ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಶತದಿನ ಪೂರೈಸಿದರೆ ವೈದ್ಯಕೀಯ ಸಿಬ್ಬಂದಿಗೆ ಕಾದಿದೆ ಬಂಪರ್​ ಕೊಡುಗೆ!

|

Updated on: May 04, 2021 | 1:00 PM

ವೈದ್ಯಕೀಯ ವಿದ್ಯಾರ್ಥಿಗಳು/ ವೃತ್ತಿಪರರು/ಸಿಬ್ಬಂದಿಯ ಯೋಗಕ್ಷೇಮದ ಬಗ್ಗೆಯೂ ಗಮನ ನೀಡಲಾಗಿದ್ದು, ಯಾರೆಲ್ಲ ಕೋವಿಡ್ ಸೋಂಕಿತರ​ ಸೇವೆಯಲ್ಲಿ ತೊಡಗಿರುತ್ತಾರೋ ಅಂತಹವರಿಗೆ ಲಸಿಕೆ ಸಹ ಹಾಕಲು ನಿರ್ಧರಿಸಲಾಗಿದೆ. ಜೊತೆಗೆ ಸರ್ಕಾರದ ವಿಮಾ ಯೋಜನೆಯಡಿ ವಿಮೆ ವ್ಯಾಪ್ತಿಗೂ ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಶತದಿನ ಪೂರೈಸಿದರೆ ವೈದ್ಯಕೀಯ ಸಿಬ್ಬಂದಿಗೆ ಕಾದಿದೆ ಬಂಪರ್​ ಕೊಡುಗೆ!
ಕೊರೊನಾ ಸೋಂಕಿತರ ಚಿಕಿತ್ಸೆಯಲ್ಲಿ ಶತದಿನ ಪೂರೈಸಿದರೆ ವೈದ್ಯಕೀಯ ಸಿಬ್ಬಂದಿಗೆ ಕಾದಿದೆ ಬಂಪರ್​ ಕೊಡುಗೆ!
Follow us on

ದೆಹಲಿ: ಒಂದು ಕಡೆಯಿಂದ ಕೊರೊನಾ ಮಹಾಕ್ರಿಮಿ ಎಲ್ಲೆಡೆಯೂ ಪಸರಿಸುತ್ತಿರುವಾಗ ಸರಿಯಾದ ಚಿಕಿತ್ಸೆ ದೊರಕದೆ ರೋಗಿಗಳು ಪರದಾಡುತ್ತಿದ್ದಾರೆ. ಅವರನ್ನು ನೋಡಿಕೊಳ್ಳಬೇಕಾದ ವೈದ್ಯ ಲೋಕ ಸಹ ಬಸವಳಿದಿದೆ. ಹೇಳಬೇಕು ಅಂದ್ರೆ ವೈದ್ಯರೂ ಸೇರಿದಂತೆ ವೈದ್ಯಕೀಯ ಸಿಬ್ಬಂದಿಯ ಕೊರತೆ ಎದ್ದುಕಾಣುತ್ತಿದೆ. ಇನ್ನು ವೈದ್ಯಕೀಯ ಸಾಧನ/ ಉಪಕರಣಗಳ ಕೊರತೆಯ ಬಗ್ಗೆ ಹೇಳುವುದೇ ಬೇಡ. ಅಸಲಿಗೆ ಆಸ್ಪತ್ರೆಗಳೇ ಸಿಗುತ್ತಿಲ್ಲ ಎಂಬಂತಾಗಿದೆ ಸದ್ಯದ ಪರಿಸ್ಥಿತಿ. ಪರಿಸ್ಥಿತಿ ಇಷ್ಟೊಂದು ದುರ್ಭರವಾಗಿರುವಾಗ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ವೈದ್ಯಕೀಯ ಸಿಬ್ಬಂದಿಗೆ ಬಂಪರ್​ ಕೊಡುಗೆ ನೀಡಿ, ಅವರನ್ನು ಉತ್ತೇಜಿಸಲು ಮುಂದಾಗಿದೆ! ಕೊರೊನಾ ಸೋಂಕಿತರ ಚಿಕಿತ್ಸೆ ನೀಡುವಲ್ಲಿ ಯಾವೆಲ್ಲ ಸಿಬ್ಬಂದಿ 100 ದಿನಗಳ ಕಾಲ ಸೇವೆ ನೀಡಲು ಸಿದ್ಧವಾಗಿ, ಅರ್ಜಿ ಸಲ್ಲಿಸುತ್ತಾರೋ ಅಂತಹ ವೈದ್ಯಕೀಯ ಸಿಬ್ಬಂದಿಗೆ ಕೇಂದ್ರ ಸರ್ಕಾರದ ಮುಂದಿನ ನೇಮಕಾತಿಗಳಲ್ಲಿ ಮಣೆ ಹಾಕಲು ನಿರ್ಧರಿಸಲಾಗಿದೆ. ಆದ್ಯತೆಯ ಮೇರೆಗೆ ಅವರಿಗೆ ನೇಮಕಾತಿಯಲ್ಲಿ ಮೀಸಲು ನೀಡಲು ಮುಂದಾಗಿದೆ.

ವೈದ್ಯಕೀಯ ವೃತ್ತಿಪರರು ಕೋವಿಡ್​ ಡ್ಯೂಟಿಯಲ್ಲಿ ಕನಿಷ್ಠ 100 ದಿನ ಪೂರೈಸಿದರೆ ಅಂತಹವರಿಗೆ ಪ್ರಧಾನ ಮಂತ್ರಿ ವಿಶಿಷ್ಟ ಕೋವಿಡ್​ ನ್ಯಾಷನಲ್ ಸರ್ವೀಸ್​ ಸನ್ಮಾನ್ ನೀಡಲು (PM’s Distinguished Covid National Service Samman) ನಿರ್ಧರಿಸಲಾಗಿದೆ ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ. ಕೋವಿಡ್ ಸೋಂಕಿತರ​ ಸೇವೆಯಲ್ಲಿ ವೈದ್ಯಕೀಯ ವೃತ್ತಿಪರರು ಸಕಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಲಭ್ಯವಾಗಲಿ ಎಂಬ ಆಶಯದೊಂದಿಗೆ ಪ್ರಧಾನಿ ಮೋದಿ ಇಂತಹ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಪ್ರಧಾನಿ ಕಚೇರಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ವೈದ್ಯಕೀಯ ವಿದ್ಯಾರ್ಥಿಗಳು/ ವೃತ್ತಿಪರರು/ಸಿಬ್ಬಂದಿಯ ಯೋಗಕ್ಷೇಮದ ಬಗ್ಗೆಯೂ ಗಮನ ನೀಡಲಾಗಿದ್ದು, ಯಾರೆಲ್ಲ ಕೋವಿಡ್ ಸೋಂಕಿತರ​ ಸೇವೆಯಲ್ಲಿ ತೊಡಗಿರುತ್ತಾರೋ ಅಂತಹವರಿಗೆ ಲಸಿಕೆ ಸಹ ಹಾಕಲು ನಿರ್ಧರಿಸಲಾಗಿದೆ. ಜೊತೆಗೆ ಸರ್ಕಾರದ ವಿಮಾ ಯೋಜನೆಯಡಿ ವಿಮೆ ವ್ಯಾಪ್ತಿಗೂ ತರಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಇನ್ನು ಕೋವಿಡ್​ ನಿರ್ವಹಣಾ ಡ್ಯೂಟಿಗಳಲ್ಲಿ ತೊಡಗಿಸಲು ವೈದ್ಯಕೀಯ ಇಂಟರ್ನ್​ಶಿಪ್ ಮಾಡುತ್ತಿರುವವರನ್ನೂ ಬಳಸಿಕೊಳ್ಳಲಾಗುವುದು. ಅಂತಹ ಇಂಟರ್ನಿಗಳು ತಮ್ಮ ಹಿರಿಯ ಮಾರ್ಗದರ್ಶಕರ ಉಸ್ತುವಾರಿಯಲ್ಲಿ ಇಂಟರ್ನ್​ಶಿಪ್ ಭಾಗವಾಗಿ ಕೋವಿಡ್​ ಸೇವೆಗಳಲ್ಲಿ ತೊಡಗಬಹುದು. ಅಂತಿಮ ವರ್ಷದಲ್ಲಿರುವ ವೈದ್ಯಕೀಯ ವಿದ್ಯಾರ್ಥಿಗಳು ಟೆಲಿ ಕನ್ಸಲ್ಟೇಷನ್, ಲಘು ಕೋವಿಡ್​ ಪ್ರಕರಣಗಳಲ್ಲಿ ಸೇವೆ ನೀಡಬಹುದು. ಇದರಿಂದ ಹಿರಿಯ ವೈದ್ಯಕೀಯ ಸಿಬ್ಬಂದಿಯ ಮೇಲಿನ ಒತ್ತಡ ಸ್ವಲ್ಪಮಟ್ಟಿಗೆ ಕಡಿಮೆಯಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ವರ್ಷ ಕೊರೊನಾ ಮೊದಲ ಅಲೆಯಲ್ಲಿ ದಾಂಗುಡಿಯಿಟ್ಟಾಗ 2020 ಜೂನ್​ 16ರಂದು ಡಾಕ್ಟರ್​​, ನರ್ಸ್​ಗಳನ್ನು ಕೊವಿಡ್​ ಡ್ಯೂಟಿಯಲ್ಲಿ ತೊಡಗಿಸಲು ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿತ್ತು. ಇದರ ಅಂಗವಾಗಿ 15,000 ಕೋಟಿ ರೂಪಾಯಿ ನಿಧಿಯನ್ನು ಪಬ್ಲಿಕ್​ ಹೆಲ್ತ್​​ ಎಮರ್ಜೆನ್ಸಿ ಸಪೋರ್ಟ್​ಗಾಗಿ ಬಿಡುಗಡೆ ಮಾಡಲಾಗಿತ್ತು. ರಾಷ್ಟ್ರೀಯ ಆರೋಗ್ಯ ಮಿಷನ್​ ಯೋಜನೆಯಡಿ ಹೆಚ್ಚುವರಿಯಾಗಿ 2206 ತಜ್ಞರು, 4685 ವೈದ್ಯಕೀಯ ಅಧಿಕಾರಿಗಳು ಮತ್ತು 25,593 ಸ್ಟಾಫ್​ ನರ್ಸ್​​ಗಳನ್ನು ನೇಮಿಸಿಕೊಳ್ಳಲಾಗಿತ್ತು.

(medical personnel who serve covid patients to get priority in regular government recruitments says PMO release)

ಇದನ್ನೂ ಓದಿ:
ಇಷ್ಟಕ್ಕೂ ಕೊರೊನಾ ಸೋಂಕಿತ ವ್ಯಕ್ತಿಗೆ ಆಕ್ಸಿಜನ್​ ಎಷ್ಟು ಬೇಕು? ಆಕ್ಸಿಜನ್ ಕಾನ್ಸೆಂಟ್ರೇಟ್ ಮಾತ್ರವೇ ಸಾಕಾದೀತಾ?