ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ್​; ಅಕೌಂಟ್​ ಹೆಸರನ್ನು ಎಲೋನ್​ ಮಸ್ಕ್ ಎಂದು ಬದಲಿಸಿದ ಹ್ಯಾಕರ್ಸ್​ !

| Updated By: Lakshmi Hegde

Updated on: Jan 12, 2022 | 11:29 AM

ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿದೆ. ಹ್ಯಾಕರ್ಸ್​​ಗಳ ಕೈಯಿಂದ ವಾಪಸ್​ ಅಕೌಂಟ್​​ನ್ನು ಪಡೆದು, ಪ್ರೊಫೈಲ್​​ನ್ನು ಬದಲಿಸಿಕೊಂಡಿದೆ.

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ್​; ಅಕೌಂಟ್​ ಹೆಸರನ್ನು ಎಲೋನ್​ ಮಸ್ಕ್ ಎಂದು ಬದಲಿಸಿದ ಹ್ಯಾಕರ್ಸ್​ !
ಸಾಂಕೇತಿಕ ಚಿತ್ರ
Follow us on

ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್​ ಖಾತೆ(Twitter Account Of I&B Ministry)ಯನ್ನು ಇಂದು ಹ್ಯಾಕ್​ ಮಾಡಲಾಗಿತ್ತು. ಟ್ವಿಟರ್ ಅಕೌಂಟ್ ಹ್ಯಾಕ್​ ಮಾಡಿದ್ದ ಹ್ಯಾಕರ್ಸ್​ಗಳು, ಖಾತೆಯ ಹೆಸರನ್ನು ಎಲೋನ್​ ಮಸ್ಕ್​ (Elon Musk) ಎಂದು ಬದಲಿಸಿದ್ದರು. ಹಾಗೇ, ಗ್ರೇಟ್​ ಜಾಬ್​ (ಅದ್ಭುತ ಕೆಲಸ) ಎಂದೂ ಟ್ವೀಟ್ ಮಾಡಿದ್ದರು. ಇನ್ನು ಒಂದಿಷ್ಟು ಲಿಂಕ್​ಗಳನ್ನೆಲ್ಲ ಪೋಸ್ಟ್ ಮಾಡಿದ್ದರು. ಆದರೆ ಕೆಲವೇ ಹೊತ್ತಿನಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತನ್ನ ಟ್ವಿಟರ್ ಖಾತೆಯ ಮೇಲೆ ನಿಯಂತ್ರಣ ಹೊಂದಿದೆ. ಹ್ಯಾಕರ್ಸ್​​ಗಳ ಕೈಯಿಂದ ವಾಪಸ್​ ಅಕೌಂಟ್​​ನ್ನು ಪಡೆದು, ಪ್ರೊಫೈಲ್​​ನ್ನು ಬದಲಿಸಿಕೊಂಡಿದೆ. ಅಷ್ಟೇ ಅಲ್ಲ ಹ್ಯಾಕರ್ಸ್​ ಮಾಡಿದ್ದ ಟ್ವೀಟ್​ಗಳನ್ನೂ ಡಿಲೀಟ್​ ಮಾಡಿದೆ.  ಸದ್ಯ ಸಚಿವಾಲಯದ ಟ್ವಿಟರ್ ಖಾತೆಯನ್ನೀಗ ಭದ್ರಪಡಿಸಲಾಗಿದೆ. 

ಸರಿಯಾಗಿ ಒಂದು ತಿಂಗಳ ಹಿಂದೆ, ಅಂದರೆ 2021ರ ಡಿಸೆಂಬರ್​ 12ರಂದು ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್ ಆಗಿತ್ತು. ಪ್ರಧಾನಿ ನರೇಂದ್ರ ಮೋದಿ ಟ್ವಿಟರ್​ ಖಾತೆಯನ್ನು ಹ್ಯಾಕ್​ ಮಾಡಿದ್ದ ಕಿಡಿಗೇಡಿಗಳು ಅದರಲ್ಲಿ ಬಿಟ್​ಕಾಯಿನ್​ ಸಂಬಂಧಪಟ್ಟ ಟ್ವೀಟ್ ಗಳನ್ನು ಮಾಡಿದ್ದರು. ಬಿಟ್​ಕಾಯಿನ್​ಗಳನ್ನು ಸರ್ಕಾರವೇ ಅಧಿಕೃತವಾಗಿ ಖರೀದಿ ಮಾಡಿದೆ ಎಂದೂ ಹೇಳಿದ್ದರು. ನಂತರ ಕೆಲವೇ ಹೊತ್ತಲ್ಲಿ ಪ್ರಧಾನಿ ಟ್ವಿಟರ್​ ಖಾತೆ ಭದ್ರಗೊಂಡಿತ್ತು. ಬಳಿಕ ಟ್ವೀಟ್ ಮಾಡಿ ಸ್ಪಷ್ಟನೆ ಕೊಟ್ಟಿದ್ದ ಪ್ರಧಾನಮಂತ್ರಿ ಕಾರ್ಯಾಲಯ, ನರೇಂದ್ರ ಮೋದಿಯವರ ವೈಯಕ್ತಿಕ ಟ್ವಿಟರ್ ಖಾತೆ ಕೆಲಕಾಲ್​ ಹ್ಯಾಕ್ ಆಗಿತ್ತು. ಆ ಸಮಯದಲ್ಲಿ ಮಾಡಲಾದ ಟ್ವೀಟ್​ಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಹೇಳಿತ್ತು. ನಂತರ ಟ್ವೀಟ್​​ಗಳನ್ನು ಡಿಲೀಟ್​ ಕೂಡ ಮಾಡಲಾಗಿತ್ತು. ಇಂಡಿಯನ್ ಕೌನ್ಸಿಲ್ ಆಫ್ ವರ್ಲ್ಡ್ ಅಫೇರ್ಸ್ (ICWA), ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಮತ್ತು ಮನ್ ದೇಶಿ ಮಹಿಳಾ ಬ್ಯಾಂಕ್ (ಮೈಕ್ರೋ ಫೈನಾನ್ಸ್ ಬ್ಯಾಂಕ್) ಟ್ವಿಟರ್ ಖಾತೆಗಳನ್ನೂ ಹ್ಯಾಕ್ ಮಾಡಲಾಗಿತ್ತು. ಆಗಲೂ ಕೂಡ ಹ್ಯಾಕರ್ಸ್​​ ಟ್ವಿಟರ್​ ಖಾತೆಯ ಹೆಸರನ್ನು ಎಲೋನ್​ ಮಸ್ಕ್​ ಎಂದೇ ಬದಲಿಸಿದ್ದರು.

ಇಂದು ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಟ್ವಿಟರ್ ಖಾತೆ ಹ್ಯಾಕ್​ ಆದಾಗ ಮತ್ತು ಜನವರಿ 3ರಂದು ಹ್ಯಾಕ್​ ಆಗಿದ್ದ ಟ್ವಿಟರ್ ಅಕೌಂಟ್​ಗಳಲ್ಲಿ ಅಕ್ಷರಗಳ ಫಾಂಟ್ ಒಂದೇ ಇದೆ. ಹಾಗಾಗಿ ಈ ಖಾತೆಗಳನ್ನು ಹ್ಯಾಕ್​ ಮಾಡಿದವರು ಒಬ್ಬರೇ ಇರಬಹುದು ಎಂದು ಅಂದಾಜಿಸಲಾಗಿದೆ. ಇಂದು ಟ್ವಿಟರ್ ಸುರಕ್ಷಿತವಾದ ಬೆನ್ನಲ್ಲೇ ಟ್ವೀಟ್ ಮಾಡಿರುವ ಮಾಹಿತಿ ಮತ್ತು ಪ್ರಸಾರ ಸಚಿವಾಲಯ, ಇದೀಗ ಟ್ವಿಟರ್​ ಖಾತೆ ಸುರಕ್ಷಿತವಾಗಿದೆ ಎಂದು ಮಾಹಿತಿ ನೀಡಿದೆ.

ಇದನ್ನೂ ಓದಿ: ಪ್ರಧಾನಿ ಭದ್ರತಾ ಲೋಪ: ತನಿಖಾ ಸಮಿತಿ ಮುಖ್ಯಸ್ಥರನ್ನಾಗಿ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾರನ್ನು ನೇಮಕ ಮಾಡಿದ ಸುಪ್ರೀಂಕೋರ್ಟ್

Published On - 10:44 am, Wed, 12 January 22