ದೆಹಲಿ ಫೆಬ್ರುವರಿ 20: ಚಂಡೀಗಢ ಮೇಯರ್ ಚುನಾವಣೆಯಲ್ಲಿ (Chandigarh mayoral election) ಬಿಜೆಪಿ ಗೆಲುವನ್ನು ರದ್ದುಗೊಳಿಸಿ ಎಎಪಿಯ ಕುಲದೀಪ್ ಕುಮಾರ್ ಅವರನ್ನು ಮೇಯರ್ ಆಗಿ ಘೋಷಿಸಿದ ಸುಪ್ರೀಂಕೋರ್ಟ್ (Supreme Court) ತೀರ್ಪಿನ ನಂತರ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ (Rahul Gandhi) ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. “ಪ್ರಜಾಪ್ರಭುತ್ವವನ್ನು ಕೊಲೆ ಮಾಡುವ ಬಿಜೆಪಿಯ ಪಿತೂರಿಯಲ್ಲಿ ಮಸಿಹ್ ಕೇವಲ ಒಂದು ದಾಳ. ಅದರ ಹಿಂದಿನ ಮುಖ ಮೋದಿಯೇ ಎಂದು ರಾಹುಲ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ. ಸುಪ್ರೀಂ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ಚುನಾವಣೆಯಲ್ಲಿ ಕೊಳಕು ತಂತ್ರಗಳನ್ನು ಅನುಸರಿಸಿದ ನಿರಂಕುಶಾಧಿಕಾರ ಬಿಜೆಪಿಯ ಕೋರೆಹಲ್ಲುಗಳಿಂದ ಸುಪ್ರೀಂ ಕೋರ್ಟ್ ಪ್ರಜಾಪ್ರಭುತ್ವವನ್ನು ಉಳಿಸಿದೆ. ಚಂಡೀಗಢ ಮೇಯರ್ ಚುನಾವಣೆಯ ಸಾಂಸ್ಥಿಕ ವಿಧ್ವಂಸಕತೆಯು ಪ್ರಜಾಪ್ರಭುತ್ವವನ್ನು ತುಳಿಯುವ ಮೋದಿ-ಶಾ ಅವರ ವಂಚನೆಯ ಪಿತೂರಿಯ ಮಂಜುಗಡ್ಡೆಯ ಒಂದು ತುದಿ ಮಾತ್ರ ಎಂದು ಹೇಳಿದ್ದಾರೆ.
“ಎಲ್ಲ ಭಾರತೀಯರು ನಮ್ಮ ಸಂವಿಧಾನದ ಮೇಲಿನ ಈ ದಾಳಿಯನ್ನು ಸಾಮೂಹಿಕವಾಗಿ ಹೋರಾಡಬೇಕು. ಎಂದಿಗೂ ಮರೆಯಬಾರದು. 2024 ರ ಲೋಕಸಭಾ ಚುನಾವಣೆಯಲ್ಲಿ ನಮ್ಮ ಪ್ರಜಾಪ್ರಭುತ್ವವು ಕವಲುದಾರಿಯಲ್ಲಿರುತ್ತದೆ ಎಂದು ಕಾಂಗ್ರೆಸ್ ಮುಖ್ಯಸ್ಥರು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
लोकतंत्र की हत्या की भाजपाई साजिश में मसीह सिर्फ ‘मोहरा’ है, पीछे मोदी का ‘चेहरा’ है।
— Rahul Gandhi (@RahulGandhi) February 20, 2024
ಜನವರಿ 30 ರಂದು ಚಂಡೀಗಢದ ಮೇಯರ್ ಚುನಾವಣೆಯನ್ನು ಸುಪ್ರೀಂಕೋರ್ಟ್ ರದ್ದುಗೊಳಿಸಿ ಆಮ್ ಆದ್ಮಿ ಪಕ್ಷದ (ಎಎಪಿ) ಅಭ್ಯರ್ಥಿ ಕುಲದೀಪ್ ಕುಮಾರ್ ಅವರನ್ನು ವಿಜಯಿ ಎಂದು ಘೋಷಿಸಿದ ನಂತರ ರಾಹುಲ್ ಗಾಂಧಿ ಮೋದಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಮೇಯರ್ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿದ್ದವು.
“ಚುನಾವಣಾ ಅಧಿಕಾರಿ ಅನಿಲ್ ಮಸಿಹ್ ಅವರು ಘೋಷಿಸಿದ ಚುನಾವಣಾ ಫಲಿತಾಂಶವನ್ನು ರದ್ದು ಮಾಡುವಂತೆ ನಾವು ಆದೇಶಿಸುತ್ತೇವೆ. ಅರ್ಜಿದಾರರನ್ನು (ಕುಲದೀಪ್ ಕುಮಾರ್) ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್‌ನ ಮೇಯರ್ ಆಗಿ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಲಾಗುವುದು” ಎಂದು . ಭಾರತದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ಹೇಳಿದೆ.
ಜನವರಿ 30 ರಂದು ನಡೆದ ಚುನಾವಣೆಯ ನಡವಳಿಕೆಯಲ್ಲಿ ಗಂಭೀರ ದೋಷಗಳನ್ನು ಕಂಡುಹಿಡಿದ ನಂತರ ಚುನಾವಣಾಧಿಕಾರಿ ಅನಿಲ್ ಮಸಿಹ್ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ. ಎಂಟು ಮತಪತ್ರಗಳನ್ನು ತಿರುಚಲು ಮಸಿಹ್ ಉದ್ದೇಶಪೂರ್ವಕ ಪ್ರಯತ್ನ ನಡೆಸಿರುವುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ.
ಇದನ್ನೂ ಓದಿ: ಚಂಡೀಗಢ ಚುನಾವಣಾ ಅಧಿಕಾರಿ ಅನಿಲ್ ಮಸಿಹ್ಗೆ ನೋಟಿಸ್ ನೀಡುವಂತೆ ಸುಪ್ರೀಂ ಆದೇಶ
ಬಿಜೆಪಿಯ ಮನೋಜ್ ಸೋಂಕರ್ ಅವರು ಮೇಯರ್ ಚುನಾವಣೆಯಲ್ಲಿ ಎಎಪಿ-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿ ಗೆಲುವು ಸಾಧಿಸಿದ್ದರು. ಚುನಾವಣಾಧಿಕಾರಿಯು ಸಮ್ಮಿಶ್ರ ಪಾಲುದಾರರ ಎಂಟು ಮತಗಳನ್ನು ಅಸಿಂಧು ಎಂದು ಘೋಷಿಸಿದ್ದು, ಮತಪತ್ರಗಳನ್ನು ತಿರುಚಲಾಗಿದೆ ಎಂದು ಎಎಪಿ ಆರೋಪ ಮಾಡಿತ್ತು.
ಮತ್ತಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ