
ನವದೆಹಲಿ, ಮೇ 8: ಭಾರತೀಯ ಸೇನೆ ನಡೆಸಿದ ಆಪರೇಷನ್ ಸಿಂದೂರ್‌ನಲ್ಲಿ (Operation Sindoor) ಕುಟುಂಬದವರು ಹಾಗೂ ಸಂಬಂಧಿಕರು ಮೃತಪಟ್ಟಿರುವುದಾಗಿ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ (Jaish-e-Mohammad) ಮುಖ್ಯಸ್ಥ ಮೌಲಾನಾ ಮಸೂದ್ ಅಜರ್ (Masood Azhar) ಹೇಳಿಕೊಂಡಿದ್ದಾನೆ. ಕುಟುಂಬದ 10 ಮಂದಿ ಸದಸ್ಯರು ಮತ್ತು ನಾಲ್ವರು ಅತ್ಯಾಪ್ತರು ಸಾವಿಗೀಡಾಗಿದ್ದಾರೆ ಎಂದು ಆತ ತಿಳಿಸಿರುವುದಾಗಿ ವರದಿಯಾಗಿದೆ. ಆದಾಗ್ಯೂ ಆತನಲ್ಲಿ ಕಣ್ಣೀರು ಕಂಡುಬಂದಿಲ್ಲ. ಅಷ್ಟೇ ಯಾಕೆ, ವಿಷಾದವಾಗಲೀ ಹತಾಶೆಯಾಗಲೀ ಇಲ್ಲ. ಇದನ್ನು ಸ್ವತಃ ಆತನೇ ಹೇಳಿಕೊಂಡಿದ್ದಾನೆ. ಇಷ್ಟೆಲ್ಲ ಆದ ಮೇಲೂ ಆತನಿಗಿರುವುದು ಭಯೋತ್ಪಾದನೆಯ ಕನಸು ಮಾತ್ರ!
‘‘ನನ್ನ ಕುಟುಂಬದ ಹತ್ತು ಮಂದಿ ಇಂದು ರಾತ್ರಿ ಭಗವಂತನಿಂದ ಆಶೀರ್ವದಿಸಲ್ಪಟ್ಟರು. ಇದರಲ್ಲಿ ಐವರು ಮುಗ್ಧ ಮಕ್ಕಳು, ನನ್ನ ಅಕ್ಕ, ಅವರ ಪತಿ ಸೇರಿದ್ದಾರೆ. ವಿದ್ವಾಂಸ ಫಜಿಲ್ ಭಂಜೆ (ಸೋದರಳಿಯ), ಆತನ ಪತ್ನಿ ಮತ್ತು ಸೊಸೆ, ನನ್ನ ಪ್ರೀತಿಯ ಸಹೋದರ ಹುಜೈಫಾ ಮತ್ತು ಅವರ ತಾಯಿ ಹಾಗೂ ಇನ್ನೂ ಇಬ್ಬರು ಆತ್ಮೀಯ ಸಹಚರರು ಮೃತಪಟ್ಟಿದ್ದಾರೆ. ಅವರೆಲ್ಲ ಅಲ್ಲಾಹನ ಅತಿಥಿಗಳಾಗಿದ್ದಾರೆ’’ ಎಂದು ಅಜರ್ ಹೇಳಿದ್ದಾನೆ.
‘‘ಈ ಘಟನೆ ಬಗ್ಗೆ ನನಗೆ ವಿಷಾದ ಅಥವಾ ಹತಾಶೆ ಇಲ್ಲ. ನಾನೂ ಈ ಹದಿನಾಲ್ಕು ಸದಸ್ಯರ ಜತೆ ಸೇರಬೇಕಿತ್ತು. ಅವರು ಇಲ್ಲಿಂದ ಹೊರಡುವ ಸಮಯ ಬಂದಿತ್ತು. ಆದರೆ ಭಗವಂತ ನನ್ನನ್ನು ಉಳಿಸಿದ. ಈ ಬಗ್ಗೆ ನನಗೆ ಯಾವುದೇ ವಿಷಾದವಿಲ್ಲ’’ ಎಂದು ಉಗ್ರ ಮಸೂದ್ ಅಜರ್ ಹೇಳಿಕೊಂಡಿದ್ದಾನೆ. ಅಷ್ಟೇ ಅಲ್ಲ, ಪ್ರತೀಕಾರದ ಮಾತುಗಳನ್ನೂ ಆಡಿದ್ದಾನೆ.
ಮಸೂದ್ ಅಜರ್ ಉಗ್ರ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ. 1994 ರಲ್ಲಿ ಭಾರತದಲ್ಲಿ ಬಂಧನಕ್ಕೊಳಗಾಗಿದ್ದ. ಆದರೆ, ಏರ್ ಇಂಡಿಯಾ ಐಸಿ 814 ವಿಮಾನ ಅಪಹರಣದ ನಂತರ ಆತನನ್ನು ಬಿಡುಗಡೆ ಮಾಡಬೇಕಾಗಿ ಬಂದಿತ್ತು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಬಿಡುಗಡೆ ಮಾಡಿರುವ ಅಂತರರಾಷ್ಟ್ರೀಯ ಭಯೋತ್ಪಾದಕರ ಪಟ್ಟಿಯಲ್ಲಿ ಈತನೂ ಪ್ರಮುಖ. 56 ವರ್ಷ ವಯಸ್ಸಿನ ಮಸೂದ್ ಅಜರ್ ಭಾರತದಲ್ಲಿ ಅನೇಕ ದಾಳಿಗಳ ಸಂಚು ಹೂಡಿದ್ದ.
2001 ರ ಸಂಸತ್ತಿನ ದಾಳಿ, 2008 ರ ಮುಂಬೈ ದಾಳಿ, 2016 ರ ಪಠಾಣ್‌ಕೋಟ್ ದಾಳಿ ಮತ್ತು 2019 ರ ಪುಲ್ವಾಮಾ ದಾಳಿ ಸೇರಿದಂತೆ ಭಾರತದಲ್ಲಿ ನಡೆದ ಹಲವಾರು ಭಯೋತ್ಪಾದಕ ದಾಳಿಗಳ ಹಿಂದಿನ ಪಿತೂರಿಯಲ್ಲಿ ಮಸೂದ್ ಅಜರ್ ಪ್ರಮುಖ ಸಂಚುಕೋರನಾಗಿದ್ದಾನೆ. ಈ ಭಯೋತ್ಪಾದಕ ಪಾಕಿಸ್ತಾನದಲ್ಲಿದ್ದಾನೆ ಎಂಬುದು ಬಹಿರಂಗ ರಹಸ್ಯವಾಗಿದ್ದರೂ, ಅಲ್ಲಿನ ಸರ್ಕಾರ ಆತನ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಪದೇ ಪದೇ ಹೇಳುತ್ತಾ ಆತನನ್ನು ರಕ್ಷಿಸುತ್ತಲೇ ಬಂದಿದೆ.
ಇದನ್ನೂ ಓದಿ: ಪಾಕಿಸ್ತಾನದೊಳಗೆ ಅತಿದೂರ ಹೋಗಿ ಹೊಡೆತ ಕೊಟ್ಟಿದ್ದು ಇದೇ ಮೊದಲು; ಹಿಂದೆಲ್ಲಾ ಭಾರತ ಒಳನುಗ್ಗಿದ್ದು ಎಷ್ಟು ದೂರ?
ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಅಮಾಯಕರು ಸಾವನ್ನಪ್ಪಿದ್ದಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆ ಬುಧವಾರ ನಸುಕಿನಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಒಂಬತ್ತು ಸ್ಥಳಗಳ ಮೇಲೆ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಈ ದಾಳಿಯಲ್ಲಿ 80 ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು 60 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಭಾರತ ಸರ್ಕಾರಿ ಮೂಲಗಳು ತಿಳಿಸಿವೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ