ಪ್ರಧಾನಿ ಭದ್ರತಾ ಲೋಪ: ತನಿಖಾ ಸಮಿತಿ ಮುಖ್ಯಸ್ಥರನ್ನಾಗಿ ನಿವೃತ್ತ ನ್ಯಾಯಮೂರ್ತಿ ಇಂದು ಮಲ್ಹೋತ್ರಾರನ್ನು ನೇಮಕ ಮಾಡಿದ ಸುಪ್ರೀಂಕೋರ್ಟ್
ಪ್ರಧಾನಿ ಮೋದಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟಂತೆ ಲಾಯರ್ಸ್ ವೈಸ್ ಎಂಬ ಎನ್ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ನ ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ನಡೆಸುತ್ತಿದೆ.
ಪಂಜಾಬ್ನಲ್ಲಿ ಪ್ರಧಾನಿ ಭದ್ರತೆ ಲೋಪದ ತನಿಖೆ ನಡೆಸಲು ಸುಪ್ರೀಂಕೋರ್ಟ್ ರಚಿಸಿರುವ ತನಿಖಾ ಸಮಿತಿಯ ಮುಖಸ್ಥರನ್ನಾಗಿ ನ್ಯಾ. ಇಂದು ಮಲ್ಹೋತ್ರಾರನ್ನು ನೇಮಕಮಾಡಲಾಗಿದೆ. ಜನವರಿ 10ರಂದು ಈ ಬಗ್ಗೆ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಿಜೆಐ ಎನ್.ವಿ.ರಮಣ ಅವರ ನೇತೃತ್ವದ ಪೀಠ, ಸದ್ಯ ನಡೆಯುತ್ತಿರುವ ಎಲ್ಲ ತನಿಖೆಗಳನ್ನೂ ನಿಲ್ಲಿಸಿ ಎಂದು ಆದೇಶ ನೀಡಿತ್ತು. ಹಾಗೇ, ನಾವು 5 ಸದಸ್ಯರನ್ನೊಳಗೊಂಡ ತನಿಖಾ ಸಮಿತಿಯನ್ನು ರಚಿಸುತ್ತೇವೆ. ಅದಕ್ಕೆ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯೊಬ್ಬರು ಮುಖ್ಯಸ್ಥರಾಗಿರುತ್ತಾರೆ ಎಂದೂ ಹೇಳಿತ್ತು. ಇಂದು ನ್ಯಾಯಮೂರ್ತಿಯ ಹೆಸರನ್ನು ಘೋಷಣೆ ಮಾಡಿದ್ದು, ಅದರಂತೆ ನ್ಯಾ.ಇಂದು ಮಲ್ಹೋತ್ರಾ ನೇತೃತ್ವದಲ್ಲಿ ಪ್ರಧಾನಿ ಮೋದಿ ಭದ್ರತೆ ಲೋಪದ ತನಿಖೆ ನಡೆಯಲಿದೆ. ಹಾಗೇ, ಪ್ರಧಾನಿ ಭದ್ರತೆಯಲ್ಲಿ ಉಂಟಾದ ಲೋಪಕ್ಕೆ ಸಂಬಂಧಪಟ್ಟಂತೆ ಎದ್ದಿರುವ ಪಶ್ನೆಗಳಿಗೆ, ಏಕಪಕ್ಷೀಯವಾಗಿ ತನಿಖೆ ನಡೆಸಿ ಉತ್ತರ ನೀಡುವುದು ಸಮಂಜಸವಲ್ಲ, ಹೀಗಾಗಿ ನ್ಯಾಯಾಂಗದಲ್ಲಿ ತರಬೇತಿ ಪಡೆದವರು ಇದರ ತನಿಖೆ ನಡೆಸುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಅಭಿಪ್ರಾಯಪಟ್ಟಿದೆ.
ಪ್ರಧಾನಿ ಮೋದಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟ ತನಿಖೆ ನಡೆಸಲು ನಾವು ಸಮಿತಿ ರಚನೆ ಮಾಡುತ್ತೇವೆ. ಈ ಸಮಿತಿ ನಮಗೆ ವರದಿ ನೀಡಲಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಈ ತನಿಖಾ ಸಮಿತಿಯ ನೇತೃತ್ವ ವಹಿಸುತ್ತಾರೆ. ಚಂಡಿಗಢ್ನ ಡಿಜಿಪಿ (ಪೊಲೀಸ್ ಮಹಾನಿರ್ದೇಶಕರು), ರಾಷ್ಟ್ರೀಯ ತನಿಖಾದಳದ ಐಜಿ (IG Of NIA), ಪಂಜಾಬ್-ಹರ್ಯಾಣ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಮತ್ತು ಪಂಜಾಬ್ನ ಹೆಚ್ಚುವರಿ ಡಿಜಿಪಿ (ಭದ್ರತಾ ದಳ) ಈ ಸಮಿತಿಯಲ್ಲಿ ಇರುತ್ತಾರೆ ಎಂದು ಜನವರಿ 10ರಂದು ಸಿಜೆಐ ಎನ್.ವಿ.ರಮಣ ತಿಳಿಸಿದ್ದರು.
ಪ್ರಧಾನಿ ಮೋದಿ ಭದ್ರತೆ ಲೋಪಕ್ಕೆ ಸಂಬಂಧಪಟ್ಟಂತೆ ಲಾಯರ್ಸ್ ವೈಸ್ ಎಂಬ ಎನ್ಜಿಒ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಸುಪ್ರೀಂಕೋರ್ಟ್ನ ಸಿಜೆಐ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಪೀಠ ನಡೆಸುತ್ತಿದೆ. ಜನವರಿ 10 ರ ವಿಚಾರಣೆಯಂದು, ಕೇಂದ್ರ ಸರ್ಕಾರ ಪಂಜಾಬ್ನ ಭಟಿಂಡಾ ಎಸ್ಎಸ್ಪಿಗೆ ನೀಡಿದ್ದ ಶೋಕಾಸ್ ನೋಟಿಸ್ ಬಗ್ಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿತ್ತು. ಯಾವುದೇ ತನಿಖೆ, ವಿಚಾರಣೆ ನಡೆಸದೆ ಪಂಜಾಬ್ ಸರ್ಕಾರವನ್ನು ತಪ್ಪಿತಸ್ಥ ಎಂದು ಬಿಂಬಿಸುವಂತಿಲ್ಲ. ಈ ಪ್ರಕರಣದ ತನಿಖೆಗೆ ನಾವೇ ಸಮಿತಿ ರಚನೆ ಮಾಡುವುದಾಗಿ ಹೇಳಿತ್ತು. ಅದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿ ಪಂಜಾಬ್ಗೆ ಭೇಟಿ ಕೊಟ್ಟಾಗಿನ ಪ್ರಯಾಣದ ದಾಖಲೆಯನ್ನು ಸಂರಕ್ಷಿಸಿಡುವಂತೆ ಜನವರಿ 7ರಂದು ಪಂಜಾಬ್-ಹರ್ಯಾಣ ಹೈಕೋರ್ಟ್ನ ರೆಜಿಸ್ಟ್ರಾರ್ ಜನರಲ್ಗೆ ನಿರ್ದೇಶನ ನೀಡಿತ್ತು.
Published On - 11:00 am, Wed, 12 January 22