ಎಂಎನ್​​ಎಸ್​ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರಂಟ್​; ಜೂ.8ರೊಳಗೆ ಕೋರ್ಟ್​ಗೆ ಹಾಜರುಪಡಿಸಲು ಆದೇಶ

ಇತ್ತೀಚೆಗೆ ಕೂಡ ರಾಜ್​ ಠಾಕ್ರೆ  ಹನುಮಾನ್​ ಚಾಲೀಸಾ-ಆಜಾನ್ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದರು. ಮಸೀದಿಗಳಲ್ಲಿ ಆಜಾನ್​ ವೇಳೆ ಧ್ವನಿವರ್ಧಕ ಹಾಕುವುದು ಯಾಕೆ? ಆ ಲೌಡ್​ಸ್ಪೀಕರ್​​ಗಳನ್ನು ಮಹಾರಾಷ್ಟ್ರ ಸರ್ಕಾರ ಆದಷ್ಟು ಬೇಗನೇ ತೆಗೆಸಬೇಕು ಎಂದು ಹೇಳಿದ್ದರು.

ಎಂಎನ್​​ಎಸ್​ ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಜಾಮೀನು ರಹಿತ ವಾರಂಟ್​; ಜೂ.8ರೊಳಗೆ ಕೋರ್ಟ್​ಗೆ ಹಾಜರುಪಡಿಸಲು ಆದೇಶ
ರಾಜ್​ ಠಾಕ್ರೆ
Follow us
TV9 Web
| Updated By: Lakshmi Hegde

Updated on:May 03, 2022 | 5:37 PM

ಸಾಂಗ್ಲಿ: ಮಹಾರಾಷ್ಟ್ರ ನವನಿರ್ಮಾಣ ಸೇನಾ (MNS) ಮುಖ್ಯಸ್ಥ ರಾಜ್ ಠಾಕ್ರೆ ವಿರುದ್ಧ ಸಾಂಗ್ಲಿ ಜಿಲ್ಲೆಯ ಕೋರ್ಟ್​ವೊಂದು ಜಾಮೀನುರಹಿತ ವಾರೆಂಟ್ ಜಾರಿಗೊಳಿಸಿದೆ. ಸುಮಾರು 14 ವರ್ಷಗಳ ಹಿಂದಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈ ವಾರಂಟ್ ಜಾರಿ ಮಾಡಿ, ಕೋರ್ಟ್ ಆದೇಶ ಹೊರಡಿಸಿದೆ.  ಹಾಗೇ, ರಾಜ್​ ಠಾಕ್ರೆಯವರನ್ನು ಬಂಧಿಸಿ, ಕೋರ್ಟ್​ಗೆ ಹಾಜರುಪಡಿಸುವಂತೆ ನ್ಯಾಯಾಂಗ ಮ್ಯಾಜಿಸ್ಟ್ರೇಟ್  ಮುಂಬೈ ಪೊಲೀಸರಿಗೆ ಸೂಚಿಸಿದ್ದಾರೆ. 

2008ರಲ್ಲಿ ರಾಜ್​ ಠಾಕ್ರೆ ಅವರೊಂದು ಪ್ರಚೋದನಕಾರಿ ಭಾಷಣ ಮಾಡಿದ್ದರ ವಿರುದ್ಧ ಕೇಸ್​ ದಾಖಲಾಗಿದೆ.  ಈಗ ರಾಜ್​ ಠಾಕ್ರೆ ಮತ್ತು ಎಂಎನ್​ಎಸ್​ನ ಇನ್ನೊಬ್ಬ ನಾಯಕ ಶಿರೀಶ್​ ಪರ್ಕರ್​ ವಿರುದ್ಧ ವಾರಂಟ್​ ಜಾರಿ ಮಾಡಲಾಗಿದೆ. ಅವರಿಬ್ಬರನ್ನೂ ಕೋರ್ಟ್​ಗೆ ಹಾಜರುಪಡಿಸುವ ಜವಾಬ್ದಾರಿಯನ್ನು ಮುಂಬೈ ಪೊಲೀಸ್ ಆಯುಕ್ತ ಮತ್ತು ಖೇರ್ವಾಡಿ ಠಾಣೆ ಪೊಲೀಸರಿಗೆ ನೀಡಲಾಗಿದೆ. ಏಪ್ರಿಲ್​ 6ರಂದೇ ಕೋರ್ಟ್ ಈ ಆದೇಶ ಕೊಟ್ಟಿದ್ದರೂ, ಪೊಲೀಸರು ರಾಜ್ ಠಾಕ್ರೆಯವರನ್ನು ನ್ಯಾಯಾಲಯದ ಎದುರು ಕರೆತರಲು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ. ಜೂ.8ರೊಳಗೆ ಅವರಿಬ್ಬರನ್ನೂ ಕೋರ್ಟ್​ಗೆ ಕರೆತರಬೇಕು ಎಂದು ಕೋರ್ಟ್​ ಹೇಳಿದೆ.

ಇತ್ತೀಚೆಗೆ ಕೂಡ ರಾಜ್​ ಠಾಕ್ರೆ  ಹನುಮಾನ್​ ಚಾಲೀಸಾ-ಆಜಾನ್ ವಿಚಾರದಲ್ಲಿ ವಿವಾದ ಸೃಷ್ಟಿಸಿದ್ದರು. ಮಸೀದಿಗಳಲ್ಲಿ ಆಜಾನ್​ ವೇಳೆ ಧ್ವನಿವರ್ಧಕ ಹಾಕುವುದು ಯಾಕೆ? ಆ ಲೌಡ್​ಸ್ಪೀಕರ್​​ಗಳನ್ನು ಮಹಾರಾಷ್ಟ್ರ ಸರ್ಕಾರ ಆದಷ್ಟು ಬೇಗನೇ ತೆಗೆಸಬೇಕು. ಹಾಗೊಮ್ಮೆ ತೆಗೆಸದೆ ಇದ್ದರೆ, ಮಸೀದಿಯ ಹೊರಗೆ ಧ್ವನಿವರ್ಧಕ ಹಾಕಿ ಹನುಮಾನ್​ ಚಾಲೀಸಾ ಪಠಿಸುವ ಎಚ್ಚರಿಕೆಯನ್ನೂ ನೀಡಿದ್ದರು. ಮಹಾರಾಷ್ಟ್ರ ಸರ್ಕಾರದ ಆಡಳಿತವನ್ನು, ಮುಖ್ಯಮಂತ್ರಿ ಉದ್ಧವ್​ ಠಾಕ್ರೆಯನ್ನು ಟೀಕಿಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಧಾರ್ಮಿಕ ಪ್ರದೇಶದಲ್ಲಿ ಅಕ್ರಮವಾಗಿ ಹಾಕಿದ್ದ ಸಾವಿರಾರು ಮೈಕ್​​ಗಳನ್ನು ಅಲ್ಲಿನ ಸರ್ಕಾರ ತೆಗೆಸಿದ ಬೆನ್ನಲ್ಲೇ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ರನ್ನು ಹೊಗಳಿದ್ದರು. ನಮ್ಮಲ್ಲಿ ಯಾರೂ ಯೋಗಿಗಳು ಇಲ್ಲ ಎಂದು ಹೇಳುವ ಮೂಲಕ ಉದ್ಧವ್ ಠಾಕ್ರೆಗೆ ಟಾಂಗ್​ ಕೊಟ್ಟಿದ್ದರು.

ಇದನ್ನೂ ಓದಿ: ಫೋಟೋ ಬೇಕೆಂದಾದರೆ ಹತ್ತಿರ ನಿಂತ್ಕೊಳ್ಳಮ್ಮ ಅನ್ನುತ್ತಾ ಯುವತಿಯನ್ನು ಸಮೀಪಕ್ಕೆ ಎಳೆದುಕೊಂಡರು ಯಡಿಯೂರಪ್ಪ!

Published On - 5:35 pm, Tue, 3 May 22