಾಗಿರಬೇಕು ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಲಿವ್-ಇನ್ ರಿಲೇಶನ್​ಶಿಪ್ ಭಾರತೀಯ ಮಧ್ಯಮ ವರ್ಗದ ಮೌಲ್ಯಗಳಿಗೆ ವಿರುದ್ಧವಾಗಿದೆ: ಅಲಹಾಬಾದ್ ಹೈಕೋರ್ಟ್

ಏನಿದು ಘಟನೆ?:

ಈಗಾಗಲೇ ಮದುವೆಯಾಗಿರುವ ನೇತ್ರಪಾಲ್ ಎಂಬ ವ್ಯಕ್ತಿ ಅನಾಮಿಕಾ ಜೊತೆ ಲಿವ್-ಇನ್ ಸಂಬಂಧದಲ್ಲಿದ್ದರು. ಜನವರಿ 8ರಂದು ಅನಾಮಿಕಾ ಅವರ ತಾಯಿ ಕಾಂತಿ ಶಹಜಹಾನ್‌ಪುರದ ಜೈತಿಪುರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದರು. ನೇತ್ರಪಾಲ್ ನಮಗೆ ನಮ್ಮ ಮಗಳನ್ನು ಬಿಡುತ್ತಿಲ್ಲ. ಮದುವೆಯಾಗಿದ್ದರೂ ಆಕೆಯನ್ನು ಮರುಳು ಮಾಡಿ ಆಕೆಯೊಂದಿಗೆ ವಾಸವಾಗಿದ್ದಾನೆ ಎಂದು ಅವರು ಆರೋಪಿಸಿದ್ದರು. ಅನಾಮಿಕಾ ಕೇವಲ 18 ವರ್ಷದವಳಾಗಿದ್ದು, ಆಕೆ ವಿವಾಹಿತನೊಂದಿಗೆ ಸಂಬಂಧದಲ್ಲಿರುವುದು ತಮಗೆ ಇಷ್ಟವಿಲ್ಲ ಎಂದು ಆಕೆಯ ತಾಯಿ ದೂರಿನಲ್ಲಿ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ ಅನಾಮಿಕಾ ಮತ್ತು ನೇತ್ರಪಾಲ್ ಅಲಹಾಬಾದ್ ಹೈಕೋರ್ಟ್‌ನಲ್ಲಿ ಆ ಪ್ರಕರಣವನ್ನು ಪ್ರಶ್ನಿಸಿ, ಅದನ್ನು ರದ್ದುಗೊಳಿಸುವಂತೆ ಕೋರಿ ನ್ಯಾಯಾಲಯದಿಂದ ರಕ್ಷಣೆ ಕೋರಿದ್ದರು. ನನಗೆ 18ಕ್ಕಿಂತ ಜಾಸ್ತಿ ವಯಸ್ಸಾಗಿದೆ. ನಮ್ಮ ಕುಟುಂಬದಿಂದ ಮರ್ಯಾದಾ ಹತ್ಯೆಯ ಭಯ ಎದುರಾಗಿದೆ. ಅವರಿಂದ ನಮಗೆ ರಕ್ಷಣೆ ಬೇಕೆಂದು ಅನಾಮಿಕಾ ಕೋರಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:30 pm, Fri, 27 March 26

Follow Us