ದೆಹಲಿ: ಪಂಜಾಬ್ ಸರ್ಕಾರಕ್ಕೆ ಬರೆದ ಪತ್ರವನ್ನು ಕೆಲವು ಮಾಧ್ಯಮಗಳು ತಪ್ಪಾಗಿ ವ್ಯಾಖ್ಯಾನಿಸಿವೆ ಎಂದು ಕೇಂದ್ರ ಗೃಹ ಇಲಾಖೆ ಇಂದು ಸ್ಪಷ್ಟೀಕರಣ ನೀಡಿದೆ. 4 ಸೂಕ್ಷ್ಮ ಗಡಿಗಳನ್ನು ಹೊಂದಿರುವ ಪಂಜಾಬ್ ರಾಜ್ಯದ ಕುರಿತು ಕೇಂದ್ರ ಗೃಹ ಇಲಾಖೆ ಕಳೆದ ಎರಡು ವರ್ಷಗಳಲ್ಲಿ ಗಮನಿಸಿರುವುದನ್ನು ಪತ್ರದಲ್ಲಿ ತಿಳಿಸಲಾಗಿದೆಯಷ್ಟೇ. ಈ ಪತ್ರಕ್ಕೆ ಯಾವುದೇ ವಿಶೇಷ ಅರ್ಥವನ್ನು ಕಲ್ಪಿಸುವ ಅಗತ್ಯವಿಲ್ಲ. ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಸಹಜ ವಾಡಿಕೆಯಂತೆ ಈ ಪತ್ರವನ್ನು ಬರೆಯಲಾಗಿದೆ. ಕೇವಲ ಪಂಜಾಬ್ ರಾಜ್ಯಕ್ಕೊಂದೇ ಪತ್ರ ಬರೆಯಲಾಗಿದೆ ಎಂದು ಬಿಂಬಿಸುವ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ.
ಉತ್ತರ ಪ್ರದೇಶ ಮತ್ತು ಬಿಹಾರಗಳಿಂದ ಕೆಲಸ ಹುಡುಕಿಕೊಂಡು ಬಂದಿರುವ ಬಡ ಕೃಷಿ ಕೂಲಿ ಕಾರ್ಮಿಕರಿಂದ ಹೆಚ್ಚಿನ ಅವಧಿ ಕೆಲಸ ಮಾಡಿಸಲೆಂದು ಡ್ರಗ್ಸ್ ನೀಡಲಾಗುತ್ತಿದೆ. ಅವರನ್ನು ಬಲವಂತವಾಗಿ ಜೀತದಾಳುಗಳಂತೆ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಕಾರ್ಮಿಕರ ದೈಹಿಕ ಮತ್ತು ಮಾನಸಿಕ ಆರೋಗ್ಯ ಹಾಳಾಗುತ್ತಿದೆ. ಬಿಹಾರ ಮತ್ತು ಉತ್ತರ ಪ್ರದೇಶ ರಾಜ್ಯಗಳ ಬಡ ಕುಟುಂಬಗಳ ಹಿನ್ನೆಲೆಯ ಜನರಿಗೆ ಮಾನವ ಸಾಗಣೆದಾರರ ಗುಂಪುಗಳು ಉತ್ತಮ ಸಂಬಳ ಮತ್ತು ಜೀವನಶೈಲಿಯ ಆಮಿಷವೊಡ್ಡಿ ಪಂಜಾಬ್ಗೆ ಕರೆತರುತ್ತವೆ. ಆದರೆ ಪಂಜಾಬ್ನ ಹಳ್ಳಿಗಳನ್ನು ತಲುಪಿದ ನಂತರ ಈ ಕಾರ್ಮಿಕರಿಗೆ ಕಡಿಮೆ ಸಂಬಳಕೊಟ್ಟು, ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ಗೃಹ ಇಲಾಖೆಯು ಪಂಜಾಬ್ನ ಮುಖ್ಯಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರಿಗೆ ಮಾರ್ಚ್ 17ರಂದು ಬರೆದಿರುವ ಪತ್ರದಲ್ಲಿ ಹೇಳಿತ್ತು. ಈ ಪತ್ರ ಬರೆದ ಬೆನ್ನಲ್ಲೇ ಕೆಲ ಮಾಧ್ಯಮ ಸಂಸ್ಥೆಗಳು ತಪ್ಪಾಗಿ ವ್ಯಾಖ್ಯಾನಿಸಿವೆ ಎಂದು ಕೇಂದ್ರ ಗೃಹ ಇಲಾಖೆ ಹೇಳಿದೆ.
No motive can be ascribed to a letter issued by this Ministry to a particular State or States as this is part of routine communication over Law & Order issues: MHA
— ANI (@ANI) April 3, 2021
ಉತ್ತಮ ವಾತಾವರಣದಲ್ಲಿ ಕೆಲಸ ಮಾಡಲು ಅವಕಾಶ ಮತ್ತು ಉತ್ತಮ ಸಂಬಳದ ಆಮಿಷವೊಡ್ಡಿ ಬಡವರನ್ನು ಸೆಳೆಯುವ ತಂತ್ರದ ಬಗ್ಗೆ ಎಚ್ಚರಿಕೆ ವಹಿಸುವಂತೆ ಕೇಂದ್ರ ಗೃಹ ಇಲಾಖೆಯು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಇಲಾಖೆಯ ಮೂಲಕ ಎಲ್ಲ ರಾಜ್ಯಗಳಿಗೂ ಸೂಚನೆ ಕಳಿಸಿದೆ. ಬಿಹಾರ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಛತ್ತೀಸಗಡ, ಜಾರ್ಖಂಡ್, ಮಧ್ಯಪ್ರದೇಶ ಮತ್ತು ಒಡಿಶಾ ರಾಜ್ಯಗಳಲ್ಲಿ ಹೆಚ್ಚಿನ ಎಚ್ಚರಿಕೆ ಅಗತ್ಯ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ. ನಾವು ಬರೆದ ಪತ್ರದಲ್ಲಿ ಇಂತಹ ಗಂಭೀರ ಸಮಸ್ಯೆಗಳ ಬಗ್ಗೆ ತುರ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಪಂಜಾಬ್ ಸರ್ಕಾರಕ್ಕೆ ಸೂಚನೆ ನೀಡಿದ್ದೇವೆ ಎಂದು ಕೇಂದ್ರ ಗೃಹ ಇಲಾಖೆ ಸ್ಪಷ್ಟನೆ ನೀಡಿದೆ.
ಇದನ್ನೂ ಓದಿ: ಕೃಷಿ ಕೆಲಸಕ್ಕೆ ಬಂದವರಿಗೆ ಡ್ರಗ್ಸ್: ಜೀತದಾಳುಗಳ ಸಂಕಷ್ಟ ಸ್ಥಿತಿಯ ಬಗ್ಗೆ ಪಂಜಾಬ್ ಸರ್ಕಾರಕ್ಕೆ ಪತ್ರ ಬರೆದ ಕೇಂದ್ರ ಗೃಹ ಇಲಾಖೆ
ಭಾರತದಲ್ಲಿ ಮತ್ತೆ ಲಾಕ್ಡೌನ್ ಜಾರಿ ಇಲ್ಲ: ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್ ಗೌಬಾ