ಸಂಸತ್​​ನಲ್ಲಿ ಇಂದು ರಾಗಿ ದೋಸೆ, ಜೋಳದ ರೊಟ್ಟಿ, ಕಾಳು ಪಲ್ಯ ಸೇರಿದಂತೆ 19 ಬಗೆಯ ಸಿರಿಧಾನ್ಯ ಊಟ

| Updated By: ರಶ್ಮಿ ಕಲ್ಲಕಟ್ಟ

Updated on: Dec 20, 2022 | 2:01 PM

Millets Food Festival 2022 ಸಂಸದರ ಊಟಕ್ಕಾಗಿ ಇಡ್ಲಿ ಮತ್ತು ರಾಗಿ ದೋಸೆಯಂತಹ ವಿಶೇಷ ಅಡುಗೆಗಳನ್ನು ತಯಾರಿಸಲು ಕರ್ನಾಟಕದಿಂದ ವಿಶೇಷ ಬಾಣಸಿಗರನ್ನು ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಗಿ ಮತ್ತು ಜೋಳ ರೊಟ್ಟಿ, ಜೊತೆಗೆ ಬಾಜ್ರಾ ಮತ್ತು ಖಿಚಡಿ ಮತ್ತು ಖೀರ್‌ ಕೂಡಾ ಮೆನುನಲ್ಲಿ ಇದೆ ಎಂದು ಮೂಲಗಳು ಹೇಳಿವೆ.

ಸಂಸತ್​​ನಲ್ಲಿ ಇಂದು ರಾಗಿ ದೋಸೆ, ಜೋಳದ ರೊಟ್ಟಿ, ಕಾಳು ಪಲ್ಯ ಸೇರಿದಂತೆ 19 ಬಗೆಯ ಸಿರಿಧಾನ್ಯ ಊಟ
ಸಿರಿಧಾನ್ಯ ಭೋಜನದ ಮೆನು
Follow us on

ದೆಹಲಿ: ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 (International Year of Millets) ಆಚರಣೆಯ ಅಂಗವಾಗಿ ಇಂದು (ಮಂಗಳವಾರ) ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಸಂಸತ್ ನಲ್ಲಿ ಸಿರಿಧಾನ್ಯ ಆಹಾರ ಉತ್ಸವವನ್ನು (millet food festival) ಆಯೋಜಿಸಿದ್ದಾರೆ. ಇಂದು ಮಧ್ಯಾಹ್ನ ಸಂಸದರು ಸಿರಿಧಾನ್ಯ ಭೋಜನ ಸವಿಯಲಿದ್ದು ಪ್ರಧಾನಿ ಮೋದಿ ಕೂಡಾ ಇದರಲ್ಲಿ ಭಾಗಿಯಾಗಲಿದ್ದಾರೆ.ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಸ್ತಾಪಿಸಿದ್ದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷ 2023 ಅನ್ನು ಅಂಗೀಕರಿಸಿದ ವಿಶ್ವಸಂಸ್ಥೆಯ ಸಾಮಾನ್ಯ ಸಭೆ (United Nations General Assembly)ಯು 2021ರ ಮಾರ್ಚ್​​​ನಲ್ಲಿ ತನ್ನ 75ನೇ ಅಧಿವೇಶನದಲ್ಲಿ 2023 ಅನ್ನು ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷವೆಂದು ಘೋಷಿಸಿತ್ತು. ಭಾರತ ಸರ್ಕಾರವು ರಾಷ್ಟ್ರೀಯ ಆಹಾರ ಭದ್ರತಾ ಮಿಷನ್ ಅಡಿಯಲ್ಲಿ ರಾಗಿಯನ್ನು ಪೌಷ್ಟಿಕ ಧಾನ್ಯವಾಗಿ ಸೇರಿಸಿದೆ. ಇದನ್ನು ದೇಶದ 14 ರಾಜ್ಯಗಳ 212 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗಿದೆ. ಸಂಸದರ ಊಟಕ್ಕಾಗಿ ಇಡ್ಲಿ ಮತ್ತು ರಾಗಿ ದೋಸೆಯಂತಹ ವಿಶೇಷ ಅಡುಗೆಗಳನ್ನು ತಯಾರಿಸಲು ಕರ್ನಾಟಕದಿಂದ ವಿಶೇಷ ಬಾಣಸಿಗರನ್ನು ನೇಮಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ರಾಗಿ ಮತ್ತು ಜೋಳ ರೊಟ್ಟಿ, ಜೊತೆಗೆ ಬಾಜ್ರಾ ಮತ್ತು ಖಿಚಡಿ ಮತ್ತು ಖೀರ್‌ ಕೂಡಾ ಮೆನುನಲ್ಲಿ ಇದೆ ಎಂದು ಮೂಲಗಳು ಹೇಳಿವೆ.

ದೇಶದಲ್ಲಿ ಅತೀ ಹೆಚ್ಚು ಕೃಷಿ ಮಾಡುವ ಸಿರಿಧಾನ್ಯಗಳೆಂದರೆ ಜೋಳ ಮತ್ತು ಸಜ್ಜೆ. ಇವು ಭಾರತದಲ್ಲಿನ ಪ್ರಧಾನ ಬೆಳೆಯಾಗಿದ್ದು, ಆಫ್ರಿಕಾದಲ್ಲಿಯೂ ಇದನ್ನು ಬೆಳೆಸಲಾಗುತ್ತದೆ. 7,000 ವರ್ಷಗಳಿಂದ ಮನುಷ್ಯರು ಸಿರಿಧಾನ್ಯಗಳನ್ನು ಪೌಷ್ಟಿಕ ಆಹಾರವಾಗಿ ಸೇವಿಸುತ್ತಿದ್ದಾರೆ ಎಂದು ಹೇಳಲಾಗುತ್ತದೆ. ಇದೀಗ ಸಿರಿಧಾನ್ಯಗಳಲ್ಲಿ ವಿವಿಧ ಜಾತಿಯ ಬೆಳೆಗಳನ್ನು ಬೆಳೆಯಲಾಗುತ್ತದೆ. ಇವುಗಳ ಪೌಷ್ಟಿಕತೆಯ ಮೌಲ್ಯ ಬಗ್ಗೆ ಯಜುರ್ವೇದದಲ್ಲೂ ಉಲ್ಲೇಖವಿದೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ ಭಾರತ 12.5 ಮಿಲಿಯನ್ ಟನ್ ಸಿರಿಧಾನ್ಯ ಬೆಳೆಯುತ್ತಿದ್ದು, ಆಫ್ರಿಕಾದ ನೈಜಾದಲ್ಲಿ 3.5 ಮಿಲಿಯನ್ ಟನ್ ಬೆಳೆ ಬೆಳೆಯಲಾಗುತ್ತಿದೆ. ಅದೇ ವೇಳೆ ಚೀನಾದಲ್ಲಿ 2.3ಮಿಲಿಯನ್ ಟನ್ ಬೆಳೆ ಬೆಳೆಯಲಾಗುತ್ತದೆ.

ಮಂಗಳವಾರ (ಡಿ.20) ಎಲ್ಲಾ ಪಕ್ಷಗಳ ಸಂಸದರು ಸ್ಥಳೀಯ ಸಿರಿಧಾನ್ಯಗಳಾದ ರಾಗಿ, ಜೋಳ ಮತ್ತು ಸಜ್ಜೆಯಿಂದ ತಯಾರಿಸಿದ ವಿವಿಧ ಖಾದ್ಯಗಳನ್ನು ಸವಿಯಲಿದ್ದಾರೆ. “ಬಾಣಸಿಗರು ಭಾರತೀಯ ಸಿರಿಧಾನ್ಯಗಳಿಂದ ತಯಾರಿಸಿದ ವಿವಿಧ ಆರೋಗ್ಯಕರ ಊಟ ಮತ್ತು ಭಕ್ಷ್ಯಗಳನ್ನು ತಯಾರಿಸುತ್ತಾರೆ. ಸಿದ್ಧತೆಗಳ ಮೇಲ್ವಿಚಾರಣೆಯನ್ನು ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ನೋಡಿಕೊಳ್ಳುತ್ತಿದ್ದಾರೆ” ಎಂದು ಅಧಿಕಾರಿಯೊಬ್ಬರು ತಿಳಿಸಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.


ಸಿರಿಧಾನ್ಯ ಭೋಜನ ಮೆನುನಲ್ಲಿ ಏನೇನಿದೆ?

ಸೂಪ್, ಬಾಜ್ರಾದ ರಾಬ್ಡೀ, ಸಜ್ಜೆ ಸೂಪ್.  ರಾಗಿ ದೋಸೆ, ರಾಗಿ ರೊಟ್ಟಿ, ಉಚ್ಚೆಳ್ಳು ಚಟ್ನಿ, ಕಾಳು ಹುಳಿ, ಬೆಳ್ಳುಳ್ಳಿ ಚಟ್ನಿ, ಚಟ್ನಿ ಪುಡಿ, ಕಡಿ,
ಕಾಳು ಪಲ್ಯ, ನವಣೆ ಬಿಸಿಬೇಳೆ ಬಾತ್, ಖಾರಾ ಬೂಂದಿ, ನವಣೆ ಮೊಸರನ್ನ, ಜೋಳದ ರೊಟ್ಟಿ,ಗ್ರೀನ್ ಸಲಾಡ್, ಸಿಹಿ ತಿನಿಸುಗಳಲ್ಲಿ ರಾಗಿ ಹಲ್ವಾ, ಜೋಳದ ಹಲ್ವಾ, ಗಜ್ಜರಿ ಹಲ್ವಾ , ಬಾಜ್ರಾ ಖೀರ್, ಬಾಜ್ರಾ ಕೇಕ್.

ಇದನ್ನೂ ಓದಿPM Kisan Status 2022: ಇಂದು ರೈತರ ಬ್ಯಾಂಕ್ ಖಾತೆಗೆ ಬೀಳಲಿದೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಕೇಂದ್ರ ಕಚೇರಿ ರೋಮ್​ನಲ್ಲಿ ನಡೆದ ಅಂತಾರಾಷ್ಟ್ರೀಯ ಸಿರಿಧಾನ್ಯಗಳ ವರ್ಷದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು, ಜಾಗತಿಕ ಆಹಾರ ಭದ್ರತೆಯನ್ನು ಹೆಚ್ಚಿಸಲು ಮತ್ತು ಕೃಷಿ ಹವಾಮಾನವನ್ನು ಸ್ಥಿತಿಸ್ಥಾಪಕವಾಗಿಸಲು ಬೆಳೆ ವೈವಿಧ್ಯೀಕರಣ ಮತ್ತು ಸಿರಿಧಾನ್ಯ ಕೃಷಿಗೆ ಕರೆ ನೀಡಿದ್ದರು ಎಂದು ಅಧಿಕೃತ ಹೇಳಿಕೆ ತಿಳಿಸಿದೆ.ಈ ಧಾನ್ಯಗಳ ಆರಂಭಿಕ ಪುರಾವೆಗಳು ಸಿಂಧೂ ನಾಗರಿಕತೆಯಲ್ಲಿ ಕಂಡುಬಂದಿವೆ ಮತ್ತು ಅವು ಆಹಾರಕ್ಕಾಗಿ ಬಳಸಿದ ಮೊದಲ ಸಸ್ಯಗಳಲ್ಲಿ ಒಂದಾಗಿದೆ ಎಂದು ಮೋದಿ ಹೇಳಿದ್ದರು.

ಸಿರಿಧಾನ್ಯಗಳ ಅಂತಾರಾಷ್ಟ್ರೀಯ ವರ್ಷವನ್ನು ಆಚರಿಸುವ ಭಾರತದ ಪ್ರಸ್ತಾಪವನ್ನು ಬೆಂಬಲಿಸಿದ್ದಕ್ಕಾಗಿ ಜಾಗತಿಕ ಸಮುದಾಯಕ್ಕೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, “ಸಿರಿಧಾನ್ಯಗಳು ಪೌಷ್ಟಿಕ ಹಾಗೂ ಆರೋಗ್ಯಯುತ ಬೆಳೆಯಾಗಿದ್ದು, ಅರೆ ಶುಷ್ಕ ಪ್ರದೇಶಗಳಲ್ಲಿ ಬೆಳೆಯುವುದರ ಜೊತೆಗೆ ನೀರಾವರಿಗೆ ಕಡಿಮೆ ನೀರನ್ನು ಬಳಸಬಹುದು” ಎಂದಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ