ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೀರಮ್ ಬಳಸಿಲ್ಲ: ಭಾರತ್ ಬಯೋಟೆಕ್ ಸ್ಪಷ್ಟನೆ

| Updated By: ರಶ್ಮಿ ಕಲ್ಲಕಟ್ಟ

Updated on: Jun 17, 2021 | 11:35 AM

Calf Serum: ಕೊವ್ಯಾಕ್ಸಿನ್ ಅಂತಿಮ ಹಂತದ ಲಸಿಕೆಯಲ್ಲಿ ಕರುವಿನ ಸೀರಮ್ ಇರುವುದಿಲ್ಲ. ನವಜಾತ ಕರುಗಳ ಸೀರಮ್ ಅನ್ನು ವೆರೊ ಜೀವಕೋಶಗಳ ಬೆಳವಣಿಗೆಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಈ ತಂತ್ರಜ್ಞಾನ ಹಲವು ದಶಕಗಳಿಂದ ಬಳಕೆಯಲ್ಲಿದೆ.

ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೀರಮ್ ಬಳಸಿಲ್ಲ: ಭಾರತ್ ಬಯೋಟೆಕ್ ಸ್ಪಷ್ಟನೆ
ಪ್ರಾತಿನಿಧಿಕ ಚಿತ್ರ
Follow us on

ದೆಹಲಿ: ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಅಂಗಾಂಗಳಿಂದ ಬೇರ್ಪಡಿಸಿದ ದ್ರವ (ಸೀರಮ್) ಬಳಕೆಯಾಗಿಲ್ಲ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭಾರತ್ ಬಯೋಟೆಕ್ ಬುಧವಾರ ಸ್ಪಷ್ಟನೆ ನೀಡಿದೆ. ಲಸಿಕೆ ಬಗ್ಗೆ ಮಾಹಿತಿ ತಿಳಿಯಲು ಏಪ್ರಿಲ್‌ನಲ್ಲಿ ಸಲ್ಲಿಸಲಾದ ಮಾಹಿತಿ ಹಕ್ಕು (ಆರ್‌ಟಿಐ) ಅರ್ಜಿಯಲ್ಲಿ ಈ ಪ್ರಶ್ನೆ ಕೇಳಲಾಗಿತ್ತು . ಈ ಮಾಹಿತಿಯನ್ನು ಸಾರ್ವಜನಿಕರಿಂದ ತಡೆಹಿಡಿಯಲಾಗಿದೆ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸುತ್ತಿದ್ದಾರೆ. ಭಾರತ್ ಬಯೋಟೆಕ್ ಮತ್ತು ಆರೋಗ್ಯ ಸಚಿವಾಲಯ ಎರಡೂ ಈ ಆರೋಪಗಳನ್ನು ನಿರಾಕರಿಸಿದೆ.

ಕೊವ್ಯಾಕ್ಸಿನ್ ಲಸಿಕೆಯನ್ನು ರೂಪಿಸುವಾಗ ನಡೆದ ಪ್ರಯೋಗಗಳಲ್ಲಿ, ಸಿದ್ಧತೆಯ ಹಂತದಲ್ಲಿ ಮಾತ್ರ ಕರುಗಳ ಸೀರಮ್‌ ಬಳಕೆಯಾಗಿತ್ತು. ಆದರೆ ಅಂತಿಮ ಹಂತದಲ್ಲಿ ಹೊರಬಂದಿರುವ ಕೊವ್ಯಾಕ್ಸಿನ್ ಲಸಿಕೆಗಳಲ್ಲಿ ಕರುವಿನ ರಕ್ತದ ಕಣಗಳು ಇರುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ಲಸಿಕೆ ಉದ್ಯಮದಲ್ಲಿರುವವರಿಗೆ ಕರು ಸೀರಮ್ ಬಳಸುವುದು ಆಶ್ಚರ್ಯವೇನಿಲ್ಲವಾದರೂ, ಇದು ಸಾರ್ವಜನಿಕರಿಗೆ ಸ್ವಲ್ಪ ಆಶ್ಚರ್ಯವನ್ನುಂಟು ಮಾಡಿದೆ.

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಅರ್ಜಿ (ಆರ್‌ಟಿಐ)
ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಗೆ 20 ಏಪ್ರಿಲ್ 2021 ರಂದು ಸಲ್ಲಿಸಿದ RTI ಅರ್ಜಿಯಲ್ಲಿ, ವಿಕಾಸ್ ಪಾಟ್ನಿ ಲಸಿಕೆಯ ವಿಷಯಗಳು, ಅದರ ಮುಕ್ತಾಯ ದಿನಾಂಕ ಮತ್ತು ಅಡ್ಡಪರಿಣಾಮಗಳ, ಸರ್ಕಾರವನ್ನು ನಿರ್ಬಂಧಿಸುವ ಕಾನೂನುಗಳು ಮೊದಲಾದ 12 ಪ್ರಶ್ನೆಗಳನ್ನು ಕೇಳಿದರು. ಈ ಪ್ರಶ್ನೆಗಳಲ್ಲಿ, ಯಾವುದೇ ಲಸಿಕೆಗಳನ್ನು ತಯಾರಿಸುವಾಗ ಭ್ರೂಣದ ಬೋವಿನ್ ಸೀರಮ್(Fetal bovine serum- FBS) ಅನ್ನು ಯಾವುದೇ ರೂಪದಲ್ಲಿ ಬಳಸಲಾಗಿದೆಯೇ ಎಂದು ಕೇಳಿದ್ದರು.

ಈ ಎಲ್ಲ ಪ್ರಶ್ನೆಗಳಿಗೆ ಕೇಂದ್ರ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ ಪ್ರತಿಕ್ರಿಯಿಸಿತು. ಲಸಿಕೆಯಲ್ಲಿ ಎಫ್‌ಬಿಎಸ್ ಬಳಕೆಗಾಗಿ, ಪ್ರತಿಕ್ರಿಯೆ ಹೀಗಿತ್ತು – “ಸಂಸ್ಥೆಯು ಒದಗಿಸಿದ ಹೊಸ ಮಾಹಿತಿಯ ಪ್ರಕಾರ, ನವಜಾತ ಕರು ಸೀರಮ್ ಅನ್ನು ವೆರೋ ಕೋಶಗಳ ಪುನರುಜ್ಜೀವನ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ, ಇದನ್ನು ಭಾರತ್ ಬಯೋಟೆಕ್ ನ ಕೊವಾಕ್ಸಿನ್ ಬೃಹತ್ ಲಸಿಕೆ ತಯಾರಿಕೆಯ ಸಮಯದಲ್ಲಿ ಬಳಸಲಾಗುತ್ತದೆ ಎಂದಿತ್ತು.

ಭ್ರೂಣದ ಬೋವಿನ್ ಸೀರಮ್ ಮತ್ತು ಕರು ಸೀರಮ್ ನಡುವೆ ಏನಿದೆ ವ್ಯತ್ಯಾಸ?
ಭ್ರೂಣದ ಬೋವಿನ್ ಸೀರಮ್ (ಎಫ್‌ಎಸ್‌ಬಿ) ಮತ್ತು ಕರುವಿನ ಸೀರಮ್ (Newborn Calf Serum NBCS) ಬಳಕೆಯು ಚರ್ಚೆಯ ಒಂದು ಅಂಶವಾಗಿದೆ. ಈ ಪ್ರಕ್ರಿಯೆಯಲ್ಲಿ ಎನ್‌ಬಿಸಿಎಸ್ ಅನ್ನು ಬಳಸುವಾಗ ಎಫ್‌ಎಸ್‌ಬಿ ಬಳಸಲಾಗಿದೆಯೇ ಎಂದು ಪಾಟ್ನಿ ಕೇಳಿದ್ದಾರೆ. ಈ ಎರಡೂ ಸೀರಮ್ಗಳ ನಡುವೆ ವ್ಯತ್ಯಾಸವಿದೆ.

ಭ್ರೂಣದ ಬೋವಿನ್ ಸೀರಮ್ (ಎಫ್‌ಬಿಎಸ್) ಅನ್ನು ಕಸಾಯಿಖಾನೆಯಲ್ಲಿರುವ ಗೋವಿನ ಭ್ರೂಣದಿಂದ ಪಡೆದ ರಕ್ತದಿಂದ ತೆಗೆದುಕೊಳ್ಳಲಾಗುತ್ತದೆ. ಲಸಿಕೆ ಉತ್ಪಾದನೆಗೆ ಇದನ್ನು ವ್ಯಾಪಕವಾಗಿ ಬಳಸಲಾಗುತ್ತದೆ ಏಕೆಂದರೆ ಇದು ಕಡಿಮೆ ಮಟ್ಟದ ಪ್ರತಿಕಾಯಗಳನ್ನು ಹೊಂದಿದೆ ಮತ್ತು ಹೆಚ್ಚಿನ ಬೆಳವಣಿಗೆಯ ಅಂಶಗಳನ್ನು ಹೊಂದಿರುತ್ತದೆ.

ನವಜಾತ ಕರು ಸೀರಮ್ (ಎನ್‌ಬಿಸಿಎಸ್) ಮೂರರಿಂದ 10 ದಿನಗಳ ವಯಸ್ಸಿನ ಕರುದಿಂದ ಹುಟ್ಟುತ್ತದೆ. ಈ ಸೀರಮ್ ಉತ್ತಮ ಗುಣಮಟ್ಟದ್ದಾಗಿದೆ ಮತ್ತು ಇದು ಎಫ್‌ಬಿಎಸ್‌ಗೆ ಹೋಲಿಸಿದರೆ ವೆಚ್ಚ ಕಡಿಮೆ. ಇದು ಪ್ರೋಟೀನ್ ಮತ್ತು ಇಮ್ಯುನೊಗ್ಲಾಬ್ಯುಲಿನ್‌ನ ಹೆಚ್ಚಿನ ಪ್ರಮಾಣವನ್ನು ಹೊಂದಿದೆ, ಆದರೆ ಕಡಿಮೆ ಬೆಳವಣಿಗೆಯ ಅಂಶಗಳನ್ನು ಹೊಂದಿದೆ.


ಆರೋಗ್ಯ ಇಲಾಖೆ ಸ್ಪಷ್ಟನೆ
ಕೊವ್ಯಾಕ್ಸಿನ್ ಅಂತಿಮ ಹಂತದ ಲಸಿಕೆಯಲ್ಲಿ ಕರುವಿನ ಸೀರಮ್ ಇರುವುದಿಲ್ಲ. ನವಜಾತ ಕರುಗಳ ಸೀರಮ್ ಅನ್ನು ವೆರೊ ಜೀವಕೋಶಗಳ ಬೆಳವಣಿಗೆಗೆ ಮಾತ್ರ ಬಳಕೆ ಮಾಡಲಾಗುತ್ತದೆ. ಈ ತಂತ್ರಜ್ಞಾನ ಹಲವು ದಶಕಗಳಿಂದ ಬಳಕೆಯಲ್ಲಿದೆ. ಪೋಲಿಯೊ, ರೇಬಿಸ್‌ ಸೇರಿದಂತೆ ಹಲವು ಲಸಿಕೆಗಳಲ್ಲಿಯೂ ಈ ತಂತ್ರ ಬಳಕೆಯಾಗುತ್ತಿದೆ. ನೀರು, ಕೆಮಿಕಲ್‌ನಿಂದ ವೆರೊ ಜೀವಕೋಶ ತೊಳೆದ ಬಳಿಕ ಜೀವಕೋಶಗಳಿಗೆ ವೈರಾಣು ಸೋಂಕು ತಗುಲಿಸಲಾಗುತ್ತೆ ಎಂದು ಕೇಂದ್ರ ಹೇಳಿದೆ.

ವೈರಾಣುವಿನ ಬೆಳವಣಿಗೆ ಪ್ರಕ್ರಿಯೆಯಲ್ಲಿ ಜೀವಕೋಶಗಳನ್ನು ನಾಶ ಮಾಡಲಾಗುತ್ತೆ. ಜೀವಂತ ವೈರಾಣುಗಳನ್ನು ಪರಿಶುದ್ಧಗೊಳಿಸಿದ ಬಳಿಕವೇ ಕೊರೊನಾ ಲಸಿಕೆ ಸಿದ್ಧವಾಗುತ್ತದೆ. ಅಂತಿಮ ಹಂತದ ಕೊರೊನಾ ಲಸಿಕೆಯಲ್ಲಿ ಕರುವಿನ ಸೀರಮ್‌ ಇರುವುದಿಲ್ಲ ಎಂದು ಈ ಸಂಬಂಧ ಹರಡಿದ್ದ ವದಂತಿಗಳಿಗೆ ಕೇಂದ್ರ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ. ಕೊವ್ಯಾಕ್ಸಿನ್ ಲಸಿಕೆಯ ಸಿದ್ಧತೆಯ ಹಂತದಲ್ಲಿ ಮಾತ್ರ ಕರುಗಳ ಸಿರಮ್ ಬಳಕೆಯಾಗುತ್ತದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.


ಹಸು ಮತ್ತು ಇತರ ಪ್ರಾಣಿಗಳ ಸೀರಮ್ ಅನ್ನು ವೆರೊ ಕೋಶಗಳ ಬೆಳವಣಿಗೆಗೆ ವಿಶ್ವದ ಹಲವು ದೇಶಗಳು ಪೌಷ್ಟಿಕಾಂಶದ ವಸ್ತುವಾಗಿ (ಇನ್‌ಗ್ರೇಡಿಯಂಟ್‌) ಬಳಸುತ್ತಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.

ಇದನ್ನೂ ಓದಿ: ಕೊವ್ಯಾಕ್ಸಿನ್ ಲಸಿಕೆಯಲ್ಲಿ ಕರುವಿನ ಸೀರಮ್ ಬಳಸಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

(Ministry of Health and Family Welfare and Bharat Biotech have clarified that the COVAXIN vaccine is not made of calf serum)